ಅಮುಲ್ ಜೊತೆ ಕೆಎಂಎಫ್ ವಿಲೀನಗೊಳಿಸುವ ಪ್ರಸ್ತಾಪ ಇಲ್ಲ: ಅಧ್ಯಕ್ಷ
ಬೆಂಗಳೂರು, ಏಪ್ರಿಲ್ 12: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಮಾರುಕಟ್ಟೆಯನ್ನು ವಿಸ್ತರಿಸಲು ಕೆಎಂಎಫ್ ಮತ್ತು ಅಮುಲ್ ಕೈಜೋಡಿಸಬಹುದು ಎಂದು ಮಾತ್ರ ಅಭಿಪ್ರಾಯಪಟ್ಟಿದ್ದಾರೆ. ಎರಡು ಸಹಕಾರಿ ಸಂಘಗಳ ವಿಲೀನಕ್ಕೆ ಅವರು ಸಲಹೆ ನೀಡಿಲ್ಲ. ವಿರೋಧ ಪಕ್ಷಗಳು ಚುನಾವಣಾ ಸಮಯದಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿವೆ ಎಂದು ಬಾಲಚಂದ್ರ ಹೇಳಿದರು.

ಬೆಂಗಳೂರಿನಲ್ಲಿ ದಶಕಗಳಿಂದ 10ಕ್ಕೂ ಹೆಚ್ಚು ಬ್ರಾಂಡ್‌ಗಳ ಹಾಲು ಮಾರಾಟವಾಗುತ್ತಿದೆ. ಆದರೆ, ನಂದಿನಿ ಗುಣಮಟ್ಟದ ಹಾಲನ್ನು ಕೈಗೆಟಕುವ ದರದಲ್ಲಿ ಯಾರೂ ಪೂರೈಸಲು ಸಾಧ್ಯವಿಲ್ಲ. ರಾಜ್ಯದ ಸುಮಾರು 50 ಲಕ್ಷ ಮತದಾರರಿಗೆ ಕೆಎಂಎಫ್ ಪರೋಕ್ಷವಾಗಿ ನಂಟು ಹೊಂದಿದ್ದು, ಪ್ರತಿಪಕ್ಷಗಳು ಬಿಜೆಪಿಯ ಹೆಸರು ಕೆಡಿಸಲು ಕೊಳಕು ರಾಜಕಾರಣ ಮಾಡುತ್ತಿವೆ ಎಂದು ಬಾಲಚಂದ್ರ ಹೇಳಿದರು.
ಕೆಎಂಎಫ್‌ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ 19 ನಿರ್ದೇಶಕರಿದ್ದಾರೆ. ಆಡಳಿತ ಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಕೇಂದ್ರ ವಿಲೀನಕ್ಕೆ ಮುಂದಾಗಿದ್ದರೂ ನಾನು ವಿರೋಧಿಸುತ್ತೇನೆ. ನಾನು ಕರ್ನಾಟಕದ ರೈತರನ್ನು ಬೆಂಬಲಿಸುತ್ತೇನೆ ಎಂದು ಅವರು ಹೇಳಿದರು. ಕರ್ನಾಟಕದ ಮಾರುಕಟ್ಟೆಗಳಲ್ಲಿ ಅಮೂಲ್ ಮಾರಾಟವನ್ನು ವಿರೋಧಿಸಿ ಈಗಾಗಲೇ ಕನ್ನಡಿಗರು ಆಕ್ರೋಶವನ್ನು ವ್ಯಕ್ಯಪಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬೆಂಗಳೂರಿನಲ್ಲಿ ಅಮೂಲ್ ಹಾಲು ಸೇರಿದಂತೆ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಅಂಗಡಿಗಳನ್ನು ಧ್ವಂಸ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಬಳಿಕ ಅಮೂಲ್ ಎಂಡಿ ಅವರು ಕರ್ನಾಟಕದಲ್ಲಿ ಅಮೂಲ್ ನಂದಿನಿ ಜೊತೆ ಸ್ಪರ್ಧೆಗೆ ಇಳಿಯುತ್ತಿಲ್ಲ ಎಂದು ಹೇಳಿದ್ದರು.

ಆದರೆ ಇದಕ್ಕೂ ಮುನ್ನ ಅಮೂಲ್ ಮಾರಾಟ ಸಮರ್ಥಿಸಿಕೊಂಡಿದ್ದ ಶಾಸಕ ಸಿಟಿ ರವಿ, ತೇಜಸ್ವಿ ಸೂರ್ಯ ಮತ್ತಿತರ ವಿರುದ್ಧ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ಅಮೂಲ್ ಮಾರಾಟವನ್ನು ವಿರೋಧಿಸಿತ್ತು. ರಾಜ್ಯಾದ್ಯಂತ ಆಕ್ರೋಶವನ್ನು ಗಮನಿಸಿದ್ದ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಕರ್ನಾಟಕದಲ್ಲಿ ಅಮುಲ್ ಪ್ರವೇಶದ ಬಗ್ಗೆ ಕಾಂಗ್ರೆಸ್ ತಪ್ಪು ಮಾಹಿತಿಯನ್ನು ಪ್ರಚಾರ ಮಾಡಿದೆ. ಗುಜಾರತ್ ರಾಜ್ಯದ ಅಮೂಲ್ ಕರ್ನಾಟದ ಮಾರುಕಟ್ಟೆಗೆ ಬರುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.
"ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ. ಅಮುಲ್ ಮತ್ತು ಕೆಎಂಎಫ್ ಎರಡೂ ತಮ್ಮ ಉತ್ಪನ್ನಗಳನ್ನು ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡುತ್ತವೆ. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೆಎಂಎಫ್ ವಹಿವಾಟು (ರೂ) 10,000 ಕೋಟಿಗಳಷ್ಟು ಹೆಚ್ಚಾಗಿದೆ. 2022ರಲ್ಲಿ ವಹಿವಾಟು 25,000 ಕೋಟಿ ರೂ. ಇತ್ತು. ಅದರಲ್ಲಿ 20,000 ಕೋಟಿ ರೂ. ಕರ್ನಾಟಕದ ರೈತರಿಗೆ ವಾಪಸ್ ಬಂದಿದೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದರು.
KMF ದೇಶದ ಎರಡನೇ ಅತಿದೊಡ್ಡ ಹಾಲಿನ ಸಹಕಾರಿ ಸಂಸ್ಥೆಯಾಗಿದ್ದು, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ಡಿಪೋಗಳನ್ನು ಹೊಂದಿದೆ. ಕೆಎಂಎಫ್ ಉತ್ಪನ್ನಗಳಲ್ಲಿ ಒಟ್ಟು ಶೇಕಡಾ 15 ರಷ್ಟು ಕರ್ನಾಟಕದಿಂದ ಹೊರಗೆ ಮಾರಾಟವಾಗುತ್ತದೆ. ನಂದಿನಿಯನ್ನು ಸಿಂಗಾಪುರ, ಯುಎಇ ಮತ್ತು ಇತರ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಅಮುಲ್ ಮತ್ತು ಕೆಎಂಎಫ್ ವಿಲೀನಗೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದರು.












Click it and Unblock the Notifications