BY Vijayendra: ವಿಜಯೇಂದ್ರಗೆ ಹೈಕಮಾಂಡ್ ಬೆಂಬಲ, ಯತ್ನಾಳ್ ಬಣಕ್ಕೆ ಹಿನ್ನಡೆ
ಬೆಂಗಳೂರು, ಡಿಸೆಂಬರ್ 08: ಕರ್ನಾಟಕದ ಬಿಜೆಪಿ ಬಣ ರಾಜಕೀಯಕ್ಕೆ ಸದ್ಯಕ್ಕೆ ಪೂರ್ಣ ವಿರಾಮ ಬೀಳುವ ಸಾಧ್ಯತೆ ಕಡಿಮೆ ಇದೆ. ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾದ ಪ್ರತಿಪಕ್ಷಗಳ ನಾಯಕರು ತಮ್ಮ ಬಣ ರಾಜಕೀಯದಲ್ಲೇ ಬ್ಯುಸಿಯಾಗಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬೆಂಬಲಕ್ಕೆ ನಿಂತಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ಹಿನ್ನಡೆಯಾಗಿದೆ.
ಬಿಜೆಪಿ ರಾಜ್ಯ ಕಛೇರಿ ಜಗನ್ನಾಥ ಭವನದಲ್ಲಿ ಶನಿವಾರ ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಡಿ. ವಿ. ಸದಾನಂದ ಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಮುಂತಾದ ನಾಯಕರು ಪಾಲ್ಗೊಂಡಿದ್ದರು.

ನಾಯಕತ್ವ ಬದಲಾವಣೆ ಇಲ್ಲ: ಸುಮಾರು ಒಂದೂವರೆ ಗಂಟೆ ನಡೆದ ಸಭೆಯ ಬಳಿಕ ಮಾತನಾಡಿದ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್, "ಬಿಜೆಪಿಯ ರಾಜ್ಯ ನಾಯಕತ್ವದ ಬದಲಾವಣೆ ಪ್ರಶ್ನೆ ಈಗ ಇಲ್ಲ. ವರಿಷ್ಠರಿಗೆ ಮತ್ತು ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಬದಲಾವಣೆಯ ಅಧಿಕಾರವಿದೆ. ಯಾರೂ ಹೇಳಿದರು ಎಂದು ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಳಿಕ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಇತರರ ಬಣ ಬಿ. ವೈ. ವಿಜಯೇಂದ್ರ, ಬಿ. ಎಸ್. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ವಾಗ್ದಾಳಿಯನ್ನು ನಡೆಸುತ್ತಿದೆ. ಅಲ್ಲದೇ ವಿಜಯೇಂದ್ರ ಪದಚ್ಯುತಿಗಾಗಿ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದೆ.
ಇದಕ್ಕೆ ಪ್ರತಿರೋಧ ಎಂಬಂತೆ ಬಿ. ವೈ. ವಿಜಯೇಂದ್ರ ಬೆಂಬಲಕ್ಕೆ ಹಲವು ನಾಯಕರು ನಿಂತಿದ್ದಾರೆ. ಮಾಜಿ ಶಾಸಕರು, ಸಚಿವರು ಯತ್ನಾಳ್ ಸೇರಿದಂತೆ ಇತರರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಹೈಕಮಾಂಡ್ ನಾಯಕರನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ವಿಜಯೇಂದ್ರ ಬದಲಾವಣೆ ಇಲ್ಲ ಎಂದು ವರಿಷ್ಠರು ಹೇಳಿದ್ದಾರೆ. ಆದ್ದರಿಂದ ಯತ್ನಾಳ್ ಬಣದ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಬಿ. ವೈ. ವಿಜಯೇಂದ್ರ, 'ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾದ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ರಾಜ್ಯ ಉಪಾಧ್ಯಕ್ಷರಾದಎನ್. ಮಹೇಶ್ ಅವರ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ" ಎಂದರು.
"ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಸಕರಾದ ಎಸ್. ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ವಿರುದ್ಧ ಕ್ರಮ ಕೈಗೊಳ್ಳಲು ಹೈಕಮಾಂಡ್ ನಾಯಕರಿಗೆ ಮನವಿ ಮಾಡಲಾಗಿದೆ ಮತ್ತು ಪಕ್ಷದಲ್ಲಿ ಅಶಿಸ್ತಿನಿಂದ ವರ್ತಿಸುತ್ತಿರುವ ನಾಯಕರಿಗೆ ಕಡಿವಾಣ ಹಾಕುವಂತೆ ಮನವಿ ಮಾಡಲಾಗಿದೆ" ಎಂದು ಹೇಳಿದರು.
ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪಕ್ಷದ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿ ಉತ್ತರವನ್ನು ಕೇಳಲಾಗಿದೆ. ತಮ್ಮ ಬಣದ ನಾಯಕರ ಜೊತೆ ದೆಹಲಿಗೆ ತೆರಳಿದ್ದ ಯತ್ನಾಳ್ ವರಿಷ್ಠರನ್ನು ಭೇಟಿ ಮಾಡಿ, ವಿವರಣೆ ಕೊಟ್ಟಿದ್ದಾರೆ. ಯಡಿಯೂರಪ್ಪ ಕುಟುಂಬದ ವಿರುದ್ಧ ದೂರು ಕೊಟ್ಟಿದ್ದಾರೆ.
ಸುಮಾರು ಎರಡು ತಿಂಗಳಿನಿಂದ ಬಿಜೆಪಿ ಬಣ ರಾಜಕೀಯ ಜೋರಾಗಿದ್ದರೂ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ರಾಜ್ಯಕ್ಕೆ ಆಗಮಿಸಿರಲಿಲ್ಲ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರಿಂದ ಬಿಜೆಪಿ ಹೈಕಮಾಂಡ್ ನಾಯಕರು ವರದಿಯನ್ನು ತರಿಸಿಕೊಂಡಿದ್ದರು.
ಶನಿವಾರ ರಾಜ್ಯಕ್ಕೆ ಆಗಮಿಸಿದ್ದ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಪಕ್ಷದ ಕಛೇರಿಯಲ್ಲಿ ಸಭೆಯನ್ನು ನಡೆಸಿದರು. ಈ ಸಭೆಗೂ ಮುನ್ನ ವಿಜಯೇಂದ್ರ ಬಣದ ಸದಸ್ಯರು ಅವರನ್ನು ಭೇಟಿ ಮಾಡಿದ್ದರು. ಯತ್ನಾಳ್ ಮತ್ತು ಇತರರ ವಿರುದ್ಧ ದೂರು ಸಲ್ಲಿಕೆ ಮಾಡಿದ್ದರು. ಮುಂದಿನ ಚುನಾವಣೆ ತನಕ ವಿಜಯೇಂದ್ರ ಬದಲಾವಣೆ ಮಾಡಬಾರದು ಎಂದು ಮನವಿ ಸಲ್ಲಿಸಿದ್ದರು.












Click it and Unblock the Notifications