ಏ.30ರಂದು ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸಂಚಾರವಿಲ್ಲ
ಬೆಂಗಳೂರು, ಏ. 11 : 'ರಸ್ತೆ ಸಾರಿಗೆ ಮತ್ತು ಸುರಕ್ಷತಾ ವಿಧೇಯಕ-2015'ದನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಏ.30ರಂದು ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಮುಷ್ಕರಕ್ಕೆ ಕರೆ ನೀಡಿದೆ. ಆದ್ದರಿಂದ ಬಸ್ಸುಗಳು ರಸ್ತೆಗಿಳಿಯುವುದಿಲ್ಲ.
ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಐಟಿಯು ಗೌರವಾಧ್ಯಕ್ಷ ಎಸ್. ಪ್ರಸನ್ನಕುಮಾರ್ ಮುಷ್ಕರದ ಬಗ್ಗೆ ಮಾಹಿತಿ ನೀಡಿದರು. ದೇಶಾದ್ಯಂತ ವಿವಿಧ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಕರ್ನಾಟಕದಲ್ಲಿಯೂ ಬಸ್ ಸಂಚಾರ ಸ್ಥಗಿತಗೊಳಿಸಿ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು. [ಏ.18ರಂದು ಕರ್ನಾಟಕ ಬಂದ್]

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ 'ರಸ್ತೆ ಸಾರಿಗೆ ಮತ್ತು ಸುರಕ್ಷತಾ ವಿಧೇಯಕ-2015' ಚಾಲಕರ ಪಾಲಿಗೆ ಮಾರಕವಾಗಿದೆ ಎಂದು ಹೇಳಿದ ಪ್ರಸನ್ನ ಕುಮಾರ್, ವಿಧೇಯಕ ಜಾರಿ ವಿರೋಧಿಸಿ ಏ.30ರ ಗುರುವಾರ ದೇಶಾದ್ಯಂತ ಸಾರಿಗೆ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. [5,266 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಎಸ್ಆರ್ ಟಿಸಿ]
ಬಸ್ ಸಂಚಾರವಿಲ್ಲ : ಕರ್ನಾಟಕದ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಸ್ಥೆಗಳ ಸುಮಾರು 1 ಲಕ್ಷ ನೌಕರರು ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದಾರೆ. ಬಸ್ ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಚಾಲಕರು ಮತ್ತು ನಿರ್ವಾಹಕರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಸನ್ನ ಕುಮಾರ್ ಹೇಳಿದರು.
ತಜ್ಞರೊಂದಿಗೆ ಚರ್ಚೆ ನಡೆಸಿ : ವಿಧೇಯಕದ ಕರಡು ಪ್ರತಿಯ ಪ್ರಕಾರ ಚಾಲಕರ ವಾಹನವನ್ನು ಓವರ್ ಟೇಕ್ ಮಾಡುವುದು ಸೇರಿದಂತೆ ಸಣ್ಣ ತಪ್ಪುಗಳನ್ನು ಮಾಡಿದರೂ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಈ ವಿಧೇಯಕ ಜಾರಿಗೆ ಬಂದರೆ ಚಾಲಕರು ಜೈಲು ಪಾಲಾಗುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಾರಿಗೆ ತಜ್ಞರೊಂದಿಗೆ ಚರ್ಚಿಸದೆ ಇಂತಹ ವಿಧೇಯಕವನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿ ಚಾಲಕರು ಮತ್ತು ನಿರ್ವಾಹಕರು ಪ್ರತಿಭಟನೆ ನಡೆಸಲಿದ್ದಾರೆ. ವಿವಿಧ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಲಿವೆ ಎಂದು ತಿಳಿಸಿದರು.












Click it and Unblock the Notifications