Vinaya Hegde: ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಎನ್ ವಿನಯ ಹೆಗ್ಡೆ ನಿಧನ: ರಾಜಕೀಯ ಗಣ್ಯರ ಸಂತಾಪ
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದ ಡಾ. ಎನ್.ವಿನಯ ಹೆಗ್ಡೆ ಇಂದು ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರ. ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಅವರು ಗುರುತಿಸಿಕೊಂಡಿರುವ ವಿನಯ ಹೆಗ್ಡೆ ಅವರು ಪ್ರಸ್ತುತ ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು.
ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಎನ್.ವಿನಯ ಹೆಗ್ಡೆ ಅವರು, ರಾಜ್ಯೋತ್ಸವ ಪ್ರಶಸ್ತಿ ಮತ್ತು ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದವರು. 1979ರಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿದರು. ಇಂದು ನಿಟ್ಟೆ ಶಿಕ್ಷಣ ಸಂಸ್ಥೆಗಳು ಮಂಗಳೂರು, ಬೆಂಗಳೂರು ಮತ್ತು ನಿಟ್ಟೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದಿವೆ. ಇದರಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ದಂತವೈದ್ಯಕೀಯ, ಫಾರ್ಮಸಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳು ಸೇರಿವೆ.

ಕರಾವಳಿ ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೂರದೃಷ್ಟಿಯ ನಾಯಕರಾಗಿದ್ದರು. ಪ್ರಸ್ತುತ ಅವರು ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಲೆಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಲೆಮಿನಾ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಇದು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಪ್ರಮುಖ ಸಂಸ್ಥೆಯಾಗಿದೆ.
ನಿಟ್ಟೆ ವಿನಯ ಹೆಗ್ಡೆ ನಿಧನಕ್ಕೆ ಎಂ ಬಿ ಪಾಟೀಲ ಸಂತಾಪ
ನಿಟ್ಟೆ ಶಿಕ್ಷಣ ಸಮೂಹದ ಸಂಸ್ಥಾಪಕ, ಉದ್ಯಮಿ, ಕೊಡುಗೈ ದಾನಿ ಮತ್ತು ಗ್ರಾಮೀಣ ಅಭಿವೃದ್ಧಿಯ ಹರಿಕಾರ ನಿಟ್ಟೆ ವಿನಯ ಹೆಗ್ಡೆ ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ತಮಗೆ ಅತ್ಯುತ್ತಮ ಸ್ನೇಹಿತರೂ ಮಾರ್ಗದರ್ಶಿಗಳೂ ಆಗಿದ್ದ ವಿನಯ ಹೆಗ್ಡೆ ಅವರ ನಿಧನದಿಂದ ಈ ಸಮಾಜವು ತನ್ನ ನಿರ್ಮಾತೃಗಳೊಬ್ಬರನ್ನು ಕಳೆದುಕೊಂಡಂತಾಗಿದೆ. ಜತೆಗೆ ಇದು ವೈಯಕ್ತಿಕವಾಗಿ ತಮಗೂ ದೊಡ್ಡ ನಷ್ಟವಾಗಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ.
ಹೆಗ್ಡೆ ಅವರು ಅಪಾರ ದೂರದೃಷ್ಟಿ ಇದ್ದ ಉದ್ಯಮಶೀಲರಾಗಿದ್ದರು. ಹೀಗಾಗಿ ಅವರು ನಿಟ್ಟೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಶಿಕ್ಷಣ ಕಾಶಿಯನ್ನೇ ನಿರ್ಮಿಸಿದರು. ಅಲ್ಲದೆ ಗ್ರಾಮೀಣಾಭಿವೃದ್ಧಿಯ ಭಾಗವಾಗಿ 24 ಆಸ್ಪತ್ರೆಗಳನ್ನು ನಿರ್ಮಿಸಿ, ಸಮಾಜಸೇವೆಯಲ್ಲಿ ನಿರತರಾಗಿದ್ದರು. ಅವರ ಸಿದ್ಧಿ ಮತ್ತು ಸಾಧನೆಗಳು ಸಮಾಜದಲ್ಲಿ ಮೇಲ್ಪಂಕ್ತಿಯಾಗಿವೆ ಎಂದು ಅವರು ಸ್ಮರಿಸಿದ್ದಾರೆ. ಹೆಗ್ಡೆ ಅವರ ನಿಧನದಿಂದ ಉಂಟಾಗಿರುವ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನು ದೇವರು ನಿಟ್ಟೆ ಪರಿವಾರಕ್ಕೆ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಪಾಟೀಲ ಪ್ರಾರ್ಥಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಸಂತಾಪ
ದೂರದೃಷ್ಟಿಯ ನಾಯಕ ಮತ್ತು ಶಿಕ್ಷಣ ತಜ್ಞ, ನಿಟ್ಟೆಯ ಎನ್. ವಿನಯ ಹೆಗ್ಡೆಯವರ ನಿಧನದಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಮ್ಮ ಸಂತಾಪ ಸೂಚನಾ ಸಂದೇಶದಲ್ಲಿ ತಿಳಿಸಿದ್ದಾರೆ. ಎನ್.ವಿನಯ ಹೆಗ್ಡೆ ಅವರು ತಮ್ಮ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯೊಂದಿಗೆ ನಿಟ್ಟೆ ಡೀಮ್ಡ್ ಟು ಬೀ ಯೂನಿವರ್ಸಿಟಿ ಸೇರಿದಂತೆ ಹಲವು ಸಂಸ್ಥೆಗಳನ್ನು ಬೆಳೆಸಿದವರು. ಬಡ ವಿದ್ಯಾರ್ಥಿಗಳಿಗೆ, ಮಹಿಳೆಯರ ಸಬಲೀಕರಣಕ್ಕೆ ಹಾಗೂ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದರು. 24 ಗ್ರಾಮೀಣ ಆಸ್ಪತ್ರೆಗಳನ್ನು ನಡೆಸುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಉದ್ಯೋಗ ಪತ್ರ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬ, ಅಭಿಮಾನಿಗಳಿಗೆ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇನ್ನೂ ಶಾಸಕರಾದ ಸುನೀಲ್ ಕುಮಾರ್ ಅವರು ಸಂತಾಪ ಸೂಚಿಸಿದ್ದು, ಶಿಕ್ಷಣವೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿದು ಸಾವಿರಾರು ಮಂದಿಯ ಬಾಳಲ್ಲಿ ಬೆಳಕಾದವರು, ಕಾರ್ಕಳದ ನಿಟ್ಟೆ ಗ್ರಾಮದ ಹೆಸರನ್ನು ವಿಶ್ವದಾದ್ಯಂತ ಹರಡುವಂತೆ ಮಾಡಿದ ಶ್ರೀ ಎನ್. ವಿನಯ್ ಹೆಗ್ಡೆ ಯವರು ಇನ್ನಿಲ್ಲ ಎಂಬುದು ಸುದ್ದಿ ತಿಳಿದು ಅತ್ಯಂತ ಆಘಾತವಾಯಿತು.
ನಿಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ನಿಟ್ಟೆ ಯೂನಿವರ್ಸಿಟಿಯ ಕುಲಪತಿಗಳು, ಲೆಮಿನಾ ಇಂಡಸ್ಟ್ರಿಯ ಸ್ಥಾಪಕರಾಗಿ ಸಾವಿರಾರು ಮಂದಿಗೆ ಅನ್ನ ನೀಡಿದ ಅನ್ನದಾತ, ಆರೋಗ್ಯ, ಧಾರ್ಮಿಕ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಕೊಡುಗೈ ದಾನಿಯಾಗಿ ಬದುಕಿದ್ದ ಧೀಮಂತ ವ್ಯಕ್ತಿ ಶ್ರೀಯುತರು. ವಿನಯ ಹೆಗ್ಡೆ ಅವರ ನಿಧನವು ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಸೇವೆ ಮತ್ತು ಸಾಧನೆಗಳು ಸದಾ ಸ್ಮರಣೀಯವಾಗಿವೆ. ಅವರ ಆದರ್ಶ ಜೀವನ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಲಿದೆ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಕುಟುಂಬವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಕಾರ್ಕಳ ಶಾಸಕರು, ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications