ಚಿತ್ರದುರ್ಗ - ದಾವಣಗೆರೆ ನಡುವೆ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ಘೋಷಿಸಿದ ಸಚಿವ ನಿತಿನ್ ಗಡ್ಕರಿ
ಬೆಂಗಳೂರು, ಜ. 09: ಸೋಮವಾರ ಚಿತ್ರದುರ್ಗ ಮತ್ತು ದಾವಣಗೆರೆ ನಡುವೆ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಈ ಬಗ್ಗೆ ಚಿತ್ರಗಳ ಸಮೇತ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಕರ್ನಾಟಕದ ಜನರಿಗೆ ಆಧುನಿಕ ರಸ್ತೆ ಸಂಪರ್ಕ ಸಿಗಲಿದೆ ಎಂದು ಹೇಳಿದ್ದಾರೆ.
ಎರಡೂ ಪಟ್ಟಣಗಳ ನಡುವಿನ ಸಂಪರ್ಕವನ್ನು ವೇಗಗೊಳಿಸಲು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಚಿತ್ರದುರ್ಗ ಮತ್ತು ದಾವಣಗೆರೆ ನಡುವೆ ಹೆದ್ದಾರಿಯನ್ನು ನಿರ್ಮಿಸಲಿದೆ.

ತಮ್ಮ ಟ್ವಿಟರ್‌ನಲ್ಲಿ, "ಕರ್ನಾಟಕ ಜನರಿಗೆ ಆಧುನಿಕ - ರಸ್ತೆ ಸಂಪರ್ಕದ ಒದಗಿಸಲು, ಎನ್‌ಎಚ್‌ಎಐ ಚಿತ್ರದುರ್ಗದಿಂದ ದಾವಣಗೆರೆಗೆ ಚಿತ್ರದುರ್ಗ ಬೈಪಾಸ್ ಸೇರಿದಂತೆ ಆರು ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಿದೆ" ಎಂದಿದ್ದಾರೆ.
📌 Adding an immense segment in modern-road connectivity for Karnataka people, NHAI is constructing a 6-lane wide section from Chitradurga to Davangere including Chitradurga Bypass. #PragatiKaHighway #GatiShakti pic.twitter.com/k2Qs71trKJ
— Nitin Gadkari (@nitin_gadkari) January 9, 2023
"72 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವನ್ನು ಸುಸ್ಥಿರ ವಿಧಾನಗಳನ್ನು ಬಳಸಿ 1, 400 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾಗುತ್ತದೆ. ಸುಸ್ಥಿರ ರಸ್ತೆಗಳನ್ನು ನಿರ್ಮಿಸುವ ಮತ್ತು ರಸ್ತೆ ನಿರ್ಮಾಣದಲ್ಲಿ ಪರ್ಯಾಯ ವಸ್ತುಗಳ ಬಳಕೆಯನ್ನು ಉತ್ತೇಜಿಸುವ ನಮ್ಮ ಪ್ರಯತ್ನಗಳಲ್ಲಿ, ಈ ಯೋಜನೆಯು ಸರ್ವೀಸ್ ರಸ್ತೆಗಳಲ್ಲಿ ಬಿಟುಮಿನಸ್ ಕಾಂಕ್ರೀಟ್ (bituminous concrete) ಮತ್ತು ಮಿಲ್ಲಿಂಗ್ ವಸ್ತುಗಳಲ್ಲಿ ಪ್ಲಾಸ್ಟಿಕ್ ಅನ್ನು ಬಳಸಿದೆ, ಇದು ಭವಿಷ್ಯದಲ್ಲಿ ರಸ್ತೆಯ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
"ಈ ಹೆದ್ದಾರಿ ಯೋಜನೆಯು ಚಿತ್ರದುರ್ಗ ಮತ್ತು ದಾವಣಗೆರೆ ನಡುವೆ ಮಾತ್ರವಲ್ಲದೆ ಬೆಂಗಳೂರು ಮತ್ತು ಮುಂಬೈ ನಡುವಿನ ರಸ್ತೆ ಸಾರಿಗೆಯನ್ನು ಅಭಿವೃದ್ಧಿ ಪಡಿಸುತ್ತದೆ. ಏಕೆಂದರೆ ಹೆದ್ದಾರಿ ಎರಡೂ ರಾಜಧಾನಿ ನಗರಗಳನ್ನು ಭಾಗಶಃ ಸಂಪರ್ಕಿಸುತ್ತದೆ. ಈ ಯೋಜನೆಯು ಚಿತ್ರದುರ್ಗದಿಂದ ದಾವಣಗೆರೆಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಐಟಿ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈ ನಡುವಿನ ಸಾರಿಗೆಯನ್ನು ಸುಧಾರಿಸುತ್ತದೆ" ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
📌 Again, the project will reduce travel time from Chitradurga to Davangere, and also improve transportation between the IT capital Bangalore and the Financial capital Mumbai. #PragatiKaHighway #GatiShakti pic.twitter.com/1n3bbS3j55
— Nitin Gadkari (@nitin_gadkari) January 9, 2023
ಇನ್ನು, ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ-75 ರ ಅಡಿಯಲ್ಲಿ ಬರುವ ನೆಲಮಂಗಲ ಮತ್ತು ದೇವಿಹಳ್ಳಿ ನಡುವೆ ಹೆದ್ದಾರಿ ನಿರ್ಮಾಣವನ್ನು ಘೋಷಿಸಿದೆ.
ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಚಿವ ನಿತಿನ್ ಗಡ್ಕರಿ ಬೆಂಗಳೂರು - ಚೆನ್ನೈ ಹೆದ್ದಾರಿ ಮತ್ತು ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಿದ್ದರು. 10 ಪಥಗಳ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ಫೆಬ್ರವರಿಯಲ್ಲಿ ಜನರ ಬಳಕೆಗೆ ಮುಕ್ತವಾಗಲಿದೆ ಎಂದು ಈ ವೇಳೆ ಘೋಷಿಸಿದ್ದರು.











Click it and Unblock the Notifications