Bengaluru Waste: ಬೆಂಗಳೂರಲ್ಲಿ ಕಸ ನಿರ್ವಹಣೆ - ಮಾನಿಟರಿಂಗ್ ಕೊರತೆ: ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಿಂದ ಎಚ್ಚರಿಕೆ

Bengaluru Waste: ಬೆಂಗಳೂರು ನಗರದಲ್ಲಿ ಸ್ವಚ್ಛತೆ ಕೊರತೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ - ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ರೀತಿ ಇರುವಾಗಲೇ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಸಮರ್ಪಕ ಮಾನಿಟರಿಂಗ್ ಕೊರತೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಬುಧವಾರ ಬೆಳಿಗ್ಗೆ ಸರ್ವಜ್ಞನಗರ ಪ್ರದೇಶಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ, ಪೌರಕಾರ್ಮಿಕರ ಹಾಜರಾತಿ ಕುರಿತಂತೆ ಗಂಭೀರವಾಗಿ ಪರಿಶೀಲನೆ ನಡೆಸಿ, ನಿಯಮಿತವಾಗಿ ಗೈರುಹಾಜರು ಆಗುತ್ತಿರುವವರು ಹಾಗೂ ದೀರ್ಘಾವಧಿ ರಜೆ ತೆಗೆದುಕೊಂಡಿರುವವರ ಸಂಪೂರ್ಣ ವಿವರವನ್ನು ನೀಡಲು ಸೂಚಿಸಿದರು. ಜೊತೆಗೆ ಗೈರು ಹಾಜರಾತಿಗೆ ಅನುಗುಣವಾಗಿ ಸಂಬಳದಲ್ಲಿ ಕಡಿತ ಮಾಡಲಾಗುತ್ತಿದೆಯೇ ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಸಿಬ್ಬಂದಿ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ

ಸ್ವಚ್ಛತಾ ಕಾರ್ಯದಲ್ಲಿ ಪೌರಕಾರ್ಮಿಕರು, ಮೇಲ್ವಿಚಾರಕರು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು (JHI) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಿದ ಆಯುಕ್ತರು, ಸಮರ್ಪಕ ಮಾನಿಟರಿಂಗ್ ಕೊರತೆಯೇ ನಗರದಲ್ಲಿ ಸ್ವಚ್ಛತೆಯ ಸಮಸ್ಯೆಗಳು ಮುಂದುವರಿಯಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿದಿನದ ಘನತ್ಯಾಜ್ಯ ನಿರ್ವಹಣೆ ಸಂಬಂಧ ತ್ಯಾಜ್ಯ ವಿಂಗಡಣೆ (Segregation), ದಂಡ ವಿಧಿಸುವಿಕೆ (Penalties) ಹಾಗೂ ಬ್ಲಾಕ್ ಸ್ಪಾಟ್ ನಿರ್ಮೂಲನೆ ಕುರಿತಂತೆ ನಿಯಮಿತ ಅಂಕಿಅಂಶಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕಾರ್ಯವಿಂಗಡಣೆ ಮತ್ತು ಮಾನಿಟರಿಂಗ್ ವ್ಯವಸ್ಥೆ ಬಲಪಡಿಸಿ

ಯಾವ ರಸ್ತೆಗಳಿಗೆ ಯಾವ ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂಬುದರ ಕುರಿತು ವಿಭಾಗವಾರು ಹಾಗೂ ವಾರ್ಡ್‌ವಾರು ಸಂಪೂರ್ಣ ಮಾಹಿತಿಯನ್ನು ಹಾಗೂ ಪೌರಕಾರ್ಮಿಕರ ಗ್ಯಾಂಗ್ ವರ್ಕ್ ಮಾಹಿತಿಯನ್ನು 2 ದಿನಗಳೊಳಗೆ ಸಲ್ಲಿಸುವಂತೆ ಸೂಚಿಸಲಾಯಿತು. ಪ್ರತಿ ಪೌರಕಾರ್ಮಿಕರ ಕಾರ್ಯವೈಖರಿಯನ್ನು ನಿರಂತರವಾಗಿ ಮಾನಿಟರ್ ಮಾಡುವಂತೆ ಕಿರಿಯ ಆರೋಗ್ಯ ಪರಿವೀಕ್ಷಕರಿಗೆ ಸೂಚಿಸಿದರು.

ಪೌರಕಾರ್ಮಿಕ ಮೇಲ್ವಿಚಾರಕರ ಕಾರ್ಯಕ್ಷಮತೆ ಕುರಿತ ವಿವರಗಳನ್ನು ಸಹ ಸಲ್ಲಿಸುವಂತೆ ಸೂಚಿಸಿ, ಅವರ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡುವಂತೆ ತಿಳಿಸಿದರು. ಜೊತೆಗೆ, ಲಿಂಕ್ ವರ್ಕರ್‌ಗಳ ಕಾರ್ಯನಿರ್ವಹಣೆ ಹಾಗೂ ವಾಣಿಜ್ಯ ಅಂಗಡಿಗಳಲ್ಲಿ ತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ ಮೂಡಿಸಿರುವ ಬಗ್ಗೆ ಸಮಗ್ರ ಮಾಹಿತಿ ನೀಡಲು ಸೂಚಿಸಲಾಯಿತು.

ಅಕ್ರಮ ತ್ಯಾಜ್ಯ ವಿಸರ್ಜನೆ ವಿರುದ್ಧ ಕ್ರಮ

ರಾತ್ರಿ ಪಾಳಿ ಮತ್ತು ಬೆಳಿಗ್ಗಿನ ವೇಳೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಷಲ್‌ಗಳ ವಿವರ ಹಾಗೂ ರಾತ್ರಿ ವೇಳೆ ಮತ್ತು ಬೆಳಗ್ಗಿನ ಜಾವದಲ್ಲಿ ಅಕ್ರಮವಾಗಿ ತ್ಯಾಜ್ಯ ವಿಸರ್ಜನೆ ಮಾಡುತ್ತಿರುವವರ ವಿರುದ್ಧ ಮಾರ್ಷಲ್ ಗಳು ವಿಧಿಸಿರುವ ದಂಡದ ವಿವರ ಹಾಗೂ ಕೈಗೊಂಡ ಕ್ರಮಗಳ ಕುರಿತು ವಿವರವುಳ್ಳ ಮಾಹಿತಿಯನ್ನು ಸಲ್ಲಿಸಲು ಸೂಚನೆ ನೀಡಿದ್ದಾರೆ. ವಾರ್ಡ್ ಮಟ್ಟದಲ್ಲಿ ಕಸ ಸಂಗ್ರಹಣೆ ವಾಹನಗಳು ನಿಗದಿತ ಸಮಯಕ್ಕೆ ಆಗಮಿಸದಿರುವುದನ್ನು ಗಮನಿಸಿದ ಆಯುಕ್ತರು, ಈ ಸಮಸ್ಯೆಯನ್ನು ತಕ್ಷಣ ಸರಿಪಡಿಸಲು ಹಾಗೂ ಆಟೋ ಚಾಲಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಪುಲಿಕೇಶಿನಗರದ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ವೇಳೆ ಕೆಲವೆಡೆ ಬ್ಲಾಕ್ ಸ್ಪಾಟ್ ಗಳನ್ನು ಗಮನಿಸಿ, ತಕ್ಷಣ ತೆರವುಗೊಳಿಸಲು ಹಾಗೂ ನಗರವನ್ನು ಸ್ವಚ್ಛವಾಗಿರಿಸಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು. ನಗರದ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದ ಆಯುಕ್ತರು, ಕಾರ್ಯವೈಖರಿ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಈ ವೇಳೆ ಉಪ ಪ್ರಧಾನ ವ್ಯವಸ್ಥಾಪಕರಾದ ರಶ್ಮಿ, ಸಂಬಂಧಪಟ್ಟ AGM, ಸ್ವಚ್ಛತಾ ಮೇಲ್ವಿಚಾರಕರುಗಳು ಹಾಗೂ ಪೌರಕಾರ್ಮಿಕರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+