ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಆರಂಭ
ಬೆಂಗಳೂರು, ಆಗಸ್ಟ್ 6: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಬಿಜೆಪಿ ಕಾರ್ಯಕಾರಿಣಿ ಆರಂಭವಾಗಿದೆ. ಮೊದಲ ದಿನ ಮುಖಂಡರ ಸಭೆ ನಂತರ ಇಂದು ಕಾರ್ಯಕಾರಿಣಿ ನಡೆಯುತ್ತಿದೆ.
ಇಂದಿನ ಕಾರ್ಯಕಾರಿಣಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಉದ್ಘಾಟನೆ ಮಾಡಿದರು. ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರು, ರಾಜ್ಯ ನಾಯಕರು ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದಾರೆ.

ಆದರೆ ಯಡಿಯೂರಪ್ಪ ಜತೆ ಮುಸುಕಿನ ಗುದ್ದಾಟ ನಡೆಸುತ್ತಿರುವ ಕೆ.ಎಸ್ ಈಶ್ವರಪ್ಪ ಕಾರ್ಯಕಾರಿಣಿಯಿಂದ ದೂರ ಉಳಿದಿದ್ದಾರೆ. ಅವರ ಗೈರಿಗೆ ಕಾರಣ ತಿಳಿದು ಬಂದಿಲ್ಲ.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದ, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಸೇರಿ ಹಲವು ವಿಚಾರಗಳು ಕಾರ್ಯಕಾರಿಣಿಯಲ್ಲಿ ಚರ್ಚೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಪಕ್ಷ ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಂಭವ ಇದೆ.
ಇನ್ನು ಇಂದು ಮಧ್ಯಾಹ್ನ ಸೋಷಿಯಲ್ ಮೀಡಿಯಾ ಕಾನ್ಕ್ಲೇವ್ ನಡೆಯಲಿದೆ. ಸುಮಾರು 5000 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.












Click it and Unblock the Notifications