ಕಬ್ಬು ಬೆಳೆಗಾರರ ಹೋರಾಟ; ರಾಜಕಾರಣಿಗಳು ಸಕ್ಕರೆ ಕಾರ್ಖಾನೆಯ ಮಾಲೀಕರಾದಾಗ, ರೈತರ ಪರ ಯಾರು ನಿಲ್ತಾರೆ?
ಬೆಂಗಳೂರು, ನವೆಂಬರ್ 05: ರಾಜಕಾರಣಿಗಳು ಸಕ್ಕರೆ ಕಾರ್ಖಾನೆಯ ಮಾಲೀಕರಾದಾಗ, ರೈತರ ಪರವಾಗಿ ಯಾರು ನಿಲ್ಲುತ್ತಾರೆ? ನಮಗೆ ಆಹಾರ ನೀಡುವ ಅನ್ನದಾತರನ್ನ ರಕ್ಷಿಸಲು ಒಗ್ಗೂಡೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ 6ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ FRP ಅನ್ನು ಖಚಿತಪಡಿಸಿದೆ. ಮಹಾರಾಷ್ಟ್ರ ಸರ್ಕಾರ ₹3,550/ಟನ್‌ಗೆ ನಿಗದಿಪಡಿಸಿದೆ. ಸ್ವಯಂ ಘೋಷಿತ "ರೈತರ ಚಾಂಪಿಯನ್" ಎಂದು ಕರೆದುಕೊಳ್ಳುವ ಕಾಂಗ್ರೆಸ್ ಸರ್ಕಾರವ ಬೆಲೆಯನ್ನು ನಿಗದಿಪಡಿಸಿಲ್ಲ. ಈ ಕೂಡಲೇ ಕಬ್ಬು ಬೆಳೆಗಾರರ ಬೇಡಿಕೆಗಳನ್ನ ಈಡೇರಿಸುವಂತೆ ನಿಖಿಲ್ ಅವರು ಒತ್ತಾಯಿಸಿದ್ದಾರೆ.

ರಾಜಕಾರಣಿಗಳು ಸಕ್ಕರೆ ಕಾರ್ಖಾನೆಯ ಮಾಲೀಕರಾದಾಗ ರೈತರ ಪರವಾಗಿ ಯಾರು ನಿಲ್ಲುತ್ತಾರೆ? ನಮಗೆ ಆಹಾರ ನೀಡುವ ಅನ್ನದಾತರನ್ನ ರಕ್ಷಿಸಲು ಒಗ್ಗೂಡೋಣ. ಎಲ್ಲಾ ಸಕ್ಕರೆ ಗಿರಣಿ ಮಾಲೀಕರು ರೈತರೊಂದಿಗೆ ನಿಂತು ನ್ಯಾಯಯುತ ಬೆಲೆಯನ್ನು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ರೈತರನ್ನು ಕಡೆಗಣಿಸಿದರೆ ಸರ್ಕಾರಕ್ಕೆ ಅಪಾಯ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
ರಾಜ್ಯ ಸರಕಾರವು ರೈತರನ್ನು ಕಡೆಗಣಿಸಿ ಉಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ. ಪ್ರತಿಭಟನೆಯ ಕಿಚ್ಚು ಹೆಚ್ಚಾಗುತ್ತಿದೆ. ಇವತ್ತು ಗೋಕಾಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಚಿಕ್ಕೋಡಿ, ಬೈಲಹೊಂಗಲದಲ್ಲೂ ಹೋರಾಟ ಶುರುವಾಗಿದೆ. ಇನ್ನೂ ಕೂಡ ರಾಜ್ಯ ಸರಕಾರವು ಕಬ್ಬು ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಆ ಭಗವಂತ ಬಂದರೂ ನಿಮ್ಮ ಸರಕಾರವನ್ನು ರಕ್ಷಿಸಲು ಸಾಧ್ಯವಾಗದು ಎಂದು ನುಡಿದರು. ಕಬ್ಬು ಬೆಳೆಗಾರರ ನಿರ್ಲಕ್ಷ್ಯ ಮಾಡದಿರಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸುವುದಾಗಿ ತಿಳಿಸಿದರು.
ಇನ್ನೂ ಬೆಂಗಳೂರಿನಲ್ಲಿ ಕಣ್ಮುಚ್ಚಿ ಕೂತಿದ್ದರೆ, ಈ ಜ್ವಾಲೆ ಬೆಂಗಳೂರು ವಿಧಾನಸೌಧವನ್ನೂ ಸುಡಬಹುದು ಎಂದು ಹೇಳಿದರು. ರಾಜ್ಯ ಸರಕಾರವು ಇವತ್ತು ಅಥವಾ ನಾಳೆಯೇ ರೈತ ಮುಖಂಡರನ್ನು ಕೂರಿಸಿ, ಒಂದು ವೇದಿಕೆ ನಿರ್ಮಿಸಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು. ರೈತ ವಿಷ ತೆಗೆದುಕೊಂಡ ವಿಚಾರ ತಿಳಿದು ಮನಸ್ಸು ತಡೆಯಲಿಲ್ಲ, ಮುಗ್ಧ ರೈತರ ಸಂಕಷ್ಟ ತಿಳಿದು ಮನಸ್ಸು ಕರಗಿಹೋಗಿದೆ. ಸಚಿವರ ಜೊತೆಗೆ ಮಾತನಾಡಿದ್ದೇನೆ ಎಂದ ಅವರು, ನಾಡಿಗೆ ಅನ್ನ ನೀಡುವ ರೈತರಿಗೆ ನ್ಯಾಯ ಕೊಡಲಾಗದ ಸರಕಾರ ಬದುಕಿದ್ದೂ ಸತ್ತಂತೆ ಎಂದು ಅವರು ತಿಳಿಸಿದರು.
ನಾನು ರಾಜಕಾರಣ ಮಾಡುತ್ತಿಲ್ಲ; ರೈತರು ಇವತ್ತು ಕಂಗಾಲಾಗಿದ್ದಾರೆ. ಕಬ್ಬು ಬೆಳೆಗಾರರು ಕೇಳುತ್ತಿರುವುದು ಭಿಕ್ಷೆಯಲ್ಲ, ನ್ಯಾಯಸಮ್ಮತ ಬೇಡಿಕೆಯನ್ನು ಅವರು ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದಲ್ಲಿ, ರಾಜ್ಯ ಸರಕಾರಕ್ಕೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ, ತಕ್ಷಣ ಸಭೆ ಕರೆದು ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕೆಂದು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.












Click it and Unblock the Notifications