Karnataka rain: ಇಂದಿನಿಂದ ಕರಾವಳಿಗೆ ವ್ಯಾಪಕ ಮಳೆ ಸಾಧ್ಯತೆ, ಬೇರೆ ಜಿಲ್ಲೆಗಳಿಗೆ ಏನಿದೇ ಮುನ್ಸೂಚನೆ?
ಬೆಂಗಳೂರು, ಜನವರಿ 10: ಕರ್ನಾಟಕ ಕರಾವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಗಳವಾರ 5 ಸೆಂಟಿ ಮೀಟರ್‌ನಷ್ಟು ಮಳೆ ದಾಖಲಾಗಿದೆ. ಈ ಮಳೆ ಬುಧವಾರವು ಮೂರು ಜಿಲ್ಲೆಗಳಲ್ಲಿ ಇನ್ನಷ್ಟು ಚುರುಕುಗೊಳ್ಳಲಿದೆ. ಇಲ್ಲಿ ಧಾರಾಕರಾವಾಗಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಳಿಗಾಲ ಮುಗಿಸಿ ಬೇಸಿಗೆಗೆ ಕಾಲಿಡುತ್ತಿದ್ದೇವೆ. ಆದರೆ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ವಾತಾವರಣವೇ ಬದಲಾಗಿದೆ. ಬದಲಾದ ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದೆಲ್ಲಡೆ ವಿಪರೀತ ಚಳಿ ಹಾಗೂ ಮಳೆ, ಮಂಜಿನ ವಾತಾವರಣ ನಿರ್ಮಾಣವಾಗಿದೆ. ಮತ್ತೆ ಮಳೆಗಾಲ ಆರಂಭವಾಯಿತೆನೋ ಎಂದು ಭಾಸವಾಗುತ್ತಿದೆ.

ಕರಾವಳಿಗೆ ಇಂದು ಜೋರು ಮಳೆ
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಇಂದಿನಿಂದ ಎರಡು ದಿನ ಮಳೆ ಮುಂದುವರಿಯಲಿದೆ. ಇಂದು ಈ ಮೂರು ಜಿಲ್ಲೆಗಳಲ್ಲಿ ಜೋರು ಮಳೆ ಆಗುವ ಸಂಭವವಿದೆ. ಈ ವೇಳೆ ಕರಾವಳಿಯಲ್ಲಿ ಗಾಳಿ ಬೀಸುವಿಕೆ ಪ್ರಮಾಣವು ಹೆಚ್ಚಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಇದರೊಂದಿಗೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುವ ಲಕ್ಷಣ ಇದೆ. ಒಂದೆರಡು ದಿನದ ಹಿಂದೆ ಹುಬ್ಬಳ್ಳಿ, ಹಾವೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ತುಂತುರು, ಹಗುರ ಮಳೆ ದಾಖಲಾಗಿದೆ. ಇದೀಗ ಅದೇ ರೀತಿ ಹಗುರದಿಂದ ಸಾಧಾರಣ ಮಳೆ ಬೀಳುವ ನೀರೀಕ್ಷೆ ಇದೆ.
ಬೆಂಗಳೂರು ನಗರ ಸೇರಿ ಎಲ್ಲ ಜಿಲ್ಲೆಗೆ ಮಳೆ
ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಿಗೂ ಮುಂದಿನ 48 ಗಂಟೆ ಮಳೆ ಆರ್ಭಟ ಕಂಡು ಬರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಚಾಮರಾನಗರ, ಚಿಕ್ಕಮಗಳೂರು, ಕೊಡುಗು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಈ ಭಾಗದ ಎಲ್ಲ ಜಿಲ್ಲೆಗಳಲ್ಲಿ ಬುಧವಾರ ಮಳೆ ಚುರುಕಾಗಿರಲಿದೆ. ಗುರುವಾರ ತುಂತುರು ಮಳೆಯಾಗಬಹುದು ಎಂದು ಐಎಂಡಿ ಮುನ್ಸೂಚನೆ ವರದಿ ತಿಳಿಸಿದೆ.

ಬಿದ್ದ ಮಳೆ ಮಾಹಿತಿ: ರಾಜ್ಯದ ಕನಿಷ್ಠ ತಾಪಮಾನ
ರಾಜ್ಯದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ 5 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಪೆಣಂಬೂರು ವ್ಯಾಪ್ತಿಯಲ್ಲಿ 4, ಉಡುಪಿ 3, ಮೈಸೂರು ಜಿಲ್ಲೆಯಲ್ಲಿ 1 ಸೆಂಟಿ ಮೀಟರ್ ಮಳೆ ದಾಖಲಾಗಿದೆ.
ರಾಜ್ಯದ ಕನಿಷ್ಠ ತಾಪಮಾನ ಹಾಸನ ದಲ್ಲಿ 12 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರು 13, ಬೀದರ್ 16, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರೊಂದಿಗೆ ಬೇರೆ ಬೇರ ಜಿಲ್ಲೆಗಳ ವ್ಯಾಪ್ತಿಯಲ್ಲೂ ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಇದರಿಂದ ಕರಾವಳಿ ಮತ್ತು ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ನಿರ್ಮಾಣವಾಗುತ್ತಿದೆ.
ಬೆಂಗಳೂರಿನಲ್ಲಿ ಸಹ ಈಗಾಗಲೇ ದಾಖಲಾಗುತ್ತಿರುವ ಚಳಿ ಇನ್ನೂ ಕೆಲವು ದಿನ ಮುಂದುವರಿಯಲಿದೆ. ಇಲ್ಲಿ ಕೆಲವೆಡೆ ತುಂತುರು ಮಳೆ ಸಂಭವವಿದೆ. ತಾಪಮಾನದಲ್ಲಿ ಇಳಿಕೆ ಕಂಡು ಬರಲಿದೆ ಎಂದು ಐಎಂಡಿ ವರದಿ ತಿಳಿಸಿದೆ.












Click it and Unblock the Notifications