Liquor: ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ನಿರೀಕ್ಷೆಗೆ ಮೀರಿದ ಆದಾಯ
ಬೆಂಗಳೂರು, ಜನವರಿ 01: ಹೊಸ ವರ್ಷಾಚರಣೆಗೆ ಮದ್ಯ ಇಲ್ಲವೆಂದರೆ ನಡೆಯೋದೆ ಇಲ್ಲ. ಬಹುತೇಕ ಮಂದಿ ನಶೆಯಲ್ಲಿ ಹೊಸ ವರ್ಷವನ್ನು ಸ್ವಾಗಿತಿಸುವುದು ವಾಡಿಕೆ. ಹೊಸ ವರ್ಷದ ಪ್ರಯುಕ್ತ 2024ರ ಕೊನೆ ದಿನ ಡಿಸೆಂಬರ್ 31ರಂದು ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ದಾಖಲೆ ಆಗಿದೆ. ಅಬಕಾರಿ ಇಲಾಖೆಗೆ ನಿರೀಕ್ಷೆಗೂ ಮೀರಿ ನೂರಾರು ಕೋಟಿ ರೂಪಾಯಿ ಹಣ ಕೆಲವೇ ಗಂಟೆಗಳಲ್ಲಿ ಸಂಗ್ರಹವಾಗಿದೆ.
ಹೌದು, ಡಿಸೆಂಬರ್ 31ರಂದು ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ 'ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ'ದಿಂದ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಇದು ನಿರೀಕ್ಷೆಗೂ ಮೀರಿದ ಮದ್ಯ ಮಾರಾಟ ಎನ್ನಲಾಗಿದ್ದು, ಸರ್ಕಾರಕ್ಕೆ ಉತ್ತಮ ಆದಾಯ ಸಂಗ್ರಹವಾಗಿದೆ.

ಹೊಸ ವರ್ಷ ಪ್ರಯುಕ್ತ ಮಂಗಳವಾರ 7300ಕ್ಕೂ ಹೆಚ್ಚು ಮದ್ಯ ಮಾರಾಟಗಾರರು 'ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ'ದಿಂದ ಮದ್ಯ ಖರೀದಿಸಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ 193 ಕೋಟಿ ರೂಪಾಯಿ ಮದ್ಯ ಮಾರಾಟವಾಗಿತ್ತು. ಅದರ ಲೆಕ್ಕಾಚಾರದಲ್ಲಿಯೇ ಈ ಬಾರಿ 250 ಕೋಟಿ ರೂಪಾಯಿ ಮದ್ಯ ಮಾರಾಟ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಅಂದಾಜು ಮೀರಿ ಅತ್ಯಧಿಕ ಬೆಲೆಯ ಮದ್ಯ ಮಾರಾಟವಾಗಿದೆ ಎಂದು 'ಟಿವಿ ನೈನ್' ವರದಿ ಮಾಡಿದೆ.
ಐಎಂಎಲ್ ಮಾರಾಟದಿಂದ 250 ಕೋಟಿ ರೂಪಾಯಿ, ಬಿಯರ್‌ನಿಂದ 57 ಕೋಟಿ ರೂಪಾಯಿ ಆದಾಯ ಅಬಕಾರಿ ಇಲಾಖೆಗೆ ಸಂಗ್ರಹವಾಗಿದೆ. ಒಟ್ಟು 7.76 ಲಕ್ಷ ಮದ್ಯ ಬಾಕ್ಸ್ ಮಾರಾಟವಾಗಿವೆ. ಇದರಿಂದ ಒಟ್ಟು 308 ಕೋಟಿ ರೂಪಾಯಿ ಬಂದಿದೆ ಎಂದು ಪಾನೀಯ ನಿಗಮ ಮಾಹಿತಿ ನೀಡಿದೆ.
ಜನವರಿ 1ರಂದು ಮದ್ಯಕ್ಕೆ ಬೇಡಿಕೆ
ಡಿಸೆಂಬರ್ 31ಕ್ಕೂ ಮೊದಲ ಎರಡು ದಿನದಿಂದಲೇ ಮದ್ಯ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ. ಹೊಸ ವರ್ಷಾಚರಣೆ ಮುನ್ನ ದಿನ ಮದ್ಯಕ್ಕೆ ವ್ಯಾಪಕ ಬೇಡಿಕೆ ಕಂಡು ಬಂದಿದೆ. ಡಿಸೆಂಬರ್ 27ರಂದು 408 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಮನೆ, ಹೋಟೆಲ್, ರೆಸ್ಟೋರೆಂಟ್, ಬಾರ್ ಮುಂತಾದ ಕಡೆಗಳಲ್ಲಿ ಸಂಭ್ರಮಾಚರಣೆ ನಡೆದಿದೆ. ಇಂದು ಜನವರಿ 1ರಂದು ಮದ್ಯಕ್ಕೆ ಕೊಂಚ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ.
ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಮೈಸೂರು ಸೇರಿದಂತೆ ಮಹಾನಗರಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಜನ ಭಾಗಿಯಾದರು. ಪೊಲೀಸ್ ಇಲಾಖೆಗೆ ಜನರ ರಕ್ಷಣೆಗೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಂಡಿದ್ದರು.
ಬಿಬಿಎಂಪಿ, ಬೆಸ್ಕಾಂ, BWSSB ಸಿಬ್ಬಂದಿಗೆ ರಜೆ ಇಲ್ಲ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ BBMP, ಬೆಸ್ಕಾಂ, BWSSB ಇಲಾಖೆಯ ಅಧಿಕಾರಿಗಳು ರಜೆ ಮೇಲೆ ತೆರಳದಂತೆ ಹಾಗೂ ಸಿಬ್ಬಂದಿ ವರ್ಗಕ್ಕೆ ರಜೆ ನೀಡದಂತೆ ಸೂಚನೆ ನೀಡಿದ್ದಾರೆ. ಜನವರಿ 3ರವರೆಗೆ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇರುತ್ತಾರೆ. ಹಾಗಾಗಿ ಸಾರ್ವಜನಿಕರಿಗೆ ಸೇವೆ ನೀಡಬೇಕು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ನಗರದ ಎಲ್ಲಾ ವಲಯದ ಅಧಿಕಾರಿಗಳು ಹಾಜರಿರಬೇಕು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications