Lokayukta Raid: ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ!
ನೆಲಮಂಗಳ ಆಗಸ್ಟ್ 8: ನೆಲಮಂಗಲ ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನೆಲಮಂಗಲ ತಾಲೂಕಿನ ಬೂದಿಹಾಳ್ ಹಾಗೂ ದಾಸನಪುರ, ಅಡಕಮಾರನಹಳ್ಳಿ ಪಂಚಾಯತಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಖುದ್ದು ಮುಖ್ಯ ಲೋಕಾಯುಕ್ತ ಬಿ.ಎಸ್ ಪಾಟೀಲ್ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ನಾಲ್ಕೈದು ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಖಾತೆ ಸೇರಿದಂತೆ ಪದೇ ಪದೇ ಗ್ರಾಮ ಪಂಚಾಯಿತಿಗಳ ಮೇಲೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಮೇಲೆ ಉಪ ಲೋಕಾಯುಕ್ತ ನ್ಯಾ.ಬಿ. ವೀರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಕಸಘಟ್ಟಪುರ, ರಾಜಾನುಕಂಟೆ, ಬನ್ನೇರುಘಟ್ಟ, ಕಲ್ಲುಬಾಳು, ಕಣ್ಣೂರು, ಮಂಡೂರು, ಕಂಬಳಗೋಡು, ಆಗರ, ದಾಸನಪುರ ಮತ್ತು ಅಡಕಮಾರನಹಳ್ಳಿ ಗ್ರಾ.ಪಂ. ಕಚೇರಿ ಮೇಲೆ ದಾಳಿ ನಡೆಸಿ ಅಧಿಕಾರಿಗಳಿಂದ ಪಂಚಾಯತಿಗಳಲ್ಲಿನ ಇ-ಖಾತಾ, ಟ್ಯಾಕ್ಸ್ ಕಲೆಕ್ಷನ್ ಲೆಡ್ಜರ್ ಸೇರಿದಂತೆ ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ದೇವನಹಳ್ಳಿ: ಲಂಚ ಪಡೆಯುವಾಗ ಲೋಕಯುಕ್ತರ ದಾಳಿ
ದೇವನಹಳ್ಳಿ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬ ಲಂಚ ಪಡೆಯುತ್ತಿದ್ಧಾ ಸಿಕ್ಕಿಬಿದ್ದು ಪಾರಾರಿಯಾಗಿದ್ದಾನೆ. ಬುಧವಾರ ಲೋಕಯುಕ್ತ ಪೊಲೀಸರು ದಾಳಿ ವೇಳೆ ಸಿಬ್ಬಂದಿ ಹಣದ ಸಮೇತ ಪರಾರಿಯಾದ ಘಟನೆ ನಡೆದಿದೆ. ಲೋಕಾಯುಕ್ತ ಪೊಲೀಸರು ಆತನ ಬೆನ್ನಟ್ಟಿದ್ದರೂ ಅವರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆರೋಪಿಗಾಗಿ ಸದ್ಯ ಹುಡುಕಾಟ ಆರಂಭವಾಗಿದೆ.
ದೇವನಹಳ್ಳಿ ತಾಲೂಕಿನ ವೆಂಕಗಿರಿಕೋಟೆ ಬಳಿ ಪೆಟ್ರೋಲ್ ಬಂಕ್ ಆರಂಭಿಸಲು ಚಿಕ್ಕಬಳ್ಳಾಪುರದ ಜಯಸೂರ್ಯ ಎಂಬುವರು ಅಗತ್ಯ ಪರವಾನಗಿ ಪಡೆಯಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕಂದಾಯ ಇಲಾಖೆಯ ವಿಷಯ ನಿರ್ವಾಹಕ ಅಧಿಕಾರಿ ಮಹೇಶ್, ಜಯಸೂರ್ಯ ಅವರಿಗೆ 2.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಜಯಸೂರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಜಯಸೂರ್ಯ ಬುಧವಾರ ಮುಂಗಡವಾಗಿ ಹಣ ನೀಡಲು ಕಂದಾಯ ಇಲಾಖೆಗೆ ಬಂದಿದ್ದರು. ಮಹೇಶ್ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಇದು ಗಮನಕ್ಕೆ ಬರುತ್ತಿದ್ದಂತೆ ಮಹೇಶ್ ಹಣದ ಸಮೇತ ಕಚೇರಿಯಿಂದ ಕಾಲ್ಕಿತ್ತಿದ್ದಾರೆ.












Click it and Unblock the Notifications