ರಾಜ್ಯ ಸರ್ಕಾರಕ್ಕೆ ಭಾರಿ ನಷ್ಟ ಉಂಟುಮಾಡಿದ ಸಂಸ್ಥೆಗಳು ಇವು
ಬೆಂಗಳೂರು, ಫೆಬ್ರವರಿ 5: ಕರ್ನಾಟಕದಲ್ಲಿ 2018-19ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿರುವ 28 ಸಾರ್ವಜನಿಕ ವಲಯದ ವಿಭಾಗಗಳು ನಷ್ಟ ಅನುಭವಿಸಿವೆ. ಇದರ ಒಟ್ಟು ಮೊತ್ತ 1,374 ಕೋಟಿ ರೂ ಎಂದು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ. ಇದರಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆಎನ್‌ಎನ್‌ಎಲ್) ಮತ್ತು ಬೆಂಗಳೂರು ಮೆಟ್ರೊಪಾಲಿಟನ್ ಸಾರಿಕೆ ನಿಗಮ (ಬಿಎಂಟಿಸಿ) ಎರಡು ಸಂಸ್ಥೆಗಳೇ ಶೇ 68ರಷ್ಟು ನಷ್ಟದ ಪಾಲು ಹೊಂದಿವೆ.
ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಸಿಎಜಿ ವರದಿಯನ್ನು ಮಂಡಿಸಲಾಗಿದೆ. ರಾಜ್ಯದ 103 ಸಾರ್ವಜನಿಕ ವಲಯದ ಸಂಸ್ಥೆಗಳ ಲಾಭ-ನಷ್ಟದ ಲೆಕ್ಕಾಚಾರ ಈ ವರದಿಯಲ್ಲಿದೆ. ಇವುಗಳಲ್ಲಿ 90 ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿದ್ದು, 49 ಸಂಸ್ಥೆಗಳು 2018-19ನೇ ಸಾಲಿನಲ್ಲಿ ಒಟ್ಟು 875 ಕೋಟಿ ರೂ ಲಾಭ ಒದಗಿಸಿವೆ. ಉಳಿದಂತೆ ಪಿಎಸ್‌ಯುಗಳ ಪೈಕಿ ನೀರಾವರಿ ನಿಗಮ ಅತ್ಯಧಿಕ, ಎಂದರೆ 719.6 ಕೋಟಿ ರೂ ನಷ್ಟ ಅನುಭವಿಸಿದ್ದರೆ, ಬಿಎಂಟಿಸಿಯ ನಷ್ಟದ ಮೊತ್ತ 217.1 ಕೋಟಿ ರೂ ಎಂದು ಸಿಎಜಿ ವರದಿ ವಿವರಿಸಿದೆ.
ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಗಮ (ಕೆಪಿಟಿಸಿಎಲ್) ಕೋಟ್ಯಂತರ ರೂಪಾಯಿ ಮೊತ್ತದ ಆರ್ಥಿಕ ಹೊರೆ ಅನುಭವಿಸುತ್ತಿದ್ದು, ಅದರ ಭಾರತವನ್ನು ಗ್ರಾಹಕರ ಮೇಲೆ ವರ್ಗಾಯಿಸಿದೆ ಎಂದು ಸಿಎಜಿ ವರದಿ ತಿಳಿಸಿದೆ. ವಿದ್ಯುತ್ ಪ್ರಸರಣ ಯೋಜನಾ ಮಾನದಂಡಗಳನ್ನು ಮೀರಿ 3,870 ಕೋಟಿ ರೂ ಹೆಚ್ಚುವರಿ ಪ್ರಸರಣ ಸಾಮರ್ಥ್ಯವನ್ನು ಕೆಪಿಟಿಸಿಎಲ್ ಸೃಷ್ಟಿಸಿದೆ. ಇದರಿಂದ ಗ್ರಾಹಕರ ಮೇಲಾಗುವ ಹೊರೆಯನ್ನು ತಪ್ಪಿಸಬಹುದಾಗಿತ್ತು ಎಂದು ವರದಿ ತಿಳಿಸಿದೆ. ಮುಂದೆ ಓದಿ.

ಕೆಪಿಟಿಸಿಎಲ್‌ನಲ್ಲಿ ಅನಗತ್ಯ ವೆಚ್ಚ
ಕೆಪಿಟಿಸಿಎಲ್‌ಗೆ ಈ ಹಿಂದಿನ ಪ್ರಕರಣಗಳಂತೆ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಅರಿವು ಇದ್ದರೂ ಆರು ವಲಯಗಳಲ್ಲಿ 800.19 ಕೋಟಿ ರೂ ಅನಗತ್ಯ ವೆಚ್ಚ ಮಾಡಿದೆ. ಇದರಿಂದ ಕೆಲಸದ ವಿಳಂಬದ ಜತೆಗೆ ಭಾರಿ ಪ್ರಮಾಣದ ಇಂಧನ ವ್ಯರ್ಥವಾಗಿದೆ. 50 ಪರೀಕ್ಷಾ ಯೋಜನೆಗಳ ಪೂರ್ಣಗೊಳಿಸುವುದರಲ್ಲಿನ ವಿಳಂಬದ ಕಾರಣದಿಂದ ಕೆಪಿಟಿಸಿಎಲ್ 1,559.27 ಕೋರಿ ರೂ ವ್ಯಯಿಸಿ, 556.42 ಕೋಟಿ ರೂ ಮೌಲ್ಯದ 1,656 ಮೆಗಾವ್ಯಾಟ್ ವಿದ್ಯುತ್ ಉಳಿತಾಯದ ನಷ್ಟ ಎದುರಿಸಿದೆ.

ಬಿಎಂಟಿಸಿಯಿಂದ ಲಾಭ ನಿರೀಕ್ಷೆ ಅಸಾಧ್ಯ
ಸಾರ್ವಜನಿಕ ಸೇವೆಯ ಉದ್ದೇಶ ಹೊಂದಿರುವ ಬಿಎಂಟಿಸಿಯಿಂದ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ. ಖಾಸಗಿ ಸಾರಿಗೆ ಸೇವಾದಾರು, ಖಾಸಗಿ ವಾಹನಗಳು, ಅಟೊ, ಓಲಾ, ಉಬರ್‌ಗಳಿಂದ ಬಿಎಂಟಿಸಿ ತೀವ್ರ ಪೈಪೋಟಿ ಎದುರಿಸುತ್ತಿದೆ. ಹೀಗಾಗಿ ನಾವು ರಾಜ್ಯ ಸರ್ಕಾರವನ್ನು ಅವಂಬಿಸಿದ್ದೇವೆ ಎಂದು ಬಿಎಂಟಿಸಿ ವ್ಯವಸ್ಥಾಪನಾ ನಿರ್ದೇಶಕಿ ಸಿ. ಶಿಖಾ ಹೇಳಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ವಾಯುವಜ್ರದಿಂದ ನಷ್ಟ ಕಡಿಮೆ
'ವಾಯು ವಜ್ರ ಸೇವೆಗಳನ್ನು (ಎಸಿ ಬಸ್) ಹೆಚ್ಚಿಸುವ ಮೂಲಕ ಬಿಎಂಟಿಸಿ ನಷ್ಟ ತಗ್ಗಿಸಲು ಪ್ರಯತ್ನಿಸುತ್ತಿದೆ. ಇದು ಐಟ ಉದ್ಯೋಗಿಗಳು ಮತ್ತು ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ಜತೆಗೆ ನಮ್ಮ ಮೆಟ್ರೋಗೆ ಸಂಪರ್ಕಿಸುವ 90 ಇಲೆಕ್ಟ್ರಿಕ್ ಫೀಡರ್ ಬಸ್‌ಗಳನ್ನು ಖರೀದಿಸಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.
Recommended Video

ಎರಡು ಸಂಸ್ಥೆಗಳಲ್ಲಿ ಉತ್ತಮ ಲಾಭ
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ 126.2 ಕೋಟಿ ರೂ ಲಾಭ ಮಾಡಿದ್ದರೆ, ಕರ್ನಾಟಕ ಸೋಪ್ ಆಂಡ್ ಡಿಟರ್ಜೆಂಟಸ್ ಲಿಮಿಟೆಡ್ 109.4 ಕೋಟಿ ರೂ ಲಾಭ ಗಳಿಸಿದೆ. ವಿದ್ಯುತ್ ವಲಯದ 11 ಸಾರ್ವಜನಿಕ ವಲಯದ ನಿಗಮಗಳ ಪೈಕಿ ಐದು ಉದ್ಯಮಗಳಿಂದ 1,086.71 ಕೋಟಿ ರೂ ಲಾಭ ದೊರಕಿದೆ. ಆದರೆ ಉಳಿದ ಆರು ಉದ್ಯಮಗಳಿಂದ 2,928.68 ಕೋಟಿ ರೂ ನಷ್ಟ ಉಂಟಾಗಿದೆ.












Click it and Unblock the Notifications