ತಿರುಪತಿಗೆ ನಂದಿನಿ ತುಪ್ಪ; ಈ 8 ಅಂಶಗಳನ್ನು ತಿಳಿಯಿರಿ
ಬೆಂಗಳೂರು, ಆಗಸ್ಟ್ 03; ತಿರುಪತಿ ತಿರುಮಲ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)ನ ಪ್ರಸಿದ್ಧ ನಂದಿನಿ ತುಪ್ಪ ಸರಬರಾಜು ಸ್ಥಗಿತ ಮಾಡಲಾಗಿದೆ ಎಂಬುದು ಈಗ ದೊಡ್ಡ ಸುದ್ದಿ.
ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಳಿಸಿರುವುದು ಈಗ ಕರ್ನಾಟಕದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಕೆಎಂಎಫ್ ಮತ್ತು ಟಿಟಿಡಿ ಈ ವಿಚಾರದಲ್ಲಿ ಹಲವು ಅಂಶಗಳನ್ನು ಬೆಳಕಿಗೆ ತಂದು ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳುತ್ತಿವೆ.

ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ಕುರಿತು ಸುಮಾರು 8 ಅಂಶಗಳ ಮಾಹಿತಿಯನ್ನು ನೀಡಿದ್ದಾರೆ. ಯಾವುದೇ ಆರೋಪ ಪ್ರತ್ಯಾರೋಪ ಮಾಡುವ ಮೊದಲು ಈ ಮಾಹಿತಿಯನ್ನು ಒಮ್ಮೆ ಓದಿಕೊಳ್ಳಿ.
ಕೆಎಂಎಫ್ ಅಧ್ಯಕ್ಷರ ಮಾಹಿತಿ
1) ಕಳೆದ 20 ವರ್ಷಗಳಿಂದಲೂ ಕೆಎಂಎಫ್ ವತಿಯಿಂದ ತಿರುಪತಿ ತಿರುಮಲ ದೇವಸ್ಥಾನದ ಪ್ರಸಿದ್ಧ ಲಡ್ಡು ಪ್ರಸಾದ ತಯಾರಿಕೆಗೆ ನಮ್ಮ ನಂದಿನಿ ತುಪ್ಪವನ್ನು ಸರಬರಾಜು ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ಪರ್ಧೆ ಏರ್ಪಟ್ಟ ಕಾರಣ ನಮ್ಮ ನಂದಿನಿ ತುಪ್ಪದ ಉತ್ಪಾದನಾ ವೆಚ್ಚವೂ ಸಹ ನಮಗೆ ದೊರಕುವುದು ತುಂಬಾ ಕಷ್ಟಕರವಾಗಿದೆ.
2) ಹೀಗಿದ್ದರೂ 2021-22 ನೇ ಸಾಲಿನ ಟೆಂಡರ್ ಪ್ರಕ್ರಿಯೆಯಲ್ಲಿ L-3 ಸ್ಪರ್ಧೆದಾರರಾದರೂ ಸಹ ದೇವಾಲಯದಿಂದ 1000 ಮೆ. ಟನ್ ತುಪ್ಪಕ್ಕೆ ಬೇಡಿಕೆ ಇದ್ದರೂ ಸಹ 345 ಮೆಟ್ರಿಕ್ ಟನ್ ನಷ್ಟು ನಂದಿನಿ ತುಪ್ಪವನ್ನು ಪ್ರತಿ ಲೀಟರ್ ಗೆ ರೂ.392 ಗಳಂತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸರಬರಾಜು ಮಾಡಿಕೊಡಲಾಗಿರುತ್ತದೆ.
3) ನಂತರ 2020-21 ಹಾಗೂ 2022-23ನೇ ಸಾಲುಗಳಲ್ಲಿ ಟೆಂಡರ್ ಪ್ರಕ್ರಿಯೆ ವೇಳೆ ತೀವ್ರ ಸ್ಪರ್ಧೆ ಏರ್ಪಟ್ಟ ಕಾರಣ ಒಂದು ಲೀಟರ್ ನಷ್ಟು ನಂದಿನಿ ತುಪ್ಪವೂ ಸಹ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸರಬರಾಜಾಗಿರುವುದಿಲ್ಲ. ಈ ಎರಡು ವರ್ಷಗಳ ಅವಧಿಯಲ್ಲಿ ತಮ್ಮ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದಿದ್ದು ಗೊತ್ತಿಲ್ಲವೇ? ಸದರಿ ಅವಧಿಗಳಲ್ಲಿ ತಮ್ಮ ಸರ್ಕಾರವೇ ಇದ್ದು, ಅದು ಹಿಂದೂ ವಿರೋಧಿ ಸರ್ಕಾರವೇ?
4) ನಂದಿನಿ ತುಪ್ಪದ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಂದ ನಮ್ಮ ರಾಜ್ಯದ ರೈತಾಪಿ ಬಂಧುಗಳಿಗೆ ನ್ಯಾಯ ದೊರಕಿಸಿದಂತಾಗುವುದೇ?. 2023ನೇ ಸಾಲಿನ ಮೇ ಮಾಹೆಯಲ್ಲಿ ಅಧಿಕಾರಕ್ಕೆ ಬಂದ ನಮ್ಮ ಕಾಂಗ್ರೆಸ್ ಸರ್ಕಾರವು ಅಧಿಕಾರ ವಹಿಸಿಕೊಂಡ ಕೇವಲ ಒಂದೂವರೆ ತಿಂಗಳಿನಲ್ಲೇ ಗ್ರಾಹಕರ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ ಗೆ ರೂ. 3ಗಳಂತೆ ಹೆಚ್ಚಿಸಿ ಸಂಪೂರ್ಣವಾಗಿ ಅದನ್ನು ಹಾಲು ಉತ್ಪಾದಕರಿಗೆ ನೇರವಾಗಿ ವರ್ಗಾವಯಿಸಲು ಸನ್ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದ ಮೇರೆಗೆ ಅದರಂತೆ ಕ್ರಮಕೈಗೊಂಡು ಕಾರ್ಯಗತಗೊಳಿಸಿರುವುದರಿಂದ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹಿಸಿರುವುದು ತಮಗೆ ಸಹಿಸಲಾಗುತ್ತಿಲ್ಲವೇ? ಇದನ್ನು ವಿರೋಧಿಸುವವರು ರೈತ ವಿರೋಧಿಗಳೇ ಎಂದು ಸಾಬೀತಾಗಿರುತ್ತದೆ.
5) ಕಾಂಗ್ರೆಸ್ ಸರ್ಕಾರದ 5 ಜನಪ್ರಿಯ ಹಾಗೂ ಜನಪರ ಯೋಜನೆಗಳನ್ನು ಜಾರಿಗೊಳಿಸಿರುವುದು, ಹಾಲು ಉತ್ಪಾದಕ ರೈತರಿಗೆ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ರೂ. 3 ಗಳನ್ನು ಹೆಚ್ಚುವರಿ ಮಾಡಿರುವುದು ತಮಗೆ ಸಹಿಸಲಾಗದೇ ಈ ರೀತಿಯಾಗಿ ತುಪ್ಪದ ನೆಪ ಒಡ್ಡಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳನ್ನು ಮರೆಮಾಚಿ ವಿಷಯಾಂತರಗೊಳಿಸುತ್ತಿರುವುದು ಅತ್ಯಂತ ವಿಷಾದನೀಯ.
6) ಕೆಎಂಎಫ್ ಸಂಸ್ಥೆಯು ತನ್ನದೇ ಆದ ಸ್ವಂತ ಕಾರ್ಯನಿರ್ವಹಣೆ ಹೊಂದಿರುವ ಸ್ವಯತ್ ಸಂಸ್ಥೆಯಾಗಿದ್ದು, ಇದರ ನಡುವೆ ಸರ್ಕಾರವನ್ನು ಏಕೆ ಅನಗತ್ಯವಾಗಿ ಮಧ್ಯೆ ತರುತ್ತಿದ್ದೀರಿ? ಇದು ತಮಗೆ ಶೋಭೆ ತರುವ ಸಂಗತಿಯೇ.
7) ತಿರುಪತಿ ತಿರುಮಲ ದೇವಸ್ಥಾನದಿಂದ ತೀರ ಬೇಡಿಕೆ ಬಂದಿದ್ದ ಕಾರಣ 2021-22ನೇ ಸಾಲಿನಲ್ಲಿ 345.0 ಮೆ.ಟನ್ ತುಪ್ಪವನ್ನು ಸರಬರಾಜು ಮಾಡಲಾಗಿದ್ದನ್ನು ಬಿಟ್ಟು 2020-21ನೇ ಸಾಲು ಮತ್ತು 2022-23ನೇ ಸಾಲುಗಳಲ್ಲಿ ದೇವಸ್ಥಾನಕ್ಕೆ ಯಾವುದೇ ಪ್ರಮಾಣದ ತುಪ್ಪವನ್ನು ಸರಬರಾಜು ಮಾಡಿರುವುದಿಲ್ಲ, ಇದು ತಮ್ಮ ರೈತ ವಿರೋಧಿ ಬಿಜೆಪಿ ಸರ್ಕಾರವಿದ್ದ ಸಮಯದಲ್ಲಿ ಆದುದಲ್ಲವೇ? ಈ ರೀತಿಯಾಗಿ ಟಿಟಿಡಿಗೆ ನಂದಿನಿ ತುಪ್ಪ ಸರಬರಾಜು ಸ್ಥಗಿತಗೊಳಿಸಿದ ಅಪಕೀರ್ತಿಯು ತಮ್ಮ ಬಿಜೆಪಿ ಸರ್ಕಾರದ್ದೇ ಆಗಿದೆಯೇ ಹೊರತು ಇನ್ಯಾವುದೇ ಸರ್ಕಾರದ್ದಲ್ಲ.
8) ಈ ರೀತಿಯ ಅಸಮಂಜಸ ಹೇಳಿಕೆಗಳನ್ನು ನೀಡುತ್ತಿರುವುದು ಹಾಗೂ ನಿರಂತರವಾಗಿ ದುರ್ವರ್ತನೆ ತೋರುತ್ತಿರುವ ತಮ್ಮ ಬಿಜೆಪಿಯವರಿಗೆ ನಾಚಿಕೆಯಾಗಬೇಕು.












Click it and Unblock the Notifications