ನಾಡಗೀತೆ ವಿವಾದ; ಹೈಕೋರ್ಟ್‌ನಲ್ಲಿಯೇ ಹಾಡಿದ ಕಿಕ್ಕೇರಿ ಕೃಷ್ಣಮೂರ್ತಿ!
ಬೆಂಗಳೂರು, ಜುಲೈ 14; ನಾಡಗೀತೆ ವಿವಾದದ ವಿಚಾರಣೆ ವೇಳೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನ್ಯಾಯಾಲಯದ ಸಭಾಂಗಣದಲ್ಲೇ ನಾಡಗೀತೆಯನ್ನು ಮೊಳಗಿಸಿ ಗಮನ ಸೆಳೆದ ಘಟನೆ ನಡೆದಿದೆ. ವಿಚಾರಣೆ ವೇಳೆ ಹಾಜರಿದ್ದ ಅವರು ನ್ಯಾಯಮೂರ್ತಿಗಳ ಎದುರು 5 ವಿಭಿನ್ನ ರಾಗದಲ್ಲಿ ಕುವೆಂಪು ವಿರಚಿತ ನಾಡಗೀತೆಗಳನ್ನು ಹಾಡಿದರು. ಅಷ್ಟೇ ಅಲ್ಲ, ಸ್ವತಃ ನ್ಯಾಯಮೂರ್ತಿಗಳಿಗೆ ವಿವರಣೆ ನೀಡಿದರು.
ಹಾಗಾಗಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಾಲಯದ ಕಲಾಪ ಗುರುವಾರ ರಂಗೇರಿತ್ತು. ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ರದ್ದು ಕೋರಿ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಪೀಠ ವಿಚಾರಣೆ ನಡೆಸುತ್ತಿತ್ತು.

ನಾಡಗೀತೆ ಆಲಿಸಿದ ಬಳಿಕ ನ್ಯಾಯಪೀಠ, ಪ್ರಕರಣದಲ್ಲಿ ಅಡಗಿರುವ ವಿಚಾರಗಳು ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟು ಪ್ರಕರಣದ ಕುರಿತಂತೆ ಸರ್ಕಾರಿ ವಕೀಲರು ಆಳವಾಗಿ ವಿಚಾರಗಳನ್ನು ಶೋಧಿಸಿ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಸಮರ್ಪಕ ಮತ್ತು ಸಮಗ್ರವಾದ ಮಾಹಿತಿ ಕಲೆಹಾಕಿ ನ್ಯಾಯಾಲಯದ ಮುಂದಿಡಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿದರು.
ಸರ್ಕಾರಿ ವಕೀಲರ ವಾದ; ಸರ್ಕಾರಿ ವಕೀಲರು, ಕುವೆಂಪು ಅವರು ಕೆಲವೊಂದು ಷರತ್ತು ವಿಧಿಸಿ ಸಿನಿಮಾದಲ್ಲಿ ನಾಡಗೀತೆ ಬಳಸಲು ಮತ್ತು ರಾಗ ಸಂಯೋಜಿಸಲು ಅನುಮತಿ ನೀಡಿದ್ದಾರೆ ಎಂದರು. ಆಗ ನ್ಯಾಯಮೂರ್ತಿಗಳು, ಕುವೆಂಪು ಅವರು ಅನುಮತಿ ನೀಡಿರುವುದು ನಿಜವೇ? ಎಂದು ಕಿಕ್ಕೇರಿ ಪರ ವಕೀಲರನ್ನು ಪ್ರಶ್ನಿಸಿದರು. ಕಿಕ್ಕೇರಿ ಪರ ವಕೀಲರು, ಕುವೆಂಪು ಸಾಹಿತ್ಯ ಬಳಕೆಗೆ ಮಾತ್ರ ಅನುಮತಿ ನೀಡಿದ್ದಾರೆ ಹೊರತು ಸಂಗೀತ ಸಂಯೋಜನೆಗೆ ಅಲ್ಲ ಎಂದರು.
ಅದರಿಂದ ತೃಪ್ತರಾಗದ ನ್ಯಾಯಮೂರ್ತಿಗಳು, ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನ್ಯಾಯಾಲಯ ತಿಳಿಯಬೇಕಿದೆ. ನಿಮ್ಮ ಕಕ್ಷಿದಾರರು ಲಭ್ಯವಿದ್ದರೆ ಅವರನ್ನು ಕರೆಯಿಸಿ ಎಂದು ಸೂಚಿಸಿದರು. ಇದೇ ವೇಳೆ ಕೋರ್ಟ್ ಹಾಲ್‌ನಲ್ಲಿ ಕಿಕ್ಕೇರಿ ಕೃಷ್ಣ ಮೂರ್ತಿ ಹಾಜರಿದ್ದನ್ನು ತಿಳಿದು, ಅವರಿಂದಲೇ ಹೆಚ್ಚಿನ ಮಾಹಿತಿ ಕೇಳಿತು.
ವಾದ ಮಂಡನೆಗೆ ನಿಂತ ಕಿಕ್ಕೇರಿ, ಕುವೆಂಪು ಅವರು ವಾಸ್ತವವಾಗಿ ಸಿನಿಮಾಕ್ಕೆ ನಾಡಗೀತೆಯ ಸಾಲು ಬಳಸಲು ಅನುಮತಿ ನೀಡಿದ್ದರು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಕಲ್ಯಾಣಿ ರಾಗದಲ್ಲಿ ಸಂಗೀತ ಸಂಯೋಜಿಸಿದ್ದಾರೆ. ಅಶ್ವತ್ಥ್ ಅವರು ಉದಯ ರವಿಚಂದ್ರಿಕೆ ರಾಗ ಮತ್ತು ಅನಂತಸ್ವಾಮಿ ಅವರು ಮಾಯಾ ಮಾಳವ ಗೋಳ ಸಂಗೀತದಲ್ಲಿ ರಾಗ ಸಂಯೋಜಿಸಿದ್ದಾರೆ. ಇದಲ್ಲದೆ, ಇನ್ನು ಹಲವು ರಾಗದಲ್ಲಿ ನಾಡಗೀತೆಯನ್ನು ಹಾಡಬಹುದಾಗಿದೆ ಎಂದರು. ಕ್ಕಿಕ್ಕೇರಿ ಕೃಷ್ಣಮೂರ್ತಿ ತಮ ವಾದಕ್ಕೆ ಪೂರಕವೆಂಬಂತೆ 'ಉದಯ ರವಿಚಂದ್ರಿಕೆ, ಜಂಜೂಟಿ, ಹಿಂಧೋಳ, ಕಲ್ಯಾಣಿ ಮತ್ತು ಮಾಯಾ ಮಾಳವ ಗೋಳ' ರಾಗದಲ್ಲಿ ನಾಡಗೀತೆಯನ್ನು ಹಾಡಿದರು.
ಒಪ್ಪಲಾಗದೆಂದು ವಾದ: ಅಲ್ಲದೆ, ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಒಂದು ವೇಳೆ ಅನಂತ ಸ್ವಾಮಿಯವರೇ ಸಂಯೋಜಿಸಿದ ಧಾಟಿಯಲ್ಲೇ ಹಾಡುವುದಾದರೆ, ಅವರು ಪೂರ್ಣ ಪ್ರಮಾಣದಲ್ಲಿ ಸಂಯೋಜಿಸಿದ ಧಾಟಿಯನ್ನು ನಮ್ಮ ಮುಂದೆ ಸರ್ಕಾರ ಪ್ರಸ್ತುತಪಡಿಸಲಿ. ಆಗ ನಾವು ಒಪ್ಪುತ್ತೇವೆ.
ಎರಡು ಚರಣಗಳನ್ನು ಸಂಯೋಜಿಸಿರುವಾಗ ಪೂರ್ತಿ ಹಾಡನ್ನು ಅದೇ ಧಾಟಿಯಲ್ಲಿ ಹಾಡುವುದನ್ನು ಹೇಗೆ ಕಡ್ಡಾಯ ಮಾಡಲಾಗುತ್ತದೆ. ಇನ್ನೂ ಸಿ. ಅಶ್ವತ್ಥ್ ಅವರು, ನಾಡಗೀತೆ ಎಲ್ಲಾ ಚರಣಗಳಿಗೂ ರಾಗದಲ್ಲಿ ಸಂಯೋಜಿಸಿದ್ದಾರೆ. ಹಾಗಾಗಿ, ಅದೇ ರಾಗದಲ್ಲಿ ನಾಡಗೀತೆ ಹಾಡುವುದು ಸಮಂಜಸ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.
ವಿವಿಧ ರಾಗದಲ್ಲಿ ನಾಡಗೀತೆಯನ್ನು ಕೇಳಿದ ನ್ಯಾಯಮೂರ್ತಿಗಳು,ಸುಗಮ ಸಂಗೀತ ವಿದ್ವಾಸಂರಾಗಿರುವ ಕಿಕ್ಕೇರಿ ಅವರು ಪ್ರಕರಣವನ್ನು ಪರಿಗಣಿಸಲು ಯೋಗ್ಯವಾದ ಕಾರಣಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ನಾಡಗೀತೆಯ ಸಾಲುಗಳನ್ನು ಶಾಸ್ತ್ರೀಯತೆಯೊಂದಿಗೆ ಮಧುರವಾಗಿ ಹಾಡಿದ್ದಾರೆ. ಜತೆಗೆ, ಪ್ರಕರಣವನ್ನು ಮೆರಿಟ್ ಮೇಲೆ ಖುದ್ದು ವಾದ ಮಂಡಿಸಿದ್ದಾರೆ. ಹಾಗಾಗಿ, ಈ ಕುರಿತು ಸರ್ಕಾರಿ ವಕೀಲರು ತಮ್ಮ ಪ್ರತಿಕ್ರಿಯೆ ತಿಳಿಸಬೇಕು ಎಂದು ಸೂಚಿಸಿದರು.












Click it and Unblock the Notifications