ಮೈಸೂರಿನಲ್ಲಿ ಕ್ಲೀನಿಂಗ್ ಕೆಮಿಕಲ್ ಘಟಕದ ಹೆಸರಲ್ಲಿ ಡ್ರಗ್ಸ್ ಲ್ಯಾಬ್ ಪತ್ತೆ: 10 ಕೋಟಿ ರೂ. ಮೌಲ್ಯದ ಮಾದಕ ವಶ
ಮೈಸೂರು: ಕ್ಲೀನಿಂಗ್ ಕೆಮಿಕಲ್ ತಯಾರಿಕಾ ಘಟಕದ ನೆಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೂರ್ಣ ಪ್ರಮಾಣದ ಅಕ್ರಮ ಮಾದಕ ವಸ್ತು ತಯಾರಿಕಾ ಲ್ಯಾಬೊರೇಟರಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮೈಸೂರಿನಲ್ಲಿ ಪತ್ತೆಹಚ್ಚಿದೆ. ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಉತ್ಪಾದನಾ ಘಟಕದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ, ಸಿಂಥೆಟಿಕ್ ಡ್ರಗ್ಸ್ ತಯಾರಿಸಲಾಗುತ್ತಿತ್ತು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ಸುಳಿವು
ಈ ಘಟಕವನ್ನು ಡ್ರಗ್ಸ್ ಜಾಲದ ಪ್ರಮುಖ ಆರೋಪಿಯಾದ ಮಹೇಂದ್ರ ಕುಮಾರ್ ವಿಷ್ಣೋಯ್‌ನ ಸಂಬಂಧಿಕನೊಬ್ಬ ಬಾಡಿಗೆಗೆ ಪಡೆದುಕೊಂಡಿದ್ದು, ವಿಷ್ಣೋಯ್ ಈಗಾಗಲೇ ಬಂಧನಕ್ಕೊಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ಜನವರಿ 28ರಂದು ಗುಪ್ತಚರ ಮಾಹಿತಿ ಆಧರಿಸಿ ಗುಜರಾತ್‌ನ ಸೂರತ್ ಜಿಲ್ಲೆಯ ಪಾಲ್ಸಾನಾ ಬಳಿ ಕರ್ನಾಟಕ ನೋಂದಣಿಯ ಫಾರ್ಚುನರ್ ಕಾರನ್ನು ಎನ್‌ಸಿಬಿ ಅಧಿಕಾರಿಗಳು ತಡೆದಿದ್ದರು. ವಾಹನ ಪರಿಶೀಲನೆಯಲ್ಲಿ ಸುಮಾರು 35 ಕೆ.ಜಿ ಮೆಫೆಡ್ರೋನ್ ಪತ್ತೆಯಾಗಿದ್ದು, ಅದನ್ನು ರಾಜಸ್ಥಾನಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿತ್ತು. ಈ ವೇಳೆ ವಿಷ್ಣೋಯ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ನಂತರ ವಿಷ್ಣೋಯ್‌ನ ಪಾಲ್ಸಾನಾದ ದಸ್ತಾನ್ ರೆಸಿಡೆನ್ಸಿ ನಿವಾಸದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 1.8 ಕೆಜಿ ಅಫೀಮು, ₹25.6 ಲಕ್ಷ ನಗದು ಹಾಗೂ ವಿವಿಧ ರಾಸಾಯನಿಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ಸೂರತ್ ಪೊಲೀಸರು ಸಹಕಾರ ನೀಡಿದ್ದಾರೆ. ಮಹೇಂದ್ರ ಕುಮಾರ್ ವಿಷ್ಣೋಯ್ ವಿರುದ್ಧ ರಾಜಸ್ಥಾನದಲ್ಲಿ ಮೂರು ಹಾಗೂ ಗುಜರಾತ್‌ನಲ್ಲಿ ಒಂದು ಸೇರಿ ನಾಲ್ಕು ಮಾದಕ ದ್ರವ್ಯ ಸಂಬಂಧಿತ ಪ್ರಕರಣಗಳು ದಾಖಲಾಗಿವೆ.
ಜೈಲಿನಲ್ಲಿ ಬಂಧಿತನಾಗಿದ್ದ ವೇಳೆ ಇತರ ಆರೋಪಿಗಳ ಸಂಪರ್ಕದಿಂದ ಸಿಂಥೆಟಿಕ್ ಡ್ರಗ್ಸ್ ತಯಾರಿಕೆ, ಮಾರುಕಟ್ಟೆ ಬೇಡಿಕೆ ಮತ್ತು ಸರಬರಾಜು ಜಾಲದ ಕುರಿತು ತಿಳಿದುಕೊಂಡು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮೈಸೂರಿನಲ್ಲಿ ಅಕ್ರಮ ಲ್ಯಾಬ್ ಸ್ಥಾಪಿಸಿದ್ದಾನೆ ಎಂದು ಎನ್‌ಸಿಬಿ ಹೇಳಿದೆ. ಅಕ್ರಮ ಲ್ಯಾಬ್ ಅನ್ನು 2024ರಲ್ಲೇ ಸ್ಥಾಪಿಸಲಾಗಿದ್ದು, ಅದರಿಂದ ಹಲವಾರು ಬಾರಿ ಡ್ರಗ್ಸ್ ತಯಾರಿಸಿ ವಿತರಣೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಸುಮಾರು ₹10 ಕೋಟಿ ಮೌಲ್ಯದ ಮಾದಕ ವಸ್ತುಗಳು, ₹25.6 ಲಕ್ಷ ನಗದು, ಟೊಯೋಟಾ ಫಾರ್ಚುನರ್ ಕಾರು ಹಾಗೂ 500 ಕೆಜಿಗೂ ಹೆಚ್ಚು ತೂಕದ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ಅಕ್ರಮ ಲ್ಯಾಬ್ ಘಟಕವನ್ನು ಫಾರೆನ್ಸಿಕ್ ತಂಡದ ಪರಿಶೀಲನೆಗಾಗಿ ಸೀಲ್ ಮಾಡಲಾಗಿದ್ದು, ಬಂಧಿತ ನಾಲ್ವರೂ ರಾಜಸ್ಥಾನದ ಜಾಲೋರ್ ಜಿಲ್ಲೆಯವರಾಗಿದ್ದಾರೆ. ಡ್ರಗ್ಸ್ ಜಾಲದ ಇತರ ಸದಸ್ಯರು ಹಾಗೂ ಲ್ಯಾಬ್‌ಗೆ ಬೇಕಾದ ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳ ಸರಬರಾಜು ಜಾಲ ಪತ್ತೆ ಹಚ್ಚಲು ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿ ತರಾಟೆ
ಈ ಪ್ರಕರಣ ಉಲ್ಲೇಖಿಸಿ ರಾಜ್ಯ ಬಿಜೆಪಿಯು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಗುಜರಾತ್‌ನಿಂದ ಜಾಡು ಹಿಡಿದು ಬಂದ ಎನ್‌ಸಿಬಿ ಅಧಿಕಾರಿಗಳಿಗೆ ಮೈಸೂರಿನಲ್ಲಿ ಕಂಡಿದ್ದು 'ಬೃಹತ್ ಡ್ರಗ್ಸ್ ಲ್ಯಾಬ್'. ಆದರೆ ನಮ್ಮ ಮಾನ್ಯ ಗೃಹ ಸಚಿವರಿಗೆ ಕಂಡಿದ್ದು ಬರೀ 'ಫಿನಾಯಿಲ್ ಫ್ಯಾಕ್ಟರಿ' ಎಂದು ವ್ಯಂಗ್ಯವಾಡಿದೆ. ಸಾವಿರಾರು ಕಿಲೋಮೀಟರ್ ದೂರದ ಗುಜರಾತ್ ಪೊಲೀಸರಿಗೆ ಸಿಕ್ಕ "ಡ್ರಗ್ಸ್ ವಾಸನೆ", ಇಲ್ಲೇ ಇರುವ ರಾಜ್ಯ ಗೃಹ ಇಲಾಖೆಗೆ ಕೇವಲ "ಫಿನಾಯಿಲ್ ವಾಸನೆ"ಯಾಗಿ ಕಂಡಿದ್ದು ವಿಪರ್ಯಾಸವೇ ಸರಿ ಎಂದು ಹೇಳಿದೆ.
ಡ್ರಗ್ಸ್ ಮಾಫಿಯಾವನ್ನು ಮುಚ್ಚಿ 'ಕ್ಲೀನ್' ಮಾಡಲು ಫಿನಾಯಿಲ್ ಕಥೆ ಕಟ್ಟುತ್ತಿದ್ದೀರಾ ಜಿ.ಪರಮೇಶ್ವರ್ ಅವರೇ? ತನಿಖೆಗೂ ಮುನ್ನವೇ ಅವಸರದಲ್ಲಿ ಗೃಹ ಸಚಿವರು ಫಿನಾಯಿಲ್ ತಯಾರಿಕಾ ಘಟಕ ಎಂದು ಕ್ಲೀನ್ ಚಿಟ್ ಕೊಡಲು ಕಾರಣವೇನು? ಯಾರಿದ್ದಾರೆ ಇದರ ಹಿಂದೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.












Click it and Unblock the Notifications