'ಮೈಸೂರು ಸ್ಯಾಂಡಲ್ ಸೋಪ್' ತಯಾರಿಕೆ ಘಟಕ ಈ ಜಿಲ್ಲೆಯಲ್ಲಿ ಸ್ಥಾಪನೆ: ಯೋಜನೆ ವಿವರ
ವಿಜಯಪುರ, ಜನವರಿ 12: ಕರ್ನಾಟಕದ ಐತಿಹಾಸಿಕ ಹಾಗೂ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ನಿಂದ ತಯಾರಿಸಲ್ಪಟ್ಟ ಸಾಬೂನಿನ ಬ್ರ್ಯಾಂಡ್ ಆಗಿರುವ 'ಮೈಸೂರು ಸ್ಯಾಂಡಲ್ ಸೋಪ್' ತಯಾರಿಕೆ ಘಟಕವನ್ನು ಉತ್ತರ ಕರ್ನಾಟಕ ಭಾಗದಲ್ಲಿ ನಿರ್ಮಾಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಒಟ್ಟು 10 ಎಕರೆ ಪ್ರದೇಶದಲ್ಲಿ ಬೃಹತ್ ಸೋಪ್ ಉತ್ಪಾದನಾ ಘಟಕ ನಿರ್ಮಾಣವಾಗಲಿದೆ.
ಹೌದು, ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ ಬಳಿ 10 ಎಕರೆ ಜಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಆರಂಭಿಸಲಾಗುವುದು. ನೂರಾರು ಉದ್ಯೋಗ ಸೃಷ್ಟಿಯಾಗಲಿವೆ. ಈ ಭಾಗದ ಜನರಿಗೆ ಆಸರೆಯಾಗಲಿದೆ ಎಂದು ಶನಿವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧಿಕೃತ ಮಾಹಿತಿ ನೀಡಿದ್ದಾರೆ.

ಈ ಜಿಲ್ಲೆಯಲ್ಲಿ ನೂತನ ಘಟಕ ಸ್ಥಾಪಿಸುವುದರಿಂದ 400 ಮಂದಿಗೆ ಉದ್ಯೋಗ ಸಿಗಲಿದೆ. ಜತೆಗೆ ಬೆಂಗಳೂರಿನಲ್ಲೂ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಕಾರ್ಖಾನೆ ವಿಸ್ತರಣೆ ಮತ್ತು ಆಧುನೀಕರಣ ನಡೆಯುತ್ತಿದೆ ಎಂದು ಜಿಲ್ಲೆಯಲ್ಲಿ KSDL ಏರ್ಪಡಿಸಿರುವ ಸಾಬೂನು ಮೇಳಕ್ಕೆ ಚಾಲನೆ ನೀಡಿ ಸಚಿವರು ಮಾಹಿತಿ ಪ್ರಕಟಿಸಿದರು.
ಸೋಪ್ ಉತ್ಪಾದಣಾ ಘಟಕ ನಿರ್ಮಾಣಕ್ಕೆ ಯತ್ನಾಳ್ ಮೆಚ್ಚುಗೆ
ಇದಕ್ಕೂ ಮೊದಲು ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ಮಾತನಾಡಿ, ವಿಜಯಪುರದಲ್ಲಿ ಕೂಡ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವರು, ತಮ್ಮ ಯೋಜನೆಯನ್ನು ಪ್ರಕಟಿಸಿದರು. ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರು ಸಹ ಸಚಿವರು ಇದುವರೆಗೆ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು.

ವಿಜಯಪುರದ ಸಾಬೂನು ಘಟಕದಿಂದ ಉತ್ತರ ಕರ್ನಾಟಕ ಕ್ಕೆ ಮಾತ್ರವಲ್ಲದೆ, ಮಹಾರಾಷ್ಟ್ರ ಕ್ಕೂ ಇಲ್ಲಿಂದಲೇ ಸರಬರಾಜು ಮಾಡುವ ಕೆಲಸ ಮಾಡಲಾಗುವುದು. ಕೆಎಸ್‌ಡಿಎಲ್ ಮೊದಲು ನಷ್ಟದಲ್ಲಿತ್ತು. ಈಗ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದ್ದು, ಸಂಸ್ಥೆಯು ಲಾಭದ ಹಳಿಗೆ ಬಂದಿದೆ. ಜತೆಗೆ ತಾವು ಸಚಿವರಾದ ಮೇಲೆ ಗುಣಮಟ್ಟದ 20 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಬರುವ ದಿನಗಳಲ್ಲಿ ಸಂಸ್ಥೆಯ ಗತವೈಭವ ಮರುಕಳಿಸುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಿರಾಣಿ ಅಂಗಡಿ, ವಿಮಾನ ನಿಲ್ದಾಣ, ವಿದೇಶಗಳ ಮಳಿಗೆ ಹೀಗೆ ಎಲ್ಲ ಕಡೆಯೂ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಸಂಸ್ಥೆಯ ಇತರ ಉತ್ಪನ್ನಗಳು ದೊರೆಯುವಂತೆ ಮಾಡಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯದ ವಿಶಿಷ್ಟ ಉತ್ಪನ್ನಗಳ ಮಾರಾಟಕ್ಕೆಂದೇ ಕಲಾಲೋಕ ಮಳಿಗೆ ಸ್ಥಾಪಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಸಿ ಎಸ್ ನಾಡಗೌಡ ಕೂಡ ಸಂಸ್ಥೆಯ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದು ಅವರು ನುಡಿದಿದ್ದಾರೆ.












Click it and Unblock the Notifications