ಬಿಡದಿಯ ನಲ್ಲಿಗುಡ್ಡೆ ಕೆರೆಗೆ ಮುತ್ತಪ್ಪ ರೈ ದಂಪತಿ ಬಾಗಿನ ಅರ್ಪಣೆ
ರಾಮನಗರ, ಅಕ್ಟೋಬರ್ 14: ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಮಳೆಯಿಂದ ಕೆರೆಗಳು ಕೋಡಿ ಬಿದ್ದಿವೆ. ಎಷ್ಟೋ ವರ್ಷಗಳ ನಂತರ ಇಂಥ ಸಂಭ್ರಮ ನೋಡುತ್ತಿರುವ ಜನರು ಕೆರೆಗಳಿಗೆ ಬಾಗಿನ ಅರ್ಪಿಸುವುದಕ್ಕೆ ಮುಗಿಬಿದ್ದಿದ್ದಾರೆ. ಇನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಬರಿದಾಗಿದ್ದ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆ ಭರ್ತಿಯಾಗಿ, ಕೋಡಿ ಬಿದ್ದಿದೆ.
ಕೋಡಿ ಬಿದ್ದ ನೆಲ್ಲಿಗುಡ್ಡೆ ಕೆರೆಗೆ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ತಮ್ಮ ಪತ್ನಿ ಅನೂರಾಧರೊಂದಿಗೆ ಶುಕ್ರವಾರ ಬಾಗಿನ ಅರ್ಪಿಸಿದ್ದಾರೆ. 14 ವರ್ಷಗಳಿಂದ ತುಂಬದ ನಲ್ಲಿಗುಡ್ಡೆ ಕೆರೆ ಈ ಬಾರಿ ರೇಷ್ಮೆನಗರಿ ರಾಮನಗರ ಜಿಲ್ಲೆಯ ಬರಗಾಲವನ್ನ ಬಡಿದೋಡಿಸುವ ನಿಟ್ಟಿನಲ್ಲಿ ಸುರಿಯುತ್ತಿರುವ ಮಳೆಯಿಂದ ಕೋಡಿ ಬಿದ್ದಿದೆ.

ಈ ಹಿನ್ನೆಲೆಯಲ್ಲಿ ಬಿಡದಿ ಸುತ್ತಮುತ್ತ ಅಂತರ್ಜಲ ಕೂಡ ವೃದ್ಧಿಯಾಗಿದೆ. ಇದರಿಂದ ಸಂತೋಷಗೊಂಡಿರುವ ಬಿಡದಿ ಭಾಗದ ಜನರು ನೆಲ್ಲಿಗುಡ್ಡೆ ಕೆರೆಗೆ ಬಾಗಿನ ಅರ್ಪಿಸುತ್ತಾ ಇದ್ದಾರೆ. ಹಾಗೆಯೇ ಶುಕ್ರವಾರ ತಮ್ಮ ಪತ್ನಿ ಅನೂರಾಧ ಜೊತೆಗೂಡಿ ಕೆರೆಯ ಬಳಿ ವಿಶೇಷ ಪೂಜೆ ಸಲ್ಲಿಸಿದ ಮುತ್ತಪ್ಪ ರೈ, ಕೆರೆಗೆ ಬಾಗಿನ ಅರ್ಪಿಸಿದರು.
ಈ ಬಾರಿಯಂತೆ ಪ್ರತಿ ವರ್ಷವೂ ಮಳೆ ಬರಲಿ. ನಾಡಿನಾದ್ಯಂತ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಬಾಗಿನ ಅರ್ಪಿಸಿದ ನಂತರ ಮುತ್ತಪ್ಪ ರೈ ದಂಪತಿ ತಿಳಿಸಿದರು.












Click it and Unblock the Notifications