ಯಕ್ಷಗಾನದಲ್ಲಿ ದೇವಿಯಾದ ಮುಸ್ಲಿಂ ಯುವತಿಗೆ ವಿರೋಧವೇಕೆ? ಕಮೆಂಟ್ ಮಾಡಿದವರ ಬಗ್ಗೆ ಭಾವುಕರಾದ ಅರ್ಷಿಯಾ ಖಾನ್
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧವಾಗಿರುವ ಯಕ್ಷಗಾನ ಕಲೆಗೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಯುವತಿಯೊಬ್ಬರು ಯಕ್ಷಗಾನ ರಂಗಸ್ಥಳವೇರಿ ದೇವಿಯ ಪಾತ್ರವನ್ನ ಮಾಡುವ ಮೂಲಕ ಕರಾವಳಿಯ ಭಾಗದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಹೌದು, ಯಕ್ಷಪ್ರಿಯೆ ಎಂದೇ ಕರೆಯಲ್ಪಡುವ ಅರ್ಷಿಯಾ ಖಾನ್ ಅವರು ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ಕ್ಷೇತ್ರದ ರಾಜಾಂಗಣದಲ್ಲಿ ಅಷ್ಟಭುಜೆ ಅಂದರೆ ದೇವಿ ಕಾಣಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಅವರ ಈ ಸಾಧನೆಗೆ ಒಂದು ಕಡೆ ಸಾವಿರಾರು ಜನರ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೊಂದು ಕಡೆ ತೀವ್ರ ಸ್ವರೂಪದ ಟೀಕೆ ಹಾಗೂ ವಿರೋಧಗಳು ಕೂಡ ಕೇಳಿಬಂದಿವೆ.

ಬಾಲ್ಯದಿಂದಲೂ ಯಕ್ಷಗಾನ ಕಲಿಯುವ ಹಂಬಲ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಾದ ಎಂಬ ಊರಿನವರಾದ ಅರ್ಷಿಯಾ ಖಾನ್, ರಂಗಭೂಮಿಯಲ್ಲಿ ಯಕ್ಷಪ್ರಿಯೆ ತನು ವಿಟ್ಲ ಎಂಬ ಹೆಸರಿನಿಂದಲೇ ಹೆಚ್ಚು ಚಿರಪರಿಚಿತರು. ಬಾಲ್ಯದಲ್ಲಿ ತಮ್ಮ ಊರಿನ ಅಕ್ಕಪಕ್ಕದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದ ಇವರಿಗೆ, ಈ ಕಲೆಯ ಬಗ್ಗೆ ಆಕರ್ಷಣೆ ಉಂಟಾಗಿತ್ತು.
ಕೇವಲ 9ನೇ ವಯಸ್ಸಿನಲ್ಲಿಯೇ (4ನೇ ತರಗತಿಯಲ್ಲಿದ್ದಾಗ) ಯಕ್ಷಗಾನ ಕಲಿಯಲು ಆರಂಭಿಸಿದ ಇವರ ಕಲಾ ಪಯಣಕ್ಕೆ ನಿವೃತ್ತ ಉಪ ತಹಶೀಲ್ದಾರ್ ಆಗಿರುವ ತಂದೆ ಅಬ್ದುಲ್ ಖಾದರ್ ಹಾಗೂ ತಾಯಿ ಮುಮ್ತಾಜ್ ಅವರು ಬೆನ್ನೆಲುಬಾಗಿ ನಿಂತು ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ.
ಬಾಲ್ಯದ ಆಸಕ್ತಿಯಾಗಿ ಶುರುವಾದ ಇವರ ಈ ಪಯಣ ಇದೀಗ 12 ವರ್ಷಗಳ ಸುದೀರ್ಘ ರಂಗ ಅನುಭವವನ್ನು ಹೊಂದಿದೆ. ಯಕ್ಷಗಾನ ರಂಗಸ್ಥಳದಲ್ಲಿ ಗೆಜ್ಜೆ ಕಟ್ಟಿ ಪ್ರವೇಶ ಮಾಡಿದ ಹಾಗೂ ಪ್ರಮುಖ ದೇವಿಯ ಪಾತ್ರ ಮಾಡಿದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಅರ್ಷಿಯಾ ಪಾತ್ರರಾಗಿದ್ದಾರೆ.
ದೇವಿಯ ಪಾತ್ರಕ್ಕಾಗಿ ಕಟ್ಟುನಿಟ್ಟಿನ ವ್ರತಾಚರಣೆ
ಯಕ್ಷಗಾನದಲ್ಲಿ ಶ್ರೀದೇವಿಯಂತಹ ಪವಿತ್ರ ಹಾಗೂ ದೈವಿಕ ಪಾತ್ರವನ್ನು ನಿರ್ವಹಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ವಿಶೇಷ ಸಿದ್ಧತೆ ಹಾಗೂ ಶ್ರದ್ಧೆಯ ಅಗತ್ಯವಿರುತ್ತದೆ. ಈ ಜವಾಬ್ದಾರಿಯನ್ನು ಅರಿತ ಅರ್ಷಿಯಾ ಖಾನ್, ದೇವಿಯ ಪಾತ್ರಕ್ಕಾಗಿ ಕಟ್ಟುನಿಟ್ಟಿನ ಸಾತ್ವಿಕ ಸಸ್ಯಾಹಾರಿ ಆಹಾರ ಪದ್ಧತಿಯನ್ನ ಅಳವಡಿಸಿಕೊಂಡು, ಧಾರ್ಮಿಕ ವ್ರತಾಚರಣೆಗಳನ್ನ ಶ್ರದ್ಧೆಯಿಂದ ಪಾಲಿಸಿದ್ದಾರೆ.
ಕದ್ರಿ ದೇವಸ್ಥಾನದ ಆವರಣದಲ್ಲಿರುವ ಕದಳಿ ಕಲಾ ಕೇಂದ್ರದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇವರು, ಖ್ಯಾತ ಯಕ್ಷಗಾನ ಗುರುಗಳಾದ ಕದ್ರಿ ರಮೇಶ್ ಭಟ್ ಅವರ ಗರಡಿಯಲ್ಲಿ ಪಳಗಿದ್ದಾರೆ. ಈ ಹಿಂದೆ 'ದೇವಿ ಮಹಾತ್ಮೆ' ಪ್ರಸಂಗದಲ್ಲಿ ಶುಂಭ-ನಿಶುಂಭ, ಆದಿಮಾಯೆಯಂತಹ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದ ಇವರು, ಇದೀಗ ಅಷ್ಟಭುಜೆ ಶ್ರೀದೇವಿಯಾಗಿ ನಟಿಸುವ ಮೂಲಕ ತಮ್ಮ ಕಲಾಜೀವನದಲ್ಲಿ ಬಹುದೊಡ್ಡ ಮೈಲುಗಲ್ಲನ್ನು ತಲುಪಿದ್ದಾರೆ.
ಮುಸ್ಲಿಂ ಯುವತಿಯ ಯಕ್ಷಗಾನ ಸಾಧನೆ
ಇತ್ತೀಚೆಗೆ ಕದ್ರಿ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಯಕ್ಷಗಾನದಲ್ಲಿ ಅರ್ಷಿಯಾ ಖಾನ್ ಅವರು ಅಷ್ಟಭುಜೆಯಾಗಿ ಮಿಂಚಿದರು. ವಿಶೇಷವೆಂದರೆ, ನವರಾತ್ರಿಯ ಸಂದರ್ಭದಲ್ಲಿ ಕಟ್ಟುನಿಟ್ಟಿನ ವ್ರತಾಚರಣೆ ಮಾಡಿ, ಶ್ರದ್ಧೆ ಹಾಗೂ ಭಕ್ತಿಯಿಂದ ಪೊಳಲಿ ರಾಜರಾಜೇಶ್ವರಿ ಅಮ್ಮನ ಸೀರೆಯನ್ನ ಉಟ್ಟು ಅವರು ರಂಗಸ್ಥಳವೇರಿದ್ದರು. ಅವರ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಯಕ್ಷಾಭಿಮಾನಿಗಳು ಸೇರಿದ್ದರು ಎನ್ನುವುದು ಅವರ ಜನಪ್ರಿಯತೆಗೆ ಸಾಕ್ಷಿ.
ಅರ್ಷಿಯಾ ಖಾನ್‌ಗೆ ಯಾಕಿಷ್ಟು ವಿರೋಧ?
ಮುಸ್ಲಿಂ ಯುವತಿಯೊಬ್ಬಳು ಹಿಂದೂ ದೇವಿಯ ಪಾತ್ರ ಮಾಡಿದ್ದನ್ನ ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಜೀವಂತವಾಗಿರುವಾಗಲೇ ಅರ್ಷಿಯಾ ಖಾನ್ ಅವರಿಗೆ ಶ್ರದ್ಧಾಂಜಲಿ ಕೋರಿ ಪೋಸ್ಟ್‌ಗಳನ್ನ ಹಾಕುವ ಮೂಲಕ ವಿಕೃತಿ ಮೆರೆದಿದ್ದಾರೆ.
ಇತ್ತೀಚೆಗೆ ನಮ್ಮ ಕುಡ್ಲ ಯುಟ್ಯೂಬ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅರ್ಷಿಯಾ, "ಶ್ರದ್ಧಾಂಜಲಿ ಹಾಕಿದವರಿಗೆ ಧನ್ಯವಾದಗಳು, ನಾನು ಮತ್ತೊಮ್ಮೆ ಬದುಕಿ ಪ್ರತ್ಯಕ್ಷಳಾಗುತ್ತೇನೆ. ನಾನು ಕಲಾವಿದೆಯಲ್ಲ, ಈಗಷ್ಟೇ ಯಕ್ಷಗಾನ ಕಲಿಯುತ್ತಿರುವ ವಿದ್ಯಾರ್ಥಿನಿ. ನಾನು ನಂಬಿದ ದೈವ ಉಳ್ಳಾಲ್ತಿ ಅಮ್ಮ ಹಾಗೂ ಪೊಳಲಿ ರಾಜರಾಜೇಶ್ವರಿ ಅಮ್ಮನ ಆಶೀರ್ವಾದದಿಂದ ನನಗೆ ಈ ಗೆಜ್ಜೆ ಕಟ್ಟುವ ಭಾಗ್ಯ ಸಿಕ್ಕಿದೆ. ಟೀಕೆಗಳನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ" ಎಂದು ಉತ್ತರ ನೀಡಿದ್ದಾರೆ.
ಕರಾವಳಿಯ ಜನರ ಬೆಂಬಲ
ಶೇಕಡಾ ಒಂದರಷ್ಟು ಜನ ವಿರೋಧ ಮಾಡಿದರೆ, ಉಳಿದ ಶೇಕಡಾ 99ರಷ್ಟು ತುಳುನಾಡಿನ ಜನತೆ ಅರ್ಷಿಯಾ ಖಾನ್ ಅವರ ಬೆನ್ನಿಗೆ ನಿಂತಿದ್ದಾರೆ. ಹಿರಿಯ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಹಲವು ದಿಗ್ಗಜರು ಅರ್ಷಿಯಾ ಅವರನ್ನು ಸನ್ಮಾನಿಸಿ, ಆಶೀರ್ವದಿಸಿದ್ದಾರೆ.
"ನನ್ನ ಭಕ್ತಿಯನ್ನ ನೋಡಿ ಜನರು ನನಗೆ ದೇವಸ್ಥಾನದ ಚೌಕಿಯಲ್ಲಿ ಕುಂಕುಮ, ಅರಿಶಿನ ಹಾಗೂ ಬಳೆಗಳನ್ನ ನೀಡಿ ಗೌರವಿಸಿದ್ದಾರೆ. ಪಬ್, ಕ್ಲಬ್‌ಗಳಿಗೆ ಹೋಗದೆ ನಾನು ದೇವಸ್ಥಾನಗಳಲ್ಲಿ, ರಂಗಸ್ಥಳದಲ್ಲಿ ದೇವಿಯ ರೂಪದಲ್ಲಿ ಕಾಣಿಸಿಕೊಂಡಿದ್ದೇ ನನ್ನ ಜನ್ಮ ಸಾರ್ಥಕ. ನನ್ನ ಗುರುಗಳಾದ ರಮೇಶ್ ಭಟ್ ಅವರು ಸಮಾಜದ ವಿರೋಧದ ನಡುವೆಯೂ ನನಗೆ ಬೆಂಬಲವಾಗಿ ನಿಂತಿದ್ದಾರೆ" ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ನೈಜ ಭಕ್ತಿಗೆ ಒಲಿದ ಕಲೆ: ಯಕ್ಷಪ್ರಿಯೆ ಈಗ ದೇವಿಪ್ರಿಯೆ
ಧರ್ಮದ ಹೆಸರಿನಲ್ಲಿ ನವರಾತ್ರಿಯ ದಾಂಡಿಯಾ ಕಾರ್ಯಕ್ರಮಗಳಲ್ಲಿ ಸಿನಿಮಾ ಹಾಡುಗಳಿಗೆ ಕುಣಿಯುವವರ ನಡುವೆ, ಅನ್ಯ ಧರ್ಮದ ಯುವತಿಯೊಬ್ಬಳು ಶುದ್ಧಾಚಾರದಿಂದ ಒಂದು ಹೊತ್ತಿನ ಊಟ ಮಾಡಿ, ವ್ರತ ಆಚರಿಸಿ ದೇವಿಯ ಪಾತ್ರ ಮಾಡಿದ್ದು ನಿಜಕ್ಕೂ ಮಾದರಿ.
ಯಕ್ಷಗಾನ ಕಲಿಯುವ ಹಂಬಲದಿಂದ ಬಂದ ಅರ್ಷಿಯಾ ಖಾನ್ ಈಗ ಕೇವಲ ಯಕ್ಷಪ್ರಿಯೆಯಾಗಿ ಮಾತ್ರ ಉಳಿದಿಲ್ಲ, ಕರಾವಳಿ ಭಕ್ತರ ಪಾಲಿಗೆ ದೇವಿಪ್ರಿಯೆಯಾಗಿಯೂ ಬದಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಯಕ್ಷಗಾನದ ಹೆಜ್ಜೆ ಹಾಗೂ ಹಾವಭಾವಗಳಲ್ಲಿರುವ ತಮ್ಮ ಸಣ್ಣಪುಟ್ಟ ತಪ್ಪುಗಳನ್ನ ತಿದ್ದಿಕೊಂಡು ಮತ್ತಷ್ಟು ಉತ್ತಮವಾಗಿ ದೇವಿಯ ಪಾತ್ರವನ್ನು ನಿರ್ವಹಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಕಲೆಯ ಮುಂದೆ ಯಾವುದೇ ಜಾತಿ, ಧರ್ಮವಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.


Click it and Unblock the Notifications
