ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾದ ಹಂಸಲೇಖ
ಬೆಂಗಳೂರು, ನ.25: ಪೇಜಾವರ ಶ್ರೀಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾದಬ್ರಹ್ಮ ಹಂಸಲೇಖ ಅವರು ಗುರುವಾರ (ನ.25) ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.
ಹಂಸಲೇಖ ಪರವಾಗಿ ನಟ ಚೇತನ್ ಸಹ ಠಾಣೆ ಎದುರು ಹಾಜರಾಗಿದ್ದರು. ಚೇತನ್ ಪರವಾಗಿ ಕೆಲವು ಕನ್ನಡಪರ ಸಂಘಟನೆಗಳು ಮತ್ತು ವಿರುದ್ಧವಾಗಿ ಭಜರಂಗದಳ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಕಾರಣದಿಂದಾಗಿ ಪೊಲೀಸ್ ಠಾಣೆಯ ಮುಂದೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ ಅವರು "ಅಸ್ಪೃಶ್ಯತೆ ದೇಶಕ್ಕಂಟಿದ ಶಾಪ. ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಮಾಡಿಕೊಟ್ಟರೆ ತಿನ್ನುತ್ತಿದ್ದರೇನು? ಎಂದು ಪ್ರಶ್ನೆ ಮಾಡಿದ್ದರು. ಇದು ತೀವ್ರ ವಿವಾದಕ್ಕೆ ಎಡೆ ಮಡಿಕೊಟ್ಟಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದವು, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು.

ಈ ಸಂಬಂಧ ಹಂಸಲೇಖ ಅವರು ವಿಚಾರಣೆಗೆ ಹಾಜರಾಗುವಂತೆ ಬಸವನಗುಡಿ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಹಂಸಲೇಖ ಬೆಂಗಳೂರಿನಲ್ಲಿ ಇರದಿದ್ದ ಕಾರಣ ವಿಚಾರಣೆಗೆ ಬಂದಿರಲಿಲ್ಲ. ಇದರಿಂದ ಪೊಲೀಸರು ಅವರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು.
ವಕೀಲರೊಂದಿಗೆ ಬಂದ ಹಂಸಲೇಖ
ತಮ್ಮ ವಿರುದ್ಧ ದಾಖಲಾಗಿರುವುದ ದೂರಿಗೆ ಸಂಬಂಧಿಸಿದಂತೆ ಹಂಸಲೇಖ ಅವರು ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ವಕೀಲರೂ ಸಹ ಜೊತೆಗಿದ್ದರು. ಕಾರಿನಲ್ಲಿ ನೇರವಾಗಿ ಠಾಣೆಯ ಮುಂದೆ ಬಂದಿಳಿದ ಹಂಸಲೇಖ ಅವರನ್ನು ಪೊಲೀಸರು ಒಳಗೆ ಕರೆದೊಯ್ದು ಅವರ ಮೈಸೂರಿನ ಭಾಷಣ ಕುರಿತು ಹೇಳಿಕೆಯನ್ನು ಪಡೆದರು.
ಚೇತನ್ ಸಹ ಹಾಜರ್:
''ಹಂಸಲೇಖ ಪೊಲೀಸ್ ಠಾಣೆಗೆ ಹಾಜರಾದರೆ ಅವರೊಟ್ಟಿಗೆ ನಾನು ಸಹ ಠಾಣೆಗೆ ಬರುತ್ತೇನೆ'' ಎಂದು ನಟ ಚೇತನ್ ಈಗಾಗಲೇ ಹೇಳಿಕೆ ನೀಡಿದ್ದರು. ಅದರಂತೆ ಅವರೂ ಸಹ ಹಂಸಲೇಖ ಅವರೊಟ್ಟಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಪೊಲೀಸರು ಅವರನ್ನು ಠಾಣೆಯ ಹೊರಭಾಗದಲ್ಲಿಯೇ ತಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಚೇತನ್, "ದೇಶದಲ್ಲಿ ಪ್ರತಿಯೊಬ್ಬರಿಗೂ ವಾಕ್‌ಸ್ವಾತಂತ್ರ್ಯ ಇದೆ. ಹಂಸಲೇಖ ಅವರು ತಾವು ಏನು ಹೇಳಿಕೆ ನೀಡಿದ್ದಾರೋ ಅದಕ್ಕೆ ಈಗಾಗಲೇ ಕ್ಷಮೆ ಕೇಳಿದ್ದಾರೆ. ಆದರೆ, ಬ್ರಾಹಣ್ಯ ಪ್ರತಿಪಾದಿಸುವ ಕೆಲವು ಸಂಘಟನೆಗಳು ಅನಗತ್ಯವಾಗಿ ತೊಂದರೆ ನೀಡುತ್ತಿವೆ. ಇದನ್ನು ವಿರೋಧಿಸಿ ನಾವು ಹಂಸಲೇಖ ಅವರಿಗೆ ನೈತಿಕ ಬೆಂಬಲ ನೀಡಬೇಕು" ಎಂದು ಹೇಳಿದರು.
ಭಜರಂಗದಳ ಹೇಳಿದ್ದೇನು?:
ಬೆಂಗಳೂರು ಭಜರಂಗದಳದ ಮುಖಂಡ ತೇಜಸ್ ಮಾತನಾಡಿ, ''ಹಂಸಲೇಖ ಅವರ ಕ್ಷಮೆಯಿಂದ ತೃಪ್ತಿಯಾಗಿಲ್ಲ. ಹಂಸಲೇಖ ಬೇಷರತ್ತು ಕ್ಷಮೆಯಾಚಿಸಬೇಕು. ಈ ವಿಷಯದಲ್ಲಿ ಚೇತನ್ ಬರುವ ಅವಶ್ಯಕತೆ ಇಲ್ಲ. ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ಪ್ರಜೆ ಅಲ್ಲ. ಚೇತನ್ ಸಸ್ಯಾಹಾರಿ ಹಾಗೂ ಮಾಂಸಹಾರಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪೋಲಿಸ್ ಠಾಣೆ ಒಳಗೆ ಚೇತನ್ ಅವರನ್ನು ಬಿಡಬಾರದು. ಚೇತನ್ ಠಾಣೆಗೆ ಆಗಮಿಸಿದರೆ ಅವರ ವಿರುದ್ಧ ವಿರುದ್ದ ಕಪ್ಪುಪಟ್ಟಿ ಪ್ರದರ್ಶಿಸತ್ತೇವೆ'' ಎಂದಿದ್ದಾರೆ.












Click it and Unblock the Notifications