ಹೈಕಮಾಂಡ್ ಮೆಚ್ಚಿರುವ ಈ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ?
ಕಗ್ಗಂಟಾಗಿ ಉಳಿದಿರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ಚರ್ಚೆ ಜೋರಾಗಿರುವ ನಡುವೆ ಆಕಾಂಕ್ಷಿಗಳ ಪಟ್ಟಿ ಕೂಡ ಬೆಳೆಯುತ್ತಿದೆ. ಈಗಾಗಲೇ ಹಲವು ಮಂದಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ. ವಿಜಯೇಂದ್ರ ಅವರು ಮತ್ತೊಮ್ಮೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರೆ, ಯತ್ನಾಳ್ ಬಣ ಕೂಡ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಸಜ್ಜಾಗಿದೆ. ಇದೀಗ ಬಿಜೆಪಿಯ ಮತ್ತೊಬ್ಬ ಪ್ರಬಲ ನಾಯಕ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಆಸೆ ಬಿಚ್ಚಿಟ್ಟಿದ್ದಾರೆ.
ಬಿಜೆಪಿಯ ಪ್ರಭಾವಿ ಹಾಗೂ ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಅವರು ಸದ್ಯ ರಾಜ್ಯಾಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಅವರು ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಹೈಕಮಾಂಡ್ ನನಗೆ ಜವಾಬ್ದಾರಿ ಕೊಟ್ಟರೆ ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ನನಗೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯ ಇದೆ ಎಂದು ನಿರಾಣಿ ಹೇಳಿದ್ದಾರೆ.

ನನಗೆ ಈ ಹಿಂದೆ ಬಿಜೆಪಿ ಪಕ್ಷ ಸಚಿವ ಸ್ಥಾನ ನೀಡಿತ್ತು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನವನ್ನೂ ನಾನು ಕೇಳಿದವನಲ್ಲ. ಆದರೂ ನನಗೆ ಕೊಟ್ಟ ಎರಡೂ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದೇನೆ ಎಂದಿದ್ದಾರೆ. ಅಲ್ಲದೆ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾರ್ಯವೈಖರಿ ಬಗ್ಗೆಯೂ ನಿರಾಣಿ ಬೇಸರದ ಮಾತುಗಳನ್ನಾಡಿದ್ದಾರೆ. ಜನ ಅಪ್ಪನನ್ನು ಇಷ್ಟಪಟ್ಟರೆ ಮಗನನ್ನೂ ಇಷ್ಟಪಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಬೀಳಗಿ ಜನ ನನ್ನನ್ನು ಮೊದಲಿಗೆ ಒಪ್ಪಿಕೊಂಡರು, ಬಳಿಕ ತಿರಸ್ಕರಿಸಿದ್ದಾರೆ. ಜನ ನನ್ನನ್ನು ಮೊದಲು ಇಷ್ಟಪಟ್ಟರು ಎಂಬ ಕಾರಣಕ್ಕೆ ಮಗನನ್ನೂ ಇಷ್ಟ ಪಡ್ತಾರೆ ಎಂದು ಹೇಳುವುದು ತಪ್ಪು. ಇನ್ನು ಪಕ್ಷದಲ್ಲಿರುವ ನಾಯಕರ ವೈಮನಸ್ಸುಗಳು ಯಾವ ಕಾರಣಕ್ಕೂ ಬೀದಿಗೆ ಬರಬಾರದು. ಎಲ್ಲ ನಾಯಕರೊಂದಿಗೆ ವಿಜಯೇಂದ್ರ ಅವರು ನೇರವಾಗಿ ಹಾಗೂ ಮುಖಾಮುಖಿಯಾಗಿ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ.
ವಿಜಯೇಂದ್ರ ಅವರಿಗೆ ಅನುಭವದ ಕೊರತೆ ಇದೆ. ಅವರ ತಂದೆ ಯಡಿಯೂರಪ್ಪ ಅವರ ಮಾರ್ಗದರ್ಶನದಿಂದ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದು, ಅವರು ಪಕ್ಷದ ಎಲ್ಲ ನಾಯಕರ ಜೊತೆ ಚರ್ಚಿಸಬೇಕು. ಇನ್ನು ನನ್ನದು ಬಿಜೆಪಿ ಗುಂಪು, ನಾನು ಯಾವುದೇ ಬಣದೊಂದಿಗೆ ಇಲ್ಲ ಎಂದೂ ಯತ್ನಾಳ್ ಹಾಗೂ ವಿಜಯೇಂದ್ರ ಬಣಗಳಿಂದ ದೂರ ಇರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಾಗಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲು ಮೊದಲು ಬಿಜೆಪಿಯಲ್ಲಿ ಗುಂಪುಗಾರಿಕೆ ಬಿಡಬೇಕು. ಅವರ ವಿರುದ್ಧ ನಿಲ್ಲಲು ನಾಯಕರೆಲ್ಲರೂ ಒಗ್ಗಟ್ಟಿನಿಂದ ಇದ್ದು ಹೋರಾಡಬೇಕು. ಸದ್ಯ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನ ಹೈಕಮಾಂಡ್ ಗಮನಿಸುತ್ತಲೇ ಇದೆ. ಸೂಕ್ತ ಸಮಯಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ತಂದೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಚಿವ ಸ್ಥಾನ ಪಡೆದು ಅನುಕೂಲ ಮಾಡಿಕೊಂಡವರು ಈಗ ಮಾತನಾಡುತ್ತಿಲ್ಲ ಎಂದು ವಿಜಯೇಂದ್ರ ದೂರಿದ್ದರು. ಈ ಬಗ್ಗೆಯೂ ಮಾತನಾಡಿರುವ ನಿರಾಣಿ, ಈಗ ಮಾತನಾಡಲು ಮೊದಲಿಗೆ ಮಗನ ಕೊಡುಗೆ ಏನಿದೆ ಅನ್ನೋದು ಬೇಕು. ಉದಾಹರಣೆಗೆ ಬೀಳಗಿ ನನ್ನ ಗೆಲ್ಲಿಸಿ, ಮತ್ತೆ ಸೋಲಿಸಿದ್ದಾರೆ. ನಾನು ಯಾರನ್ನು ಕೂಡ ದೂರವವನಲ್ಲ ಎಂದು ನಿರಾಣಿ ತಿರುಗೇಟು ನೀಡಿದ್ದಾರೆ.
ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುರುಗೇಶ್ ನಿರಾಣಿ ಅವರು ಪ್ರಬಲ ನಾಯಕರಾಗಿ ಗುರುತಿಸಿಕೊಂಡು ಸಚಿವ ಸ್ಥಾನ ಕೂಡ ಪಡೆದುಕೊಂಡಿದ್ದರು. ರಾಜ್ಯಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಬಂದಾಗ ನಿರಾಣಿ ಅವರು ಮೆಚ್ಚುಗೆಗೂ ಪಾತ್ರರಾಗಿದ್ದರು. ಹೈಕಮಾಂಡ್ ಜೊತೆಗೆ ನಿರಾಣಿ ಅವರು ಉತ್ತಮ ನಂಟು ಹೊಂದಿರುವ ಕಾರಣ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದು ನಿರಾಣಿಗೆ ಸುಲಭದ ಮಾತು ಎಂದು ಹೇಳಲಾಗುತ್ತಿದೆ.












Click it and Unblock the Notifications