ಮೂರುವರೆ ವರ್ಷಗಳ ಬಳಿಕ ಕೊಲೆ ರಹಸ್ಯ ಬಯಲು!

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಏಪ್ರಿಲ್ 18 : ತಾನು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಚಾರವನ್ನು ಬಾಲಕ ಬಯಲು ಮಾಡಬಹುದೆಂಬ ಭಯದಿಂದ ಹತ್ಯೆ ಮಾಡಿ ಹೂತು ಹಾಕಿದ್ದ ಪ್ರಕರಣ ಮೂರುವರೆ ವರ್ಷಗಳ ಬಳಿಕ ತಾಲೂಕಿನ ಕೈಲಾಂಚ ಹೋಬಳಿಯ ಕೋಟಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ಮುದ್ದಯ್ಯ ಮತ್ತು ಮಂಜುಳಾ ದಂಪತಿಗಳ ಪುತ್ರ ಮಹೇಶ್ ಕುಮಾರ್(13) ಕೊಲೆಯಾದ ದುರ್ದೈವಿ ಬಾಲಕ. ಈತ 2012ರ ನವೆಂಬರ್‌ನಲ್ಲಿ ತಾಯಿಗೆ ಶಾಂಪೂ ತರಲು ಹೋಗಿದ್ದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದನು.

ಪೋಷಕರು ಹುಡುಕಾಟ ನಡೆಸಿ, ಸುಳಿವು ಸಿಗದಿದ್ದಾಗ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಚ್ಚಿಹೋಗುವ ಹಂತದಲ್ಲಿದ್ದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಪೊಲೀಸರಿಗೆ ಸಿಕ್ಕಿದ ಸುಳಿವಿನಂತೆ ತನಿಖೆ ನಡೆಸಲಾಗಿದ್ದು, ಕೋಟಹಳ್ಳಿ ಗ್ರಾಮದ ಶಶಿಕುಮಾರ ಕೊಲೆ ಆರೋಪಿ ಎಂಬುದು ಸಾಬೀತಾಗಿದೆ.

Murder mystery in Ramnagar solved after 3 and half years

ಏನಿದು ಪ್ರಕರಣ : ಆರೋಪಿ ಶಶಿಕುಮಾರ್ ಅದೇ ಗ್ರಾಮದ ಯುವತಿಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಬಾಲಕ ಮಹೇಶ್ ನೋಡಿದ್ದನು. ಇದರಿಂದ ಭಯಗೊಂಡ ಶಶಿಕುಮಾರ್ ಬಾಲಕನು ಬೇರೆಯವರೊಂದಿಗೆ ಹೇಳಿದರೆ ಮಾನಮರ್ಯಾದೆ ಹರಾಜಾಗಬಹುದೆಂಬ ಭಯದಲ್ಲಿ ಅಂಗಡಿಗೆ ತೆರಳಿದ್ದ ಬಾಲಕ ಮಹೇಶನನ್ನು ಸಂಜೆ ತೋಟಕ್ಕೆ ಕರೆದೊಯ್ದು, ಕುತ್ತಿಗೆ ಕುಯ್ದು ಕೊಲೆ ಮಾಡಿದ್ದನು.

ಆ ನಂತರ ಶವವನ್ನು ತೋಟದಲ್ಲಿಯೇ ಬಿಟ್ಟು ಗ್ರಾಮಕ್ಕೆ ಮರಳಿದ್ದನು. ರಾತ್ರಿಯಾದರೂ ಬಾಲಕ ಮಹೇಶ್ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಹೆತ್ತವರು ಹುಡುಕಾಟ ನಡೆಸಿದಾಗ ಅವರಿಗೆ ಸಹಾಯ ಮಾಡುವ ಮೂಲಕ ಏನೂ ಗೊತ್ತಿಲ್ಲದವನಂತೆ ನಾಟಕವಾಡಿದ್ದ.

ಇದಾದ ಬಳಿಕ ರಾತ್ರಿ 9 ಗಂಟೆ ಸಮಯದಲ್ಲಿ ಮತ್ತೆ ತೋಟಕ್ಕೆ ತೆರಳಿ ಬಾಲಕ ಮಹೇಶ್‌ನ ಶವವನ್ನು ಹೂತು ಹಾಕಿದ್ದ. ಈ ವಿಚಾರ ಗೌಪ್ಯವಾಗಿಯೇ ಉಳಿದಿದ್ದರಿಂದ ಆರೋಪಿ ಶಶಿಕುಮಾರ್ ಬಚಾವಾಗಿದ್ದ.

ಕೊಲೆ ಬಗ್ಗೆ ಬಾಯಿಬಿಟ್ಟ : ಈ ನಡುವೆ ಕುಡಿದ ಮತ್ತಿನಲ್ಲಿ ಶಶಿಕುಮಾರ್ ತಾನು ಮಾಡಿದ ಕೃತ್ಯವನ್ನು ಸಾಧನೆ ಎಂಬಂತೆ ಹೇಳಿಕೊಂಡಿದ್ದ. ಕಳೆದ ಆರು ತಿಂಗಳಿಂದ ಗ್ರಾಮದಲ್ಲಿ ಈ ಬಗ್ಗೆ ಗುಸುಗುಸು ಸುದ್ದಿ ಹರಡಿ ಮೃತ ಬಾಲಕನ ತಂದೆ ಮುದ್ದಯ್ಯ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಈ ಸಂಬಂಧ ಶಶಿಕುಮಾರ್‌ನನ್ನು ಬೆಂಗಳೂರಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬಹಿರಂಗಗೊಂಡಿದೆ. ಅದರಂತೆ ಉಪವಿಭಾಗಾಕಾರಿಗಳ ಸೂಚನೆ ಮೇರೆಗೆ ತಹಸೀಲ್ದಾರ್, ಡಿವೈಎಸ್ಪಿ, ವೈದ್ಯಾಕಾರಿಗಳ ಸಮ್ಮುಖದಲ್ಲಿ ಪೊಲೀಸರು ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ತೋಟದಲ್ಲಿ ಶವ ಹೂತು ಹಾಕಿದ್ದ ಸ್ಥಳದಿಂದ ಅಸ್ತಿಪಂಜರ, ತಲೆಬುರುಡೆಯನ್ನು ಹೊರ ತೆಗೆದು ಪರೀಕ್ಷೆ ನಡೆಸಲಾಗಿದೆ.

ಶವವನ್ನು ಮಣ್ಣಲ್ಲಿ ಹೂತು ಮೂರುವರೆ ವರ್ಷ ಕಳೆದರೂ ಬಾಲಕ ಧರಿಸಿದ್ದ ಶರ್ಟ್‌ನ ಜೇಬಿನಲ್ಲಿದ್ದ ಶಾಂಪೂ ಹಾಗೆಯೇ ಇದೆ. ವೈದ್ಯಾಧಿಕಾರಿಗಳು ಕುರುಹುಗಳನ್ನು ಡಿಎನ್‌ಎ ಹಾಗೂ ಮರಣೋತ್ತರ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A murder mystery has been solved after a gap of 3 and half years. Shashikumar had killed a boy as he had seen Shashikumar with a lady in compromising position. Fearing backlash Shashikumar had murdered the boy and buried him.
Please Wait while comments are loading...