ಸಿದ್ದರಾಮಯ್ಯ ಅವರೇ ಮೋದಿ ಎಲ್ಲಿ, ನೀವೆಲ್ಲಿ ಎಂದಿದ್ಯಾಕೆ ವಿಜಯೇಂದ್ರ
ಮುಡಾ ಹಗರಣದ ತನಿಖೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮತ್ತೊಮ್ಮೆ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಂಡತನದಿಂದ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಈ ನಡುವೆ ವಿಜಯೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ವಾಕ್ಸಮರ ಮುಂದುವರಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಂಡತನದ ಎಲ್ಲೆ ಮೀರಿದೆ. ನಿಮ್ಮ ಮಾತುಗಳಿಗೆ ಕರ್ನಾಟಕದ ಜನ ಕಿಮ್ಮತ್ತು ನೀಡುವ ಕಾಲ ಮುಗಿದು ಹೋಗಿದೆ. ಅಲ್ಲದೇ ನಿಮ್ಮ ಸ್ವಪಕ್ಷೀಯರೇ ಮುಜುಗರ ತಪ್ಪಿಸಲು ರಾಜೀನಾಮೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಈ ರೀತಿ ಹೇಳಿದರೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಬಳಸಿಕೊಂಡು ತಳ ಬುಡವಿಲ್ಲದ ಹೋಲಿಕೆ ಮಾಡುತ್ತಿದ್ದೀರಿ. ರಾಜೀನಾಮೆ ನೀಡುವುದಿಲ್ಲ ಎನ್ನುವ ವಿತಂಡ ನಿಲುವಿಗೆ ಬಂದಿದ್ದೀರಿ. ಭ್ರಷ್ಟತೆಯಿಂದ ಹರಿದು ಹೋಗಿರುವ ನಿಮ್ಮ ಗೌರವಕ್ಕೆ ತೇಪೆ ಹಚ್ಚಿಕೊಂಡು ಅಧಿಕಾರಕ್ಕೆ ಜೋತು ಬೀಳುವ ಹಠಮಾರಿತನ ಪ್ರದರ್ಶಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಕರ್ನಾಟಕದ ಘನತೆಯನ್ನು ಉಳಿಸುವ ದೃಷ್ಟಿಯಿಂದಾದರೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಿರಿ ಎಂದು ಅವರು ಆಗ್ರಹಿಸಿದ್ದಾರೆ.

ನಿಮ್ಮ ಹಿಂಬಾಲಕರಿಂದ ಹೈಕೋರ್ಟ್ ತೀರ್ಪು ಹಾಗೂ ಆದೇಶಗಳನ್ನು ರಾಜಕೀಯ ಪ್ರೇರಿತ ಎಂಬ ಹೇಳಿಕೆಗಳನ್ನು ಕೊಡಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಅವಹೇಳನ ಮಾಡಿಸುತ್ತಿದ್ದೀರ. ಇದರಿಂ ಸಂವಿಧಾನವನ್ನು ಅವಮಾನ ಮಾಡುತ್ತಿದ್ದೀರಿ. ಲೋಕಾಯುಕ್ತದ ಮೇಲೆ ಪ್ರಭಾವ ಬಳಸಿ ಎಫ್‌ಐಆರ್ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದೀರಿ. ನೀವು ಚಾಪೆ ಕೆಳಗೆ ನುಸುಳುತ್ತಿದ್ದೀರಿ. ಆದರೆ, ಈ ನೆಲದ ಕಾನೂನಿಗೆ ರಂಗೋಲಿಯೊಳಗೆ ನುಸುಳಿಯಾದರೂ ಭ್ರಷ್ಟರಿಗೆ ಶಿಕ್ಷಿಸುವ ಸಾಮರ್ಥ್ಯವಿದೆ. ಅಂತಹ ಸಂವಿಧಾನ ರಚಿಸಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡಿ ಎಂದೂ ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಎನ್ನುವುದು ಸಂವಿಧಾನಿಕ ಶಕ್ತಿ, ಪ್ರಜಾತಂತ್ರ ವ್ಯವಸ್ಥೆಯ ಪರಮೋಚ್ಚ ಸ್ಥಾನವಾಗಿದೆ. ನಿಮಗೆ ಮೆತ್ತಿಕೊಂಡಿರುವಹ ಭ್ರಷ್ಟತೆಯ ಮಸಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬಳಿದು ಅಪವಿತ್ರಗೊಳಿಸಬೇಡಿ. ಈ ಮೂಲಕ ಐತಿಹಾಸಿಕ ಪ್ರಮಾದ ಮಾಡಬೇಡಿ. ಕ್ರಿಮಿನಲ್ ಕಳಂಕದ ಆರೋಪ ಹೊತ್ತಿರುವವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಅದರ ಘನತೆ ಕಳೆಯಬಾರದು ಎನ್ನುವುದು ಕರ್ನಾಟಕದ ಜನರ ಒತ್ತಾಯವಾಗಿದೆ ಎಂದು ಅವರು ಹೇಳಿದ್ದಾರೆ. ಗುಜರಾತ್‌ನ ಗೋಧ್ರಾ ಘಟನೆ ಇತಿಹಾಸದಲ್ಲಿ ಮುಗಿದ ಅಧ್ಯಾಯ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ.
ಪ್ರಧಾನಿ ಸ್ಥಾನಕ್ಕೆ ಹೇರಿದ್ದಾರೆ. ದೇಶವನ್ನು ಸಮರ್ಥವಾಗಿ ಮುನ್ನಡೆಸಿ ಮೂರನೇ ಬಾರಿಗೆ ಪ್ರಧಾನಿಯಾಗಿ ಮುಂದುವರೆದಿದ್ದಾರೆ. ಎತ್ತರಕ್ಕೆ ಬೆಳೆದಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಮ್ಮೊಂದಿಗೆ ಹೋಲಿಸಿಕೊಳ್ಳಬೇಡಿ, ರಾಜ್ಯಪಾಲರ ನಿರ್ಧಾರವನ್ನು ಎತ್ತಿಹಿಡಿದ, ರಾಜ್ಯ ಹೈಕೋರ್ಟ್‌ನ ತೀರ್ಪು ಹಾಗೂ ನಿಮ್ಮ ಮೇಲೆ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯವು ನೀಡಿರುವ ಆದೇಶದ ಮೂಲಕ ಆರೋಪಿತರಾಗಿದ್ದೀರಿ. ಕರ್ನಾಟಕದ ಇತಿಹಾಸದಲ್ಲಿ ನೀವೇ ಮೊದಲು ಹೀಗಾಗಿ, ಅಧಿಕಾರ ಮುಖ್ಯವೋ, ರಾಜ್ಯದ ಘನತೆ ಮುಖ್ಯವೋ, ನೀವೇ ಇನ್ನೊಮ್ಮೆ ಯೋಚಿಸಿ, ನಿಮಗೆ ದೆಹಲಿಯ ಕೇಜ್ರಿವಾಲ್ ಮಾದರಿಯೋ ಅಥವಾ ಕರುನಾಡಿನ ರಾಮಕೃಷ್ಣ ಹೆಗಡೆಯವರು ಮಾದರಿಯೋ ಎಂದು ಆ ಆಯ್ಕೆ ನಿಮಗೇ ಬಿಟ್ಟಿದ್ದು ಎಂದು ವಿಜಯೇಂದ್ರ ಅವರು ಹೇಳಿದ್ದಾರೆ.












Click it and Unblock the Notifications