Siddaramaiah ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಭವಿಷ್ಯ ನಾಳೆ ನಿರ್ಧಾರ, ತೀರ್ಪು ಕಾಯ್ದಿರಿಸಿದ ಕೋರ್ಟ್
ಬೆಂಗಳೂರು, ಸೆಪ್ಟಂಬರ್ 23: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಅಂತ್ಯಗೊಂಡಿದೆ. ಇದರ ತೀರ್ಪನ್ನು ಕಾಯ್ದಿರಿಸಿರುವ ರಾಜ್ಯ ಹೈಕೋರ್ಟ್ ನಾಳೆ ಮಂಗಳವಾರ (ಸೆಪ್ಟಂಬರ್ 24) ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ.
ಹೌದು, ಮುಡಾ ಹಗರಣದಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರು ಪತ್ನಿ ಹೆಸರಲ್ಲಿ ಅಕ್ರಮವಾಗಯ ನಿವೇಶನ ಪಡೆದಿದ್ದಾರೆ ಎಂದು ರಾಜ್ಯಪಾಲರ ಬಳಿ ಸಿಎಂ ವಿರುದ್ಧ ದೂರು ನೀಡಲಾಗಿತ್ತು. ಇದಕ್ಕೆ ರಾಜ್ಯಪಾಲರು ತನಿಖೆ ನಡೆಸುವಂತೆ ಅನುಮತಿ ನೀಡಿ ಆದೇಶಿಸಿದ್ದರು.

ಈ ಆದೇಶ ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ರದ್ದುಗೊಳಿಸುವಂತೆ ಕೋರಿದ್ದರು. ಈ ಅರ್ಜಿ ವಿಚಾರಣೆ ಅಂತ್ಯಗೊಂಡಿದೆ. ವಾದ ವಿವಾದ ಆಲಿಸಿರುವ ಹೈಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ.
ನಾಳೆ ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ
ರಾಜ್ಯ ಹೈಕೋರ್ಟ್ ಎರಡು ಕಡೆಗಿನ ವಾದ ಪ್ರತಿವಾದ ಆಲಿಸಿದೆ. ವಿಚಾರಣ ಮುಕ್ತಾಯಗೊಂಡಿದ್ದು, ತೀರ್ಪನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿದೆ. ಈ ತೀರ್ಪಿನ ಮೇಲೆ ಸಿಎಂ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಅಡಗಿದೆ. ಹೀಗಾಗಿ ರಾಜ್ಯದ ಜನರ ಚಿತ್ತ ನಾಳಿನ ಹೈಕೋರ್ಟ್ ತೀರ್ಪಿನತ್ತ ನೆಟ್ಟಿದೆ.
ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಅಭಿಷೇಕ ಮನು ಸಿಂಘ್ವಿ ಸೇರಿ ಕೆಲವು ಹಿರಿಯ ವಕೀಲರು ವಾದ ಮಾಡಿದ್ದರು. ಇತ್ತ ರಾಜ್ಯಪಾಲರ ಪರ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.
ಏನಿದು ಸಿಎಂ ವಿರುದ್ಧ ಮುಡಾ ಹಗರಣ ವಿವಾದ
ಮೈಸೂರಿನಲ್ಲಿ ಮುಡಾ ವ್ಯಾಪ್ತಿಯಲ್ಲಿ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರಿನಲ್ಲಿ ಒಟ್ಟು 1,14,100 ಚದರ ಅಡಿಯಷ್ಟು ಜಾಗವನ್ನು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಬದಲಾಗಿ ಮುಡಾ ದಿಂದ ಮೂರು ವರ್ಷಗಳ ಹಿಂದೆ (2021) ರಲ್ಲಿ 38,000 ಚದರ ಅಡಿಯ ಜಾಗವನ್ನು ವಿಜಯನಗರದಲ್ಲಿ ನೀಡಿತ್ತು. ಇದು ಇದೀಗ ವಿವಾದದ ಕಿಡಿ ಹೊತ್ತಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ವೈಟ್‌ನರ್ ಬಳಸಿ ಅಕ್ರಮವಾಗಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜಾಗ ಬರೆಸಿಕೊಂಡಿದ್ದಾರೆ. ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಇಬ್ರಾಹಿಂ ಎಂಬುವವರು ರಾಜ್ಯಪಾಲರ ಬಳಿ ತನಿಖೆಗೆ ಅನುಮತಿಸುವಂತೆ ಕೋರಿ ದೂರು ನೀಡಿದ್ದರು. ದೂರಿನ ಮೇರೆಗೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಯಿತು.
ರಾಜ್ಯಪಾಲರು ತಮ್ಮ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ರದ್ದುಗೊಳಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications