ಎಚ್‌ಡಿ ಕುಮಾರಸ್ವಾಮಿ VS ಸುಮಲತಾ ನಡುವೆ ಸ್ವಾಭಿಮಾನಿ ಸಮರ; ಮತ್ತೆ ಇಬ್ಬರ ನಡುವೆ ಟಾಕ್‌ವಾರ್!
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ಸ್ವಾಭಿಮಾನಿ ಸಮರ ಮತ್ತೆ ಆರಂಭವಾಗಿದೆ.
ಮಂಡ್ಯ,ಮಾರ್ಚ್13: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಆರಂಭವಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಟಾಕ್ ವಾರ್ ಇದೀಗ ಮತ್ತೆ ಮುಂದುವರೆದಿದೆ.
ಜೆಡಿಎಸ್ ನ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ದಿನದಿಂದ ದಿನಕ್ಕೆ ದಳಪತಿಗಳ ವರ್ಚಸ್ಸು ಕಡಿಮೆಯಾಗುತ್ತಿದ್ದು, ಇದೀಗ ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲವನ್ನ ಸೂಚಿಸಿದ್ದಾರೆ. ಸುಮಲತಾ ಬಿಜೆಪಿಗೆ ಬೆಂಬಲ ಸೂಚಿಸಿರುವ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿದ್ದು, ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, ಮಂಡ್ಯ ಜಿಲ್ಲೆಯ ಸ್ವಾಭಿಮಾನ ಎಲ್ಲಿ ಹೋಯ್ತು, ಅವರ ಸ್ವಾಭಿಮಾನವನ್ನ ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಾಲ ಕೆಳಗೆ ಸ್ವಾಭಿಮಾನ ಹೋಗಿದೆ ಎಂದು ಸಂಸದೆ ಸುಮಲತಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಗೆ ಏನು ಕೊಟ್ಟಿಲ್ಲ, ಕುತಂತ್ರದಿಂದ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿದರು, ಅವರು ಇಲ್ಲೇ ಇದ್ದಾರೆ. ಎಲ್ಲಿ ಹೋಯ್ತು ಇವರ ಸ್ವಾಭಿಮಾನ. ಸ್ವಾಭಿಮಾನದಿಂದ ಗೆಲ್ಲುವು ಸಾಧಿಸಿದ್ವಿ ಅಂತ ಹೇಳಿದ್ರು. ಎಲ್ಲಿ ಹೋಯ್ತು ಇವರ ಸ್ವಾಭಿಮಾನ ಎಂದು ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ವಾಭಿಮಾನಿ ಹೇಳಿಕೆಗೆ ತಿರುಗೇಟು ನೀಡಿದ ಸುಮಲತಾ, ಕಾಂಗ್ರೆಸ್ ಬಗ್ಗೆ ಆಡಬಾರದ ಮಾತು ಆಡಿ ಕೈ ಜೋಡಿಸಿದ್ರೂ ಇವರ ಸ್ವಾಭಿಮಾನ ಎಲ್ಲಿ ಹೋಯ್ತು, ಬಿಜೆಪಿ ಜೊತೆ ಒಮ್ಮೆ, ಕಾಂಗ್ರೆಸ್ ಜೊತೆ ಒಮ್ಮೆ ಸರ್ಕಾರ ಮಾಡ್ತಾರೆ. ಇಬ್ಬರಿಗೂ ಕೈ ಕೊಟ್ಟು ಬಂದಿದ್ದಾರೆ ಎಂದು ಕುಮಾರಸ್ವಾಮಿ ರಾಜಕೀಯ ಜೀವನದ ಬಗ್ಗೆ ಸುಮಲತಾ ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡಿ, ಇಬ್ಬರಿಗೂ ಕೈಕೊಟ್ಟು ಬಂದಿದ್ದಾರೆ. ಅದೇ ರೀತಿ ತೆಲಂಗಾಣ ಸಿಎಂ ಕೆಸಿಆರ್ ಜೊತೆ ಒಮ್ಮೆ, ಚಂದ್ರಬಾಬು ನಾಯ್ಡು ಜೊತೆ ಒಮ್ಮೆ, ಜಗನ್ ಜೊತೆ ಒಮ್ಮೆ ಹೋಗಿ ಮೈತ್ರಿ ಮಾತಾಡ್ತಾರೆ. ಕಾಂಗ್ರೆಸ್ ಬಗ್ಗೆ ಆಡಬಾರದ ಮಾತು ಆಡಿದ್ರು. ಮುಖ್ಯಮಂತ್ರಿ ಸ್ಥಾನ ಕೊಡ್ತೀನಿ ಅಂದ ತಕ್ಷಣ ಮತ್ತೆ ಕಾಂಗ್ರೆಸ್ ಜೊತೆಗೆ ಹೋದ್ರು. ಇಷ್ಟೆಲ್ಲಾ ಮಾತಾಡೋ ಇವರ ಸ್ವಾಭಿಮಾನ ಯಾರ ಕಾಲ ಕೆಳಗೆ ಹೋಗಿದೆ. ಸ್ವಾಭಿಮಾನ ಅಂದ್ರೆ ಅರ್ಥ ಗೊತ್ತಾ ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications