GruhaLakshmi Scheme: ಗೃಹಲಕ್ಷ್ಮಿ ಹಣದಿಂದ ರೋಟಾವೇಟರ್ ಖರೀದಿಸಿದ ಅತ್ತೆ-ಸೊಸೆ
ರಾಜ್ಯ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಹಲವರಿಗೆ ನೆರವಾಗುತ್ತಿದೆ. ಈ ಯೋಜನೆಗಳ ಬಗ್ಗೆ ಆಗಾಗ ಕೆಲವು ಅಪಸ್ವರಗಳು ಕೇಳಿಬಂದರೂ ಹಲವು ಯಶೋಗಾಥೆಗಳಿಗೂ ಈ ಯೋಜನೆಗಳು ಸಾಕ್ಷಿಯಾಗುತ್ತಿವೆ. ಇನ್ನು ಗೃಹಲಕ್ಷ್ಮಿ ಯೋಜನೆಯಿಂದ ಹಲವರ ಬದುಕಿಗೆ ದಾರಿದೀಪವಾಗಿರುವ ಸಂಗತಿಗಳು ಇತ್ತೀಚೆಗೆ ವರದಿಯಾಗಿವೆ. ಇದೀಗ ಇದೇ ಗೃಹಲಕ್ಷ್ಮಿಯಿಂದ ಅತ್ತೆ-ಸೊಸೆ ಸೇರಿ ಉಳುಮೆಗೆ ನೆರವಾಗುವ ರೋಟಾವೇಟರ್ ಅನ್ನು ಖರೀದಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕುಟುಂಬವೊಂದರ ಅತ್ತೆ-ಸೊಸೆ ಟ್ರಾಕ್ಟರ್‌ಗೆ ಬಳಸುವ ರೋಟಾವೇಟರ್ ಖರೀದಿಸುವ ಮೂಲಕ ತಮ್ಮ ಜಮೀನಿನ ಉಳುಮೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸವಣೂರು ತಾಲೂಕಿನ ಜಗಣ್ಣವರ ಕುಟುಂಬದ ಅತ್ತೆ-ಸೊಸೆ ಸೇರಿ ಗೃಹಲಕ್ಷ್ಮಿ ಹಣ ಕೂಡಿಟ್ಟಿದ್ದಾರೆ. ಇದೇ ಹಣದಲ್ಲಿ ರೋಟಾವೇಟರ್ ಖರೀದಿಸುವ ಮೂಲಕ ತಮ್ಮ ಜಮೀನಿನ ಉಳುಮೆ ಮಾಡಲು ನೆರವಾಗಿದ್ದಾರೆ.

ಅತ್ತೆ ಶಾರದಾ ಜಗಣ್ಣನವರ ಹಾಗೂ ಸೊಸೆ ಲಕ್ಷ್ಮಿ ಜಗಣ್ಣನವರ ಅವರು ತಮಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟಿದ್ದರು. ತಮ್ಮ ಜಮೀನು ಉಳುಮೆ ಮಾಡಲು ಅಗತ್ಯವಿದ್ದ ರೋಟಾವೇಟರ್ ಖರೀದಿಸಲು ಕೂಡಿಟ್ಟ ಹಣವನ್ನೆಲ್ಲ ನೀಡಿದ್ದಾರೆ. ತಮಗಿರುವ ಐದು ಎಕರೆ ಹೊಲ ಉಳುಮೆ ಮಾಡಲು ಭಾರಿ ಸಮಸ್ಯೆಯಾಗುತ್ತಿತ್ತು. ಹಾಗಾಗಿ ಈ ರೋಟಾವೇಟರ್‌ನ ಬೆಲೆ ಸುಮಾರು ಒಂದು ಲಕ್ಷ ರೂಪಾಯಿ ಎನ್ನಲಾಗಿದೆ. ಇದಕ್ಕೆ ಅತ್ತೆ ಸೊಸೆ ಸೇರಿ 48,000 ರೂಪಾಯಿ ಹಣ ನೀಡಿದ್ದಾರೆ. ಬಾಕಿ ಹಣವನ್ನು ಸಾಲ ಮಾಡಿ ಹೊಂದಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಬಡ ಕುಟುಂಬಗಳಿಗೆ ಆಸರೆಯಾಗಿರುವ ಗೃಹಲಕ್ಷ್ಮಿ ಯೋಜನೆ ಇದೀಗ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಜಗಣ್ಣವರ ಕುಟುಂಬದ ಅತ್ತೆ-ಸೊಸೆ ಸೇರಿ ಗೃಹಲಕ್ಷ್ಮಿ ಹಣ ಕೂಡಿಟ್ಟು, ರೋಟಾವೇಟರ್ ಖರೀದಿಸಿ, ಜಮೀನಿನ ಉಳುಮೆ ಮಾಡಲು ಮುಂದಾಗಿರುವ ವಿಷಯ ತಿಳಿದು ಖುಷಿಯಾಯಿತು ಎಂದಿದ್ದಾರೆ.

ನಮ್ಮ ಸರ್ಕಾರ ಜನರಿಗೆ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಿ, ನುಡಿದಂತೆ ನಡೆಯುವ ಸರ್ಕಾರವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ತಮ್ಮೆಲ್ಲರ ಆಶೀರ್ವಾದದಿಂದ ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಬಡ ಕುಟುಂಬಗಳಿಗೆ ಆರ್ಥಿಕ ಚೈತನ್ಯ ನೀಡುತ್ತಿರುವ 'ಗೃಹ ಲಕ್ಷ್ಮಿ' ಯೋಜನೆ ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಬಲ ನೀಡುವುದರ ಜೊತೆಗೆ ಅತ್ತೆ, ಸೊಸೆಯರ ಬಾಂಧವ್ಯವನ್ನೂ ಬೆಸೆಯುತ್ತಿದೆ. ಯೋಜನೆಯ ಹಣದಿಂದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕುಟುಂಬದ ಅತ್ತೆ- ಸೊಸೆಯರು ರೋಟಾವೇಟರ್ ಖರೀದಿಸಿ ತಮ್ಮ ಜಮೀನಿನ ಉಳುಮೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಸಫಲತೆ, "ಬಿಟ್ಟಿ ಭಾಗ್ಯ, ಅತ್ತೆ-ಸೊಸೆಯರ ನಡುವೆ ಜಗಳ ಹಚ್ಚುವ ಯೋಜನೆ" ಎಂದು ಟೀಕಿಸುವವರ ಬಾಯಿಗೂ ಬೀಗ ಹಾಕಿದೆ ಹಾಗೂ ಜನಪರವಾಗಿ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರಕ್ಕೆ ನುಡಿದಂತೆ ನಡೆದ ಧನ್ಯತೆಯ ಭಾವ ತಂದಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications