Monsoon Update: ಮುಂಗಾರು ಆಗಮನ ನಾಲ್ಕು ದಿನ ತಡ, ಕಾರಣವೇನು?, ಯಾವಾಗ ಆಗಮಿಸಲಿದೆ? ತಿಳಿಯಿರಿ
ಬೆಂಗಳೂರು, ಜೂನ್ 05: ಪ್ರಸಕ್ತ ವರ್ಷದ ಮುಂಗಾರು ಮಳೆ ಜೂನ್ ಮೊದಲ ವಾರು ಬರಲಿದೆ ಎಂದು ಕಾಯುತ್ತಿದ್ದ ದೇಶದ ರೈತರ ನಿರೀಕ್ಷೆ ಹುಸಿಯಾಗಿದೆ. ನಿಗದಿತ ಅವಧಿಗಿಂತ ನಾಲ್ಕು ದಿನ ತಡವಾಗಿ ಮುಂಗಾರು ಮಳೆ ಸುರಿಸುವ ಮಾರುತಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಈಗಾಗಲೇ ಮುಂಗಾರು ಬಿತ್ತನೆ ಆರಂಭವಾಗಬೇಕಿತ್ತು. ಆದರೆ ಮಳೆ ಆಗಮನಕ್ಕಾಗಿ ಕಾಯುತ್ತಿರುವ ರೈತರಿಗೆ ಮತ್ತೆ ನಿರಾಸೆಯಾಗಿದೆ ಎಂದು ಹೇಳಲಾಗುತ್ತಿದೆ. ಕಾರಣ ಮುಂಗಾರು ಮಾರುತಗಳು ನೆರೆಯ ಕೇರಳ ರಾಜ್ಯ ಪ್ರವೇಶಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಸಕ್ತ ವರ್ಷದ ಮುಂಗಾರು ಮಳೆ ಜೂನ್ ಮೊದಲ ವಾರ ಅಂದರೆ ಜೂನ್ 04 ರಂದು ಮುಂಗಾರು ಮಾರುತಗಳು ಕೇರಳ ರಾಜ್ಯ ಪ್ರವೇಶಿಸುತ್ತವೆ. ಅದಾದ ಒಂದು ವಾರದ ಆಸುಪಾಸು ಕರ್ನಾಟಕ ರಾಜ್ಯ ಪ್ರವೇಶಿಸುವ ಮೂಲಕ ಅಧಿಕೃತ ಮುಂಗಾರು ಮಳೆಯ ಪ್ರವೇಶವಾಗಲಿದೆ ಎಂದು ಹೇಳಲಾಗಿತ್ತು.
ಸದ್ಯ ಹವಾಮಾನ ಇಲಾಖೆ ನೀಡಿದರುವ ಅಪ್ಡೇಟ್ ಮಾಹಿತಿ ಪ್ರಕಾರ, ಇನ್ನೂ ನಾಲ್ಕೈದು ದಿನ ಮುಂಗಾರು ಆಗಮನ ತಡವಾಗಲಿದೆ. ತದನಂತರ ರಾಜ್ಯದ ನಾನಾ ಕಡೆಗಳಲ್ಲಿ ಮುಂಗಾರಿ ಆರ್ಭಟ ಕಂಡು ಬರುವ ಸಾಧ್ಯತೆಯೂ ಇದೆ. ಅಲ್ಲಿಯವರೆ ಪೂರ್ವ ಮುಂಗಾರು ಮಳೆಯೆ ನಾಡಿನ ಕೆಲವು ಪ್ರದೇಶಗಳಲ್ಲಿ ಅಬ್ಬರಿಸುವ ಮುನ್ಸೂಚನೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಹವಾಮಾನದಲ್ಲಿ ಬದಲಾವಣೆಗಳು ಸದ್ಯ ಮುಂಗಾರು ಆಗಮನಕ್ಕೆ ಪೂರಕವಾಗಿವೆ. ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಮಾರುತಗಳು ಚಲನೆಯಲ್ಲಿ ವೇಗ ಪಡೆದುಕೊಂಡಿವೆ. ಭಾನುವಾರ ಈ ಮಾರುತಗಳ ತೀವ್ರತೆ ಇನ್ನಷ್ಟು ಹೆಚ್ಚಾಗಿದೆ. ಸಮುದ್ರ ಮಟ್ಟಕ್ಕಿಂತ ಎರಡು ಕಿಲೋ ಮೀಟರ್ ಎತ್ತರವರೆಗೆ ಪೂರ್ವಾಭಿಮುಖವಾಗಿ ಬೀಸುತ್ತಿವೆ. ಇದೆಲ್ಲ ಉತ್ತಮ ವಾತಾವರಣ ಸೃಷ್ಟಿಯಿಂದ ಮುಂದಿನ ಮೂರು ನಾಲ್ಕು ದಿನದಲ್ಲಿ ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸದ್ಯ ರಾಜ್ಯದಲ್ಲಿನ ಮಳೆ ವಾತಾವರಣ
ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇಂದಿನಿಂದ ಐದು ದಿನ ಜೋರು ಮಳೆ ಸುರಿಯಲಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುಗ್, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ವಿಜಯಪುರ, ಚಾಮರಾಜ ನಗರ ಜಿಲ್ಲೆಗಳು ಹಾಗೂ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಇದೆ ವೇಳೆ ಉತ್ತರ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ತುಂತುರು ಇಲ್ಲವೇ ಚದುರಿದಂತೆ ಹಗರು ಮಳೆ ಸಂಭವ ಇದೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಮುಂದಿನ ಮೂರು ದಿನ ವ್ಯಾಪಕ ಮಳೆ ಸಂಭವವಿದೆ. ಸುಮಾರು 10-15 ದಿನ ಕಾಡಿದ್ದ ಮಳೆಗೆ ಸಾಕಷ್ಟು ಮರಗಳ ಅವಸಾನಕ್ಕೆ ಕಾರಣವಾಯಿತು. ಕೆಲವೆಡೆ ಜನ ಜೀವನಕ್ಕು ಕುತ್ತು ತಂದಿತ್ತು. ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆ ಶಾಂತವಾಗಿದೆ. ರಾಜ್ಯ ಮುಂಗಾರು ಮಳೆ ಎದುರು ನೋಡುತ್ತಿರುವ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ಇನ್ನು ಕೆಲವು ದಿನ ಪೂರ್ವ ಮುಂಗಾರು ಮಳೆಯ ದರ್ಶನವಾಗಲಿದೆ.












Click it and Unblock the Notifications