Karnataka Monsoon Rain Entry: ರಾಜ್ಯದಲ್ಲಿ ಮೇ 31ರಿಂದ ಮುಂಗಾರು ಮಳೆ ಆರಂಭ: ಹಲವೆಡೆ ಧಾರಾಕಾರ ಮಳೆ!
ಬೆಂಗಳೂರು ಮೇ 26: ರಾಜ್ಯದಲ್ಲಿ ಏಪ್ರಿಲ್ ತಿಂಗಳ ಬಿಸಿಲ ಝಳ ಕಡಿಮೆಯಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದೆಲ್ಲೆಡೆ ಭಾರೀ ಮಳೆಯಾಗುತ್ತಿದ್ದು ತಂಪಾದ ವಾತಾವರಣ ನಿರ್ಮಾಣವಾಗಿದೆ. ಧಾರಾಕಾರ ಮಳೆ ಪ್ರಕೃತಿಯ ಸೊಬಗನ್ನು ಹೆಚ್ಚಿಸಿದೆ. ಈ ನಡುವೆ ಸಿಹಿ ಸುದ್ದಿಯೊಂದನ್ನು ಹವಾಮಾನ ಇಲಾಖೆ ನೀಡಿದೆ. ಮೇ ತಿಂಗಳ ಕೊನೆ ವಾರದಲ್ಲಿ ಮುಂಗಾರು ಮಳೆ ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.
ರಾಜ್ಯಕ್ಕೆ ಮೇ ತಿಂಗಳಲ್ಲೇ ಮುಂಗಾರು ಮಳೆ ಆಗಮಿಸಲಿದೆ. ಅಂದರೆ ಮೇ 31ರಿಂದ ರಾಜ್ಯದಲ್ಲಿ ಮುಂಗಾರು ಶುರುವಾಗಲಿದೆ. ನೈರುತ್ಯ ಮುಂಗಾರು ಮಳೆ ಮೇ 31ಕ್ಕೂ ಮುನ್ನ ಕೇರಳದ ಮೂಲಕ ರಾಜ್ಯ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದ್ದು ಮೇ ತಿಂಗಳ ಕೊನೆ ವಾರದಲ್ಲಿ ಕೇರಳ ಕರಾವಳಿಗೆ ಆಗಮಿಸಲಿದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಪ್ರವೇಶಿಸಲಿದೆ. ಅಲ್ಲದೆ ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು ರೈತರಿಗೆ ಸಂತಸ ತಂದಿದೆ.
ಏಪ್ರಿಲ್ ತಿಂಗಳೂ ಶೂನ್ಯ ಮಳೆಯನ್ನು ದಾಖಲಿಸಿದೆ. ಆದರೆ ಮೇ ತಿಂಗಳು ಇದಕ್ಕೆ ವಿರುದ್ಧವಾಗಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದೆ. ಕಳೆದ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಮಾನ್ಯವಾಗಿ 831.8 ಮಿಮೀ ಮಳೆಯಾಗಬೇಕಿತ್ತು. ಆದರೆ, 678.4 ಮಿಮೀ ಮಳೆಯಾಗಿದೆ. ಇದರೊಂದಿಗೆ 18%ರಷ್ಟು ಮಳೆ ಕೊರತೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ವರ್ಷ ಮಾರ್ಚ್1ರಿಂದ ಮೇ 24ರವೆರೆಗೆ ರಾಜ್ಯದಲ್ಲಿ 120.7 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಇಂದು ಕೂಡ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು ಯಲ್ಲೇ ಅಲರ್ಟ್ ಘೋಷಿಸಲಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲೂ ಇಂದು ಮಳೆಯಾಗುವ ಸಾಧ್ಯತೆ ಇದೆ.
ಅಲ್ಲದೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗ 40 ರಿಂದ 50 ಕಿ.ಮೀ ಆಸು ಪಾಸಿನಲ್ಲಿ ಇರಲಿದೆ. ಉತ್ತರ ಕರ್ನಾಟಕ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಜಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ದಕ್ಷಿಣ ಭಾಗದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ಭಿನ್ನ ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ 40-50ಕಿಮೀ. ವೇಗದಲ್ಲಿ ಬೀಸಲಿದೆ.

ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಬಹುದು. ಅಲ್ಲದೆ ಬೀದರ್, ಗದಗ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಮದಿನ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರದಲ್ಲಿ ಎರಡು ದಿನವೂ ಗರಿಷ್ಠ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು.












Click it and Unblock the Notifications