ಬಿಜೆಪಿ ಜಾಹೀರಾತು ಮುಚ್ಚಿದ ಬಗೆ, ಆಯೋಗದ ವಿರುದ್ಧ ಕಾಂಗ್ರೆಸ್ ಕಿಡಿ!
ಬೆಂಗಳೂರು, ಏಪ್ರಿಲ್ 07; ಕೇಂದ್ರ ಚುನಾವಣಾ ಆಯೋಗ ಮಾರ್ಚ್ 29ರಂದು 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಮೇ 10ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ. ವೇಳಾಪಟ್ಟಿ ಪ್ರಕಟವಾದ ತಕ್ಷಣ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಪೂರಕ ವಾತಾವರಣ ನಿರ್ಮಿಸಲು ಚುನಾವಣಾ ಆಯೋಗದ ಸೂಚನೆಯಂತೆ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಬ್ಯಾನರ್, ಪೋಸ್ಟರ್, ಗೋಡೆ ಬರಹ ಹಾಗೂ ಇತರೆ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗುತ್ತಿದೆ.

ಶಾಸಕರು, ಪಕ್ಷದ, ಸರ್ಕಾರದ ಜಾಹೀರಾತುಗಳನ್ನು ಮುಚ್ಚಲಾಗುತ್ತಿದೆ. ಆದರೆ ಚುನಾವಣಾ ಆಯೋಗ ಬಿಜೆಪಿ ಜಾಹೀರಾತನ್ನು ಬಿಜೆಪಿ ಜಾಹೀರಾತು ಇರುವ ಪತ್ರಿಕೆಗಳ ಮೂಲಕವೇ ಮುಚ್ಚುತ್ತಿದೆ. ಈ ಕುರಿತು ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಶುಕ್ರವಾರ ಈ ಕುರಿತು ಟ್ವೀಟ್ ಮಾಡಿದೆ. ಈ ಕುರಿತು ಒಂದು ಫೋಟೋವನ್ನು ಟ್ವೀಟ್ ಮಾಡಲಾಗಿದೆ.
ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, "ಬಿಜೆಪಿಯ ಜಾಹೀರಾತು ಮುಚ್ಚಿದ್ದು ಬಿಜೆಪಿಯ ಜಾಹೀರಾತಿನಿಂದಲೇ! ಇದು ಬೆಂಗಳೂರಿನ ಜ್ಯುಡಿಶೀಯಲ್ ಲೇಔಟ್ ನಲ್ಲಿ ಕಂಡುಬಂದಿದೆ. ಚುನಾವಣಾ ಆಯೋಗದವರೇ ನಿಮ್ಮ ನೀತಿ ಸಂಹಿತೆ ಜಾರಿಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ಹಲವು ಲೋಪಗಳು ನಡೆಯುತ್ತಿವೆ. ನಿಷ್ಪಕ್ಷಪಾತ, ಲೋಪರಹಿತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದೆ.

ನೀತಿ ಸಂಹಿತೆ ಉಲ್ಲಂಘನೆ; ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಸುಗಮ ಹಾಗೂ ಸುಸೂತ್ರ ಚುನಾವಣಾ ಕಾರ್ಯ ನಿರ್ವಹಣೆಗೆ ಚುನಾವಣಾಧಿಕಾರಿಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ರಾಜಕೀಯ ಪಕ್ಷಗಳು ಹಾಗೂ ಸರ್ಕಾರಿ ಜಾಹೀರಾತಿಗೆ ಸಂಬಂಧಿಸಿದ ಎಲ್ಲಾ ಗೋಡೆಬರಹ, ಪೋಸ್ಟರ್ಸ್, ಬ್ಯಾನರ್ಸ್, ಫ್ಲೆಕ್ಸ್ ಇತ್ಯಾದಿಗಳು ಸಂಪೂರ್ಣವಾಗಿ ತೆರವುಗೊಂಡಿರುವುದರ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸರ್ಕಾರಿ ಪ್ರವಾಸಿ ಮಂದಿರ, ಪರಿವೀಕ್ಷಣಾ ಮಂದಿರಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಅವುಗಳು ವಿರೂಪಗೊಂಡಿದ್ದಲ್ಲಿ ನವೀಕರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳಿಗೆ ಕಡ್ಡಾಯ ಅನುಮತಿ ಹಾಗೂ ವೆಚ್ಚ ನಿರ್ವಹಣೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.
ಅನುಮತಿ ಪಡೆಯುವುದು ಕಡ್ಡಾಯ; ಚುನಾವಣಾ ಸಂಬಂಧಿತ ಕಾರ್ಯ ಚಟುವಟಿಕೆ ಮುಗಿಸುವ ಕಾರ್ಯ ಒತ್ತಡದಲ್ಲಿ ಚುನಾವಣಾ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳು ಇರುತ್ತವೆ. ಆದ್ದರಿಂದ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಗತ್ಯವಿರುವ ಅನುಮತಿಗಳನ್ನು ಸರಳವಾಗಿ ನೀಡಲು ಚುನಾವಣಾ ಆಯೋಗದ ಸೂಚನೆಯಂತೆ 'ಸುವಿಧಾ' ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿಯೇ ಅವಕಾಶ ನೀಡಲಾಗಿದೆ.
ಚುನಾವಣಾ ಪ್ರಚಾರಕ್ಕಾಗಿ ರಾಜಕೀಯ ಪಕ್ಷ, ಪಕ್ಷದ ಅಭ್ಯರ್ಥಿ, ಏಜೆಂಟ್, ಕಾರ್ಯಕರ್ತ ಅಥವಾ ಇತರು ತಮಗೆ ಬೇಕಿರುವ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಆದರೆ 48 ಗಂಟೆ ಮೊದಲು ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಆಯಾ ಚುನಾವಣಾಧಿಕಾರಿಗಳು ಅನುಮತಿ ಪತ್ರ ನೀಡುತ್ತಾರೆ.
ಚುನಾವಣಾ ಪ್ರಚಾರ ಕಾರ್ಯ ಮತ್ತು ಅವುಗಳಿಗೆ ಸಂಬಂಧಿಸಿದಂತೆ ಮತಕ್ಷೇತ್ರ ವ್ಯಾಪ್ತಿಗೆ ಆಯಾ ಚುನಾವಣಾ ಅಧಿಕಾರಿಗಳು, ಜಿಲ್ಲಾ ವ್ಯಾಪ್ತಿಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ರಾಜ್ಯಮಟ್ಟಕ್ಕೆ ರಾಜ್ಯ ಚುನಾವಣಾ ಆಯೋಗ ಅನುಮತಿ ಪತ್ರವನ್ನು ನೀಡುತ್ತದೆ. ಕಡಿಮೆ ಅವಧಿಯಲ್ಲಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಅವಸರ, ಒತ್ತಡ ಮಾಡುವ ಬದಲು ಸುವಿಧಾ ಬಳಸಿ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು ಮತ್ತು ಅನುಮತಿ ಪತ್ರದ ಅನುಗುಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications