ಕರ್ನಾಟಕ ಚುನಾವಣೆ; ಜಾಹೀರಾತು ನಿರ್ಬಂಧದ ನಿಯಮಗಳು
ಬೆಂಗಳೂರು, ಏಪ್ರಿಲ್ 03; ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ. ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜ್ಯದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜಾಹೀರಾತುಗಳ ಮೇಲೆ ನಿರ್ಬಂಧವಿದೆ. ಚುನಾವಣಾ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ಜಾಹೀರಾತುಗಳನ್ನು ಹಾಕುವುದನ್ನು ನಿಷೇಧಿಸಿ ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಯಾವುದೇ ಚುನಾವಣಾ ಕರಪತ್ರ, ಪ್ಲೆಕಾರ್ಡ್, ಬ್ಯಾನರ್, ಬಂಟಿಂಗ್ಸ್, ಫೆಕ್ಸ್, ಪೋಸ್ಟರ್ ಇತ್ಯಾದಿಗಳನ್ನು ಮುದ್ರಿಸುವ ಸಂದರ್ಭದಲ್ಲಿ ಅದರಲ್ಲಿ ಮುದ್ರಕರ ಹೆಸರು, ವಿಳಾಸ, ಮುದ್ರಣ ಸಂಖ್ಯೆ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು.
ಮುದ್ರಣ ಕುರಿತಾಗಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3 ದಿನಗಳ ಒಳಗಾಗಿ ಹಾಗೂ ಸಾಮಾಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದನ್ನು ಉಲ್ಲಂಘನೆ ಮಾಡುವುದು ಪ್ರಜಾಪ್ರತಿನಿಧಿ ಕಾಯ್ದೆ 1951ರ 127 (ಎ) ಉಲ್ಲಂಘನೆಯಾಗಿದೆ. ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು ಮಾಡಲು ಸಹ ಅವಕಾಶವಿದೆ.
ಇನ್ನು ಚುನಾವಣಾ ಜಾಹೀರಾತುಗಳನ್ನು ಕೇಬಲ್ ನೆಟ್‌ವರ್ಕ್ ಅಥವಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವ ಪೂರ್ವದಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿರಬೇಕು. ಸುಗಮ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗಾಗಿ ಈಗಾಗಲೇ ಸ್ಟಾಟಿಕ್ ಸರ್ವೆಯಲೆನ್ಸ್ ತಂಡಗಳು, ವಿಡಿಯೋ ವೀಕ್ಷಣಾ ತಂಡಗಳು ಹಾಗೂ ಫ್ಲಯಿಂಗ್ ಸ್ಕ್ವಾಡ್‌ಗಳನ್ನು ರಚನೆ ಮಾಡಲಾಗಿದೆ.
ಸಾಮಾಜಿಕ ಜಾಲತಾಣ; ಜಾಹೀರಾತು ನಿರ್ಬಂಧಗಳು ಕೇವಲ ಪತ್ರಿಕೆ, ಸಾರ್ವಜನಿಕ ಸ್ಥಳದ ಜಾಹೀರಾತಿಗೆ ಮಾತ್ರ ಅನ್ವಯವಾಗುವುದಿಲ್ಲ. ಸಂಭಾವ್ಯ ಅಭ್ಯರ್ಥಿಗಳು, ಅಭ್ಯರ್ಥಿಗಳು ಅಥವಾ ಸ್ವತಂತ್ರ ಸ್ಪರ್ಧಿಗಳು ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯ ಆಧಾರಿತ ಜಾಹೀರಾತು ಪ್ರಕಟಿಸುವವರು ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ (ಎಂಸಿಎಂಸಿ)ಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ಟೆಲಿಗ್ರಾಂ, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಾಧಾರಿತ ಜಾಹೀರಾತು ಪ್ರಸಾರ ಮಾಡುವ ಮೊದಲು ಎಂಸಿಎಂಸಿ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಪಕ್ಷದ ಚಿಹ್ನೆ ಬಳಸಿ ಜಾಹೀರಾತು ಪ್ರಚಾರ ಮಾಡಬೇಕಾದರೆ ಪೂರ್ವ ಅನುಮತಿ ಪಡೆಯಬೇಕಿದೆ. ಇದು ಸಾಮಾಜಿಕ ಮಾಧ್ಯಮಗಳಿಗೂ ಅನ್ವಯವಾಗಲಿದೆ. ಚುನವಣಾ ಕಂಟ್ರೋಲ್ ರೂಂಗಳಲ್ಲಿ ಟಿವಿಗಳಲ್ಲಿ ಬರುವ ಜಾಹೀರಾತುಗಳ ಮೇಲೆ ಸಹ ಕಣ್ಗಾವಲು ಇಡಲಾಗಿದೆ.
ವಿವಿಧ ತಂಡಗಳ ರಚನೆ; ಕರ್ನಾಟಕದಲ್ಲಿ ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಏಪ್ರಿಲ್ 21ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ಏಪ್ರಿಲ್ 24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಅವುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚುನಾವಣಾ ಆಯೋಗವು ಸಿ-ವಿಜಿಲ್ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಇದನ್ನು ಅನುಷ್ಠಾನಗೊಳಿಸುತ್ತಿದೆ. ಈ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಂಡು ಜನರು ಹೆಸರು ಸೇರಿದಂತೆ ಇತರ ವಿವರ ಸೇರಿಸಿ ನೋಂದಣಿ ಮಾಡಿಕೊಳ್ಳಬಹುದು.
ಚುನಾವಣೆ ಸಮಯದಲ್ಲಿ ಮತದಾರರಿಗೆ ಅಕ್ರಮವಾಗಿ ಹಣ, ಗೃಹ ಬಳಕೆ ಸಾಮಗ್ರಿಗಳನ್ನು, ಮದ್ಯವನ್ನು ಹಂಚಿಕೆ ಮಾಡುವ ಬಗ್ಗೆ ಹಾಗೂ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ದೂರುಗಳಿದ್ದರೆ ಅಪ್ಲಿಕೇಷನ್‍ನಲ್ಲಿ ವಿಡಿಯೋ ಮತ್ತು ಫೋಟೊಗಳ ಮೂಲಕ ದೂರು ಸಲ್ಲಿಸಬಹುದಾಗಿದೆ.












Click it and Unblock the Notifications