ಕಲಬುರ್ಗಿ ಹತ್ಯೆ: ಗೌರಿ ಕೊಲೆಯ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ
ಬೆಂಗಳೂರು, ಸೆಪ್ಟೆಂಬರ್ 14: ವಿಚಾರವಾದಿ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ಮೂರು ವರ್ಷಗಳ ಬಳಿಕ ಕೊನೆಗೂ ತಿರುವು ಸಿಕ್ಕಿದೆ.
ಕಲಬುರ್ಗಿ ಅವರ ಹತ್ಯೆಯ ಆರೋಪಿಗಳ ಬಗ್ಗೆ ಸುಳಿವು ದೊರಕಿದ್ದು, ಅವರಲ್ಲಿ ಇಬ್ಬರು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನೆರವಾದವರೇ ಎಂಬುದು ತಿಳಿದುಬಂದಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿರುವ ಆರೋಪಿಗಳ ಪೈಕಿ ಗಣೇಶ್ ಮಿಸ್ಕಿನ್ ಮತ್ತು ಅಮಿತ್ ಬದ್ದಿಯನ್ನು ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಶಕ್ಕೆ ತೆಗೆದುಕೊಂಡಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಮತ್ತು ಅಮೋಲ್ ಕಾಳೆ ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಸುಳಿವು ನೀಡಿದ್ದರು.
ಗೌರಿ ಮತ್ತು ಕಲಬುರ್ಗಿ ಅವರ ಹತ್ಯೆಗೆ ಬಳಸಿದ ಗನ್ ಒಂದೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ತಿಳಿಸಿತ್ತು.
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಮಿಸ್ಕಿನ್ ಮತ್ತು ಬದ್ದಿ ಇಬ್ಬರೂ ಕಲಬುರ್ಗಿ ಅವರ ಹತ್ಯೆಗೆ ಕೂಡ ನೆರವು ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಸಿಐಡಿ, ಅವರನ್ನು ವಿಚಾರಣೆಗೆ ಒಳಪಡಿಸಲು ಹುಬ್ಬಳ್ಳಿ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಸಲ್ಲಿಸಿತ್ತು.
ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಸಿಐಡಿ ಸೆ.15ರವರೆಗೂ ಅವರನ್ನು ವಿಚಾರಣೆಗೆ ಒಳಪಡಿಸಲಿದೆ.












Click it and Unblock the Notifications