ಎಂಎಲ್‌ಸಿ ಚುನಾವಣೆ: ಹೈಕಮಾಂಡ್ ಶಾಕ್- ಹೇಮಲತಾ ನಾಯಕ್‌ಗೆ ಟಿಕೆಟ್
ಬೆಂಗಳೂರು, ಮೇ24: ಬಿಜೆಪಿಯ ಹೈಕಮಾಂಡ್ ಅಚ್ಚರಿಯ ಆಯ್ಕೆಯನ್ನು ನೀಡಿ ಸದಾ ರಾಜ್ಯ ನಾಯಕರನ್ನು ನಿಬ್ಬೆರಗಾಗುವಂತೆ ಮಾಡುತ್ತಾರೆ. ರಾಜ್ಯ ವಿಧಾನಸಭೆಯಿಂದ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಮತ್ತೊಂದು ಅಚ್ಚರಿಯ ಆಯ್ಕೆಯನ್ನು ಆರಿಸಿದೆ. ಬಿವೈ ವಿಜಯೇಂದ್ರರಂತಹ ನಾಯಕರನ್ನು ಹೊರತುಪಡಿಸಿ ಅಚ್ಚರಿ ಎಂಬಂತೆ ಯಾರು ಊಹಿಸದ ಬಿಜೆಪಿ ನಾಯಕಿಗೆ ಪರಿಷತ್ ಟಿಕೆಟ್ ಸಿಕ್ಕಿದೆ. ಮೊದಲ ಬಾರಿ ರಾಜ್ಯ ಕಾರ್ಯದರ್ಶಿಯಾಗಿರುವ ಹೇಮಲತಾ ನಾಯಕ್ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ. ಯಾರು ಈ ಹೇಮಲತಾ ನಾಯಕ ಹೇಮಲತಾರ ರಾಜಕೀಯ ಹಿನ್ನೆಲೆ ಏನು ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ.
ಕೊಪ್ಪಳದ ಹೇಮಲತಾ ಅವರಿಗೆ ಟಿಕೆಟ್ ಫೈನಲ್ ಮಾಡಿದ್ದು, ಬಿಜೆಪಿ ಅಚ್ಚರಿ ನೀಡಿದೆ. ಸಂಸದ ಸಂಗಣ್ಣ ಕರಡಿ ಅವರ ಕಟ್ಟಾ ಬೆಂಬಲಿಗರಾಗಿರುವ ಹೇಮಲತಾ ನಾಯಕ ಅವರು ಸಂಗಣ್ಣ ಕರಡಿ ಅವರು ಬಿಜೆಪಿಗೆ ಬಂದಾಗ ಹೇಮಲತಾ ನಾಯಕ್ ಸಹ ಬಿಜೆಪಿಗೆ ಬಂದಿದ್ದರು. ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿರುವ ಹೇಮಲತಾ ನಾಯಕ ಅವರು, ಜಿಲ್ಲಾ ಬಿಜೆಪಿ ಮಹಿಳಾ ಅಧ್ಯಕ್ಷೆಯೂ ಆಗಿ ಕೆಲಸ ಮಾಡಿದ್ದಾರೆ. ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯೆಯಾಗಿದ್ದಾರೆ.
ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯೆ ಆಗಿರುವ ಹೇಮಲತಾ ಈ ಹಿಂದೆ ಕೊಪ್ಪಳ ನಗರಸಭೆಗೆ ಸ್ಪರ್ಧೆಗೆ ಟಿಕೆಟ್ ಕೇಳಿದ್ದರು. ಆಗ ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ. ಕೊಪ್ಪಳ ನಗರಸಭೆಯ 18ನೇ ವಾರ್ಡಿಗೆ ಜೆಡಿಎಸ್‍ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು ಮೂಲದ ಹೇಮಲತಾ ನಾಯಕ ಅವರು ಕೊಪ್ಪಳದಲ್ಲಿ ಸುಮಾರು ಮೂವತ್ತು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರ ಪತಿ ಪರೀಕ್ಷಿತ ರಾಜ್ ಅವರು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.

ಕೆಲಸದ ಮೂಲಕವೇ ರಾಜ್ಯ ನಾಯಕರನ್ನು ಗಮನ ಸೆಳೆದಿದ್ದರು
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಹೇಮಲತಾ ಅವರು ಸಂಪೂರ್ಣ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಅವರ ಕಾರ್ಯಚಟುವಟಿಕೆಗಳನ್ನ ಗಮನಿಸಿ ಮೊದಲ ಬಾರಿಗೆ ಹೇಮಲತಾ ಅವರನ್ನ ಬಿಜೆಪಿಯ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕವಾದ ಬಳಿಕ ಮತ್ತಷ್ಟು ಉತ್ಸಾಹದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಈ ಮೂಲಕ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶೆಟ್ಟರ್ ಸೇರಿದಂತೆ ಘಟಾನುಘಟಿ ನಾಯಕರು ಗುರುಸಿವಂತೆ ಬೆಳೆದರು. ಓರ್ವ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಹೇಮಲತಾ ಅವರ ಕಾರ್ಯಚಟುವಟಿಕೆಗಳನ್ನ ಗಮನಿಸಿ ಬಿಜೆಪಿ ವರಿಷ್ಠರು ಈಗ ವಿಧಾನಪರಿಷತ್ ಟಿಕೆಟ್ ನೀಡಿದ್ದಾರೆ.

ಮಂಜುಳಾ, ಗೀತ ವಿವೇಕಾನಂದರನ್ನು ಹಿಂದಿಕ್ಕಿ ಟಿಕೆಟ್
ತಮ್ಮ ಕಾರ್ಯಚಟುವಟಿಕೆಗಳಿಂದ ರಾಜ್ಯ ಬಿಜೆಪಿ ನಾಯಕರನ್ನ ಗಮನಸೆಳೆದ ಹೇಮಲತಾ ಅವರಿಗೆ ಟಿಕೆಟ್ ಸಿಕ್ಕಿದ್ದು, ಇದನ್ನು ಯಾರು ಸಹ ಊಹಿಸಿರಲಿಲ್ಲ. ದಿಢೀರ್ ಹೇಮಲತಾ ಅವರ ಹೆಸರು ಕೆಲ ನಾಯಕರಿಗೆ ತಿಳಿದಿರಲಿಕ್ಕಿಲ್ಲ ಅನ್ಸುತ್ತೆ. ಪರಿಷತ್ ಟಿಕೆಟ್ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ ಹೇಮಲತಾ ನಾಯಕರನ್ನು ಹೈಕಮಾಂಡ್ ಗುರುತಿಸಿದ್ದೇಗೆ ಎಂದೇ ಹಲವರು ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ. ಮಹಿಳಾ ಕೋಟಾದ ಅಡಿಯಲ್ಲಿ ಮಂಜುಳಾ ಹಾಗೂ ರಾಜ್ಯ ಬಿಜೆಪಿ ಮಹಿಳಾ ಅಧ್ಯಕ್ಷೆ ಗೀತಾ ವಿವೇಕಾನಂದ ಹೆಸರುಗಳು ಪ್ರಬಲವಾಗಿ ಕೇಳಿಬಂದಿದ್ದವು. ಅದರಲ್ಲೂ ಪ್ರಮುಖವಾಗಿ ಮಂಜುಳಾ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಕೊನೆ ಕ್ಷಣದಲ್ಲಿ ಹೇಮಲತಾ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ. ಇದರಿಂದಾಗಿ ಹಲವಾರು ಜನ ಶಾಕ್ ಆಗಿದ್ದಾರೆ.

ಮಹಿಳಾ ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿ
ಹೇಮಲತಾ ಅವರು ಮಹಿಳಾ ಸದಸ್ಯರುಗಳನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಅಲ್ಲದೇ ಸಭೆ ಸಮಾರಂಭಲ್ಲಿ ಮಹಿಳಾ ಕಾರ್ಯಕರ್ತರನ್ನ ಒಗ್ಗೂಡಿಸುತ್ತಿದ್ದರು. ಇದೇ ಕಾರಣಕ್ಕಾಗಿ ಸಾಮಾನ್ಯ ಕಾರ್ಯಕರ್ತೆ ಹೇಮಲತಾರವರಿಗೆ ವಿಧಾನ ಪರಿಷತ್ತಿನ ಸದಸ್ಯರಾಗುವ ಅದೃಷ್ಟ ಖುಲಾಯಿಸಿದೆ.

ಕಡೇ ಕ್ಷಣದವರೆಗೂ ಟೆಕ್ಷನ್ ಟೆಕ್ಷನ್
ಬಿಜೆಪಿಯ ಹೈಕಮಾಂಡ್ ಹೇಮಲತಾರ ಹೆಸರನ್ನು ಕಡೆಯ ದಿನದಲ್ಲಿ ಅನೌನ್ಸ್ ಮಾಡಿದ್ದರಿಂದ ಗೊಂದಲಮಯ ವಾತವರಣನ ನಿರ್ಮಾಣವಾಯಿತು. ಹೇಮಲತಾ ರಸ್ತೆ ಮಾರ್ಗವಾಗಿ ಬಂದು ನಾಮಪತ್ರ ಸಲ್ಲಿಸಲು ಸಾಧ್ಯವಾಗತ್ತಿರಲಿಲ್ಲ. ಇದರಿಂದಾಗಿ ಹೆಲಿಕಾಪ್ಟರ್ ಮೂಲಕ ಜಕ್ಕೂರು ನಿಲ್ದಾಣಕ್ಕೆ ಬಂದು ಆ ಬಳಿಕ ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಕಡೇ ಕ್ಷಣವರೆಗೂ ಟೆಕ್ಷನ್‌ನಲ್ಲಿದ್ದರು ಅಭ್ಯರ್ಥಿ ಹೇಮಲತಾ ನಾಯಕ್.
ಸಂಸದ ಕರಡಿ ಸಂಗಣ್ಣರ ಬೆಂಬಲದಿಂದಾಗಿ ಹೇಮಲತಾ ನಾಯಕ್‌ಗೆ ವಿಧಾನಪರಿಷತ್ತಿನ ಟಿಕೆಟ್ ಸಿಕ್ಕಿದೆ ಎಂದು ರಾಜಕೀಯವಲಯದಲ್ಲಿ ಮಾತನಾಡುತ್ತಿದ್ದಾರೆ. ಬಿಜೆಪಿ ಹೈಕಮಾಡ್ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟು ಅಚ್ಚರಿ ಆಯ್ಕೆ ಮಾಡಿ ತಮ್ಮ ತಾಕತ್ತನ್ನು ತೋರಿಸಿದ್ದಾರೆ.












Click it and Unblock the Notifications