'ಸಿದ್ದರಾಮಯ್ಯ ಸರ್ಕಾರದಲ್ಲಿ ಕನಿಷ್ಠ ಮಂತ್ರಿ ಸ್ಥಾನಕ್ಕೂ ನಿಮ್ಮನ್ನ ಪರಿಗಣಿಸಿಲ್ಲ'
ಬೆಂಗಳೂರು, ಮಾರ್ಚ್ 26: ರಾಜ್ಯ ರಾಜಕಾರಣದಲ್ಲಿ ನಿಮ್ಮ ಪ್ರಾಮುಖ್ಯತೆ ಕ್ಷೀಣಗೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಾಂಗ್ರೆಸ್ ಪಕ್ಷದಲ್ಲಿಯೂ ನಿಮ್ಮನ್ನು ಮೂಲೆಗೊತ್ತಲಾಗಿದೆ. ನಿಮ್ಮ ರಾಜಕೀಯ ಜೀವನದಲ್ಲಿ ಯಾವತ್ತೂ ಕೂಡಾ ಮುಂಚೂಣಿಯ ನಾಯಕರಾಗಿ ಹೊರಹೊಮ್ಮಲಿಲ್ಲ. ಕಳೆದ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರೂ, ನಿಮ್ಮನ್ನು ಸಿದ್ದರಾಮಯ್ಯನವರ ನೇತೃತ್ವದ
ಕಾಂಗ್ರೆಸ್ ಸರ್ಕಾರದಲ್ಲಿ ಕನಿಷ್ಠ ಮಂತ್ರಿ ಸ್ಥಾನಕ್ಕೆ ಪರಿಗಣಿಸಲೂ ಇಲ್ಲದಿರುವುದು, ನಿಮ್ಮ ರಾಜಕೀಯ ಯೋಗದ ನಾಯಕತ್ವಕ್ಕೆ ಪರಮ ಉದಾಹರಣೆ ಎಂದು ಬಿ ಕೆ ಹರಿ ಪ್ರಸಾದ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಛಲವಾದಿ ನಾರಾಯಣಸ್ವಾಮಿ ಅವರು, ಕಾಂಗ್ರೆಸ್ ಪಕ್ಷದಲ್ಲಿ ನೀವು ಯೋಗದ ಬಲದಿಂದ ಅನುಭವಿಸಿದ ಎಲ್ಲಾ ಅಧಿಕಾರಗಳನ್ನು ಯಾರೂ ಕೂಡಾ ಯೋಗ್ಯತೆಯಿಂದ ಅನುಭವಿಸುವುದಕ್ಕೆ ಸಾಧ್ಯವಿಲ್ಲ? ಹೌದು, ಕನಸಲ್ಲೂ ಕೂಡಾ ಕಾಂಗ್ರೆಸ್‌ನಲ್ಲಿ ಯೋಗ್ಯತೆಗೆ ಅಧಿಕಾರ ಸಿಗುವುದಿಲ್ಲ. ಇನ್ನೇನಿದ್ದರೂ, ನಿಮ್ಮಂತೆ ಗಾಂಧಿಗಳ ಪಾದಪೂಜೆ ಮಾಡಿ ಯೋಗ ಗಿಟ್ಟಿಸಿಕೊಳ್ಳಬೇಕಷ್ಟೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಅಧಿಕಾರಗಳನ್ನು ಯೋಗದಿಂದ ಅನುಭವಿಸಿದ್ದರೂ ಪ್ರಸ್ತುತ ಅತೃಪ್ತ ನಾಯಕರಾಗಿ ಹೊರಹೊಮ್ಮಿದ ಬಿಕೆ ಹರಿಪ್ರಸಾದ್ಅವರೇ..ನನ್ನ ಮೇಲೆ ಮಾಡಿರುವ ಎಲ್ಲಾ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಅವನ್ನು ದೃಢೀಕರಿಸಲು ನಿಮ್ಮಿಂದ ಸಾಧ್ಯವೇಯಿಲ್ಲ, ಏಕೆಂದರೆ ಅವು ಕಾಂಗ್ರೆಸ್ ಮತ್ತು ಅದರ ನಾಯಕರ ಖಯಾಲಿ ಆರೋಪಗಳು. ಇಂತಹ ತಿರಸ್ಕಾರಗಳು ಮತ್ತು ನಿಮ್ಮ ಕೀಳು ಮಟ್ಟದ ನಿಂದನೆಗಳು ನನ್ನ ಯೋಗ್ಯತೆಯನ್ನು ಮಸುಕಾಗಿಸುವುದಿಲ್ಲ. ಇಂತಹ ದುರುದ್ದೇಶಿತ ಆರೋಪಗಳು ನನ್ನ ಹೋರಾಟ ಜೀವನವನ್ನು ಹತ್ತಿಕ್ಕಲಾರವು - ಅದು ನಿಮ್ಮ ಕನಸು ಮಾತ್ರ!
ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮ ರೀತಿಯಲ್ಲಿ ಎಲ್ಲಾ ಅಧಿಕಾರಗಳನ್ನು ಅನುಭವಿಸಬೇಕೆಂದರೆ ನಿಮ್ಮಂತೆಯೇ ಯೋಗ ಇರಬೇಕು ಹೊರತು ನನ್ನಂತೆಯೇ ಯೋಗ್ಯತೆ ಇರಬೇಕೆಂದೇನಿಲ್ಲ. ನನ್ನ ಯೋಗ್ಯತೆಯ ಮುಂದೆ ನಿಮ್ಮ ಯೋಗ ಚೆನ್ನಾಗಿ ಕೆಲಸ ಮಾಡಿದೆ, ಆದರೆ ಯೋಗ ಕ್ಷಣಿಕ, ಯೋಗ್ಯತೆ ಅಜರಾಮರ. ನೀವು ಕಾಂಗ್ರೆಸ್ ಪಕ್ಷದಲ್ಲಿ ಯೋಗದ ಬಲದಿಂದ ಅಧಿಕಾರಕ್ಕೆ ಬಂದಿದ್ದೀರಿ ಪರರ ಕಾಲು ಬುಡಕ್ಕೆ ಬಿದ್ದರೆ ಯೋಗ ಬರುವುದು ಸಹಜ ಎಂದು ಹಿರಿಯರು ಹೇಳುತ್ತಾರೆ, ಮತ್ತು ಅದನ್ನೇ ಅನುಭವಿಸಿದ್ದೀರಿ. ಆದರೆ ಪ್ರಸ್ತುತ ಅದೇ ಯೋಗದ ಸಹಕಾರದಿಂದ ಮತ್ತೊಮ್ಮೆ ಅಧಿಕಾರದ ಆಸೆಗಾಗಿ ರಾಜಕೀಯ ರಂಗದಲ್ಲಿ ಹಾಹಾಕಾರ ಮಾಡುತ್ತಿದ್ದೀರಿ.
ನನ್ನನ್ನು ಬಿಜೆಪಿ ಪಕ್ಷ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿರುವುದು, ನನ್ನ ಯೋಗ್ಯತೆಯನ್ನು ಗುರುತಿಸಿದ ಫಲವೇ ಹೊರತು ನಿಮ್ಮಂತ ಯೋಗದ ಪ್ರಭಾವದಿಂದ ಲಭಿಸಿದ ಅಧಿಕಾರವಲ್ಲ. ಯೋಗ ಮತ್ತು ಯೋಗ್ಯತೆ ನಡುವಿನ ವ್ಯತ್ಯಾಸವನ್ನು ಅರಿಯಬೇಕಾದರೆ ನಿಮ್ಮ ಮತ್ತು ನನ್ನ ರಾಜಕೀಯ ಜೀವನವೇ ಉತ್ತಮ ಉದಾಹರಣೆ. ನಿಮ್ಮ ರಾಜಕೀಯ ಯತ್ನಗಳು ಯೋಗದ ಬಲದಿಂದ ಮಾತ್ರ ವಾಸ್ತವಿಕ ರೂಪ ಪಡೆದುಕೊಂಡಿದ್ದರೆ, ನನ್ನ ರಾಜಕೀಯ ಹಾದಿಯು ಶ್ರಮ, ನಿಷ್ಠೆ ಮತ್ತು ಯೋಗ್ಯತೆಯ ಫಲವಾಗಿ ರೂಪುಗೊಂಡಿದೆ.
ಬೇರೆಯವರ "ಖಾಕಿ ಚಡ್ಡಿ" ಯನ್ನು ಬಿಚ್ಚಲು ಪ್ರಯತ್ನಿಸಿ, ನಿಮ್ಮ ಕೈಯಾರೆ ನಿಮ್ಮ ಲಂಗೂಟಿಯನ್ನು ಕಳಚಿಕೊಂಡಿದ್ದು ಇನ್ನೂ ಜನರು ಮರೆತಿಲ್ಲ. ಬೇರೆಯವರ ಚಡ್ಡಿಯ ಮೇಲೆ ನಿಗಾ ವಹಿಸುವುದಕ್ಕಿಂತ ಮುಂಚೆ, ನಿಮ್ಮ ಪಂಚೆ ಮತ್ತು ಚಡ್ಡಿ ಉದುರಿ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳಿ. ಮುಖ್ಯಮಂತ್ರಿ ಮಾಡುವುದು ಗೊತ್ತು! ಇಳಿಸುವುದು ಗೊತ್ತು! ಎನ್ನುವ ರೀತಿಯಲ್ಲಿ ನಿಮ್ಮ ರಾಜಕೀಯ ವ್ಯಥೆ ಮತ್ತು ಅಸಹಾಯಕತೆಯನ್ನು ಮುಚ್ಚಿಡಲು ಇತರರ ಮೇಲೆ ಚಾದರ ಹಾಸಿಸಲು ಯತ್ನಿಸುವುದು ವಿಫಲ ಪ್ರಯತ್ನವಾಗುತ್ತದೆ ಎಂಬುದನ್ನು ಯಾವತ್ತೂ ಮರೆಯಬೇಡಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ನಾಮಕರಣ ಅಧಿಕಾರದ ಬಲದಿಂದ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ನೀವು, ಜನಪ್ರೀಯತೆಯ ಕೊರತೆಯಿಂದ ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ನಿಮ್ಮ ಹೈಕಮಾಂಡ್‌ನ್ನು ಖುಷಿಪಡಿಸಲು ಹೊರಟಿದ್ದೀರಿ. ಇದು ನಿಮ್ಮ ರಾಜಕೀಯ ಅಸಹಾಯಕತೆ ಮತ್ತು ವ್ಯಕ್ತಿತ್ವದ ದಾರಿದ್ರ್ಯತೆಯನ್ನು ಸ್ಪಷ್ಟಪಡಿಸುತ್ತದೆ. ನಿಮ್ಮ ರಾಜಕೀಯ ಯಶಸ್ಸು ಕೇವಲ ಯೋಗದ ಬಲಕ್ಕೆ ಆಧಾರಿತವಾಗಿದ್ದು, ಅದೇ ಯೋಗದ ಆಸರೆಯೊಂದಿಗೆ ಅಧಿಕಾರದ ಹವಣಿಯಲ್ಲಿ ಛಾವಣಿಯಿಂದ ಛಾವಣಿಗೆ ತಿರುಗಾಡುತ್ತಿರುವುದು ಜನತೆಗೆ ಪರಿಚಯವಿದೆ.
ನೀವು ಅರ್ಹತೆ ಮತ್ತು ಯೋಗ್ಯತೆ ಹೊಂದಿದ್ದರೆ, ನಿಮ್ಮ ಪಕ್ಷದಲ್ಲಿಯೇ ನಿಮ್ಮನ್ನು ಮಂತ್ರಿ ಪದವಿಯಲ್ಲಿ ಕೂರಿಸುತ್ತಿದ್ದರು. ಆದರೆ ಅದು ಸಾಧ್ಯವಾಗದಿರುವುದು, ನಿಮ್ಮ ಯೋಗ್ಯತೆಯ ಕೊರತೆಯನ್ನು ಸ್ಪಷ್ಟಪಡಿಸುತ್ತದೆ. ಜನಪ್ರೀಯತೆ ಇಲ್ಲದ ನಿಮ್ಮ ರಾಜಕೀಯ ಅಸ್ತಿತ್ವ, ಹೈಕಮಾಂಡ್‌ನ ದಯೆಯಿಂದ & ಯೋಗದಿಂದ ಮಾತ್ರ ಬಾಳುತ್ತಿದ್ದುದೇ ಇದಕ್ಕೆ ಸ್ಪಷ್ಟ ನಿದರ್ಶನ.
ನಿಮ್ಮ ನೇತೃತ್ವದ ಮೇಲೆ ನಂಬಿಕೆ ಇಲ್ಲದ ಕಾರಣ, ನಿಮ್ಮದೇ ನಾಯಕರಿಗೆ ನಿಮ್ಮನ್ನು ದೂರುವ ಪರಿಸ್ಥಿತಿ ಎದುರಾಗುತ್ತಿದೆ. ನಿಮ್ಮ ಅಪ್ರಭಾವಿತ ಮತ್ತು ಪ್ರಾಮುಖ್ಯತೆ ಇಲ್ಲದ ರಾಜಕೀಯ ಬದುಕು, ನಿಮ್ಮ ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತದೆ. ಯಾರದೋ ಕೃಪಾಶೀರ್ವಾದದ ಕಾರಣ ತುತ್ತತುದಿಯಲ್ಲಿದ್ದ ತಾವು ಇಂದು ಯಾರಿಗೂ ಬೇಡದ ಕಸವಾಗಿರುವುದು ಯಾಕೆಂದು ಒಮ್ಮೆ ಯೋಚಿಸಿ ನೋಡಿ. ಮಾನ್ಯರೆ, ನೀವು ಹಾತೊರೆಯುತ್ತಿರುವ/ ಹಪಹಪಿಸುತ್ತಿರುವ ನಿಮ್ಮ ಕನಸಿನ ಮಂತ್ರಿ ಪದವಿ, ಯೋಗದಿಂದಾಗಲಿ ಅಥವಾ ಇನ್ಯಾವುದೇ ಮಾರ್ಗದಿಂದಾಗಲಿ ನಿಮಗೆ ದೊರಕಲಿ ಎಂದು ಹಾರೈಸುತ್ತೇನೆ. ಕೊನೆಯದಾಗಿ, ನಿಮಗಿದು ಹೊಸತೇನಲ್ಲ - ಬಡಜನರ ಮತ್ತು ತಳಸಮುದಾಯಗಳ ಪರವಾದ ಹೋರಾಟವೇ ನನ್ನ ಜೀವನ! ಹೋರಾಟಕ್ಕೆ ಸಿಕ್ಕ ಪ್ರತಿಫಲವೇ ನನ್ನ ಸ್ಥಾನಮಾನಗಳು ಎಂದು ಹೇಳಿದ್ದಾರೆ.












Click it and Unblock the Notifications