ಐಎಎಸ್ ಅಧಿಕಾರಿಗೆ ಧಮಕಿ, ಶಿವಮೂರ್ತಿ ನಾಯ್ಕ್ ಕಿವಿ ಹಿಂಡಿದ ಸಿಎಂ
ಬೆಂಗಳೂರು, ಅಕ್ಟೋಬರ್ 12 : ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿ ಹಿಂಡಿದ್ದಾರೆ. ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಟಾರಿಯಾಗೆ ಧಮಕಿ ಹಾಕಿದ ಆರೋಪವನ್ನು ಶಾಸಕರು ಎದುರಿಸುತ್ತಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, 'ಶಿವಮೂರ್ತಿ ನಾಯ್ಕ್ ಜೊತೆ ಈಗಾಗಲೇ ಮಾತನಾಡಿದ್ದೇನೆ. ನೋಡಪ್ಪ ಈ ಥರ ಮಾಡಬಾರದು, ಸರಿಯಲ್ಲ ಎಂದು ಹೇಳಿದ್ದೇನೆ' ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರು ಐಎಎಸ್ ಅಧಿಕಾರಿಗೆ ಧಮಕಿ ಹಾಕಿದ ಆರೋಪ ಎದುರಿಸುತ್ತಿದ್ದಾರೆ. ಪುತ್ರನಿಗೆ ಗ್ರಾನೈಟ್ ಗಣಿಗಾರಿಕೆ ನಡೆಸಲು ಅನುಮತಿ ನೀಡಿಲ್ಲ ಎಂದು ಶಾಸಕರು ಧಮಕಿ ಹಾಕಿದ್ದಾರೆ ಎಂಬುದು ಆರೋಪ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿರುವ ರಾಜೇಂದ್ರಕುಮಾರ್ ಕಟಾರಿಯಾ ಅವರು, ಶಾಸಕರು ಧಮಕಿ ಹಾಕಿರುವ ಬಗ್ಗೆ ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳು, ಐಎಎಸ್ ಅಧಿಕಾರಿಗಳ ಸಂಘಕ್ಕೆ ದೂರು ನೀಡಿದ್ದಾರೆ.
'ಶಾಸಕರ ವರ್ತನೆಯಿಂದಾಗಿ ದಕ್ಷತೆಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಕಾನೂನು ರೀತಿ ಕೆಲಸ ಮಾಡಿದರೂ ಶಾಸಕರಿಂದ ಅಡ್ಡಿಯಾಗುತ್ತಿದೆ. ಬೆದರಿಕೆಯನ್ನೂ ಹಾಕಿದ್ದಾರೆ. ಹಾಗಾಗಿ ಸೂಕ್ತ ರಕ್ಷಣೆಯನ್ನು ಒದಗಿಸಬೇಕು' ಎಂದು ಕಟಾರಿಯಾ ಅವರು ಮನವಿ ಮಾಡಿದ್ದರು.












Click it and Unblock the Notifications