ನಾಗೇಂದ್ರನ ವಂಚನೆ ಬಗ್ಗೆ ಬುಕ್ ಪ್ರಿಂಟ್ ಮಾಡಿ ಹಂಚ್ತೀನಿ: ಜನಾರ್ದನ ರೆಡ್ಡಿ ವಾರ್ನಿಂಗ್
ವಾಲ್ಮೀಕಿ ಹಗರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ಕಾಂಗ್ರೆಸ್ ಸಚಿವ ಬಿ.ನಾಗೇಂದ್ರ ಅವರ ಬಗ್ಗೆ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಾಗೇಂದ್ರ ಅವರ ವಂಚನೆ ಹಾಗೂ ಆತನ ಮೇಲಿರುವ ಚಾರ್ಜ್‌ಶೀಟ್ ಅನ್ನು ಬುಕ್ ಆಗಿ ಪ್ರಿಂಟ್ ಮಾಡಿಸಿ, ಎಲ್ಲರಿಗೂ ಹಂಚಿಬಿಡುತ್ತೇನೆ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ನಾಗೇಂದ್ರ ಅವರ ವಿರುದ್ಧ ಕೆಂಡವಾಗಿರುವ ಜನಾರ್ದನ ರೆಡ್ಡಿ, ಮಾಜಿ ಸಚಿವ ನಾಗೇಂದ್ರ ನಿನ್ನೆ ದಿನ ವಾಲ್ಮೀಕಿ ಜಯಂತಿ ಸಭೆಯಲ್ಲಿ ಕಣ್ಣೀರು ಹಾಕಿರುವುದು ಪಶ್ಚಾತ್ತಾಪದ ಕಣ್ಣೀರು ಎಂದು ಟೀಕಿಸಿದ್ದಾರೆ. ನಾಗೇಂದ್ರನನ್ನು ರಾಜಕೀಯವಾಗಿ ಬೆಳೆಸಿದ್ದು ನಾವೇ. ಆದರೆ ಇಂತವನನ್ನಾ ನಾವು ಬೆಳೆಸಿದ್ದು ನಮಗೂ ಪಶ್ಚಾತಾಪವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಕೋಟ್ಯಂತರ ಹಣವನ್ನು ಲೂಟಿ ಮಾಡಲಾಗಿದೆ. ನಾಗೇಂದ್ರ ವಾಲ್ಮೀಕಿ ನಿಗಮದಲ್ಲಿ ಮಾಡಿರುವ ವಂಚನೆ ಕುರಿತು ಒಂದು ಸಣ್ಣ ಪುಸ್ತಕ ಮುದ್ರಿಸಿ, ಎಲ್ಲರಿಗೂ ಹಂಚಿಬಿಡುತ್ತೇನೆ. ಆತನ ಮೇಲಿನ ಚಾರ್ಜ್‌ಶೀಟ್ ಅನ್ನು ಸಹ ಮುದ್ರಿಸಿ ಬಿಡುಗಡೆ ಮಾಡುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಸಂಡೂರಿನಲ್ಲಿ ಉಪಚುನಾವಣೆ ನಡೆಯುವ ಹಿನ್ನೆಲೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಇದೇ ನಾಗೇಂದ್ರ ಬರುತ್ತಾರೋ, ಸೋನಿಯಾ ಗಾಂಧಿ ಬರ್ತಾರೋ ಗೊತ್ತಿಲ್ಲ. ಇನ್ನು ನಾವು ನಾಗೇಂದ್ರನ ಬಗ್ಗೆ ಮಾತನಾಡೋದೇ ತಪ್ಪು. ಏಕೆಂದರೆ, ನಾಗೇಂದ್ರ ಈಗಾಗಲೇ ಡಸ್ಟ್‌ಬಿನ್‌ನಲ್ಲಿ ಬಿದ್ದಿರುವವನು. ಆತನನ್ನು ಕಾಂಗ್ರೆಸ್ ಚೆನ್ನಾಗಿ ಬಳಸಿಕೊಂಡಿದೆ. ಹೀಗಾಗಿ ಮಾಡಿದ ಪಾಪಕ್ಕೆ ಈಗ ಕಣ್ಣೀರು ಹಾಕುತ್ತಿದ್ದಾನೆ ಎಂದು ಟೀಕಿಸಿದ್ದಾರೆ.
ವಾಲ್ಮೀಕಿ ಹಗರಣದಲ್ಲಿ ಸರ್ಕಾರಿ ನೌಕರ ಸೂಸೈಡ್ ಮಾಡಿಕೊಂಡಿದ್ದಕ್ಕೆ ಸತ್ಯ ಏನು ಎಂದು ಬಯಲಿಗೆ ಬಂತು. ಒಂದು ವೇಳೆ ಸುಳ್ಳು ಹೇಳುವುದಿದ್ದರೆ ಆತ ಸಾಯುತ್ತಿರಲಿಲ್ಲ. ಸತ್ಯ ಹೇಳಿಯೇ ಆತ ಪ್ರಾಣ ಬಿಟ್ಟಿದ್ದಾನೆ. ನೌಕರರನ್ನು ವಿಡಿಯೋ ಮಾಡಿಸಿ ಹೆದರಿಸಿದ್ದರಿಂದ ಸೂಸೈಡ್ ಮಾಡಿಕೊಂಡಿದ್ದಾನೆ. ಈಗ ನಾಗೇಂದ್ರ ಏನೇ ಮಾತನಾಡಿದರೂ ಜನ ನಂಬುವಷ್ಟು ದಡ್ಡರಲ್ಲ. ನಾಗೇಂದ್ರ ಸುಮ್ಮನಿದ್ರೆ ಸರಿ, ಇಲ್ಲದಿದ್ರೆ ಆತ ಏನೇನು ಮಾಡಿದ್ದಾನೋ ಅದನ್ನೆಲ್ಲ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ನಾಗೇಂದ್ರ ಹೇಳಿದ್ದೇನು?: ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ನಂತರ ಮಾಜಿ ಸಚಿವ ಬಿ.ನಾಗೇಂದ್ರ ಮಾತನಾಡಿದ್ದರು. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ನಾನೇ ಅಕ್ರಮ ಮಾಡಿದ್ದೇನೆ ಎಂದು ಕೆಲವರು ನಂಬಿದ್ದು, ಇದು ಸಂಪೂರ್ಣ ಸುಳ್ಳು ಎಂದು ನಾನು ನಂಬಿಸುವ ಅಗತ್ಯವೇ ಇಲ್ಲ ಎಂದಿದ್ದರು.
ನಾನು ತುಂಬಾ ಸಲ ಜೈಲು ನೋಡಿದ್ದು, ಯಾವುದಕ್ಕೂ ಹೆದರುವುದಿಲ್ಲ. ಯಾವುದೋ ಒಂದು ಸುಳ್ಳಿನಿಂದ ನನ್ನನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಮುಂದೆ ಏನಾಗುತ್ತೆ ಎಂದು ನೀವೇ ನೋಡ್ತೀರಿ. ಬಿಜೆಪಿಯ ಹಲವರನ್ನು ಈ ಹಗರಣ ಸುತ್ತಿಕೊಳ್ಳಲಿದೆ. ಅವರ ಹೆಸರುಗಳನ್ನು ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬರೆದೇ ಬಂದಿದ್ದೀನಿ. ಅವರೆಲ್ಲ ಜೈಲಿಗೆ ಹೋಗೋದು ಫಿಕ್ಸ್ ಎಂದು ಹೇಳಿದ್ದರು.












Click it and Unblock the Notifications