ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನ ಆಡಳಿತಾಧಿಕಾರಿ ನೇಮಕ
ಬೆಂಗಳೂರು, ಮಾರ್ಚ್ 02 : ರಾಜ್ಯ ಒಕ್ಕಲಿಗರ ಸಂಘದ ನೂತನ ಆಡಳಿತಾಧಿಕಾರಿಯಾಗಿ ಎಂ. ಕೆ. ಶಂಕರಲಿಂಗೇಗೌಡರನ್ನು ನೇಮಕ ಮಾಡಲಾಗಿದೆ. ಸಂಘಕ್ಕೆ ಚುನಾವಣೆ ನಡೆಸಿ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ ಮಾಡುವಂತೆ ಅವರಿಗೆ ಸೂಚನೆ ನೀಡಲಾಗಿದೆ.
ಕರ್ನಾಟಕ ಸರ್ಕಾರ ಫೆಬ್ರವರಿ 21ರಿಂದಲೇ ಜಾರಿಗೆ ಬರುವಂತೆ ನಿವೃತ್ತ ಐಎಎಸ್ ಅಧಿಕಾರಿ ಎಂ. ಕೆ. ಶಂಕರಲಿಂಗೇಗೌಡರನ್ನು ರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿ ನೇಮಿಸಿದೆ. ಮುಂದಿನ ಆರು ತಿಂಗಳ ಕಾಲ ಅವರ ಆಡಳಿತಾಧಿಕಾರಿಯಾಗಿರಲಿದ್ದಾರೆ.
ಸಂಘದ ಆಡಳಿತಾಧಿಕಾರಿಯಾಗಿದ್ದ ಎಚ್. ಎಸ್. ಅಶೋಕಾನಂದ ಅವರ ಅವಧಿ ಫೆಬ್ರವರಿ 20ಕ್ಕೆ ಅಂತ್ಯಗೊಂಡಿತ್ತು. ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ 6 ತಿಂಗಳಿನಲ್ಲಿ ಚುನಾವಣೆ ನಡೆಸಿ, ಅಧಿಕಾರವನ್ನು ಆಡಳಿತ ಮಂಡಳಿಗೆ ಹಸ್ತಾಂತರ ಮಾಡುವಂತೆ ನೂತನ ಆಡಳಿತಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಎಚ್. ಎಸ್. ಅಶೋಕಾನಂದ 2018ರಿಂದ ಆಡಳಿತಾಧಿಕಾರಿಯಾಗಿದ್ದರು. ರಾಜ್ಯ ಸರ್ಕಾರ ಅವರ ಅವಧಿಯನ್ನು ವಿಸ್ತರಣೆ ಮಾಡಿತ್ತು. ಆದರೆ, ಸಂಘದ ಆಜೀವ ಸದಸ್ಯರಾದ ಎಚ್. ಜಿ. ಮಹೇಶ್ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು.
ಆಡಳಿತಾಧಿಕಾರಿ ಒಂದೂವರೆ ವರ್ಷಗಳು ಕಳೆದರೂ ಚುನಾವಣೆ ನಡೆಸಿಲ್ಲ. ಸಂಘಕ್ಕೆ ಸರಿಯಾಗಿ ಬರುತ್ತಿಲ್ಲ. ಸರ್ಕಾರದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ ಅಧಿಕಾರಿಯನ್ನು ನೇಮಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು.
ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಂಗರಾಜು ಎಂಬುವವರು ಸಂಘದ ಆಡಳಿತ ಕಚೇರಿಗೆ ಆಡಳಿತಾಧಿಕಾರಿ ಸರಿಯಾಗಿ ಬರುತ್ತಿಲ್ಲ. ಆಡಳಿತಾಧಿಕಾರಿಯನ್ನು ಬದಲಾವಣೆ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.












Click it and Unblock the Notifications