20ಕ್ಕೂ ಅಧಿಕ ಶಾಸಕರನ್ನು ಒಟ್ಟುಗೂಡಿಸಿ ಹೊರಟಿದ್ದು ಎಲ್ಲಿಗೆ? ಸತ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ!
ಬೆಂಗಳೂರು,ಅಕ್ಟೋಬರ್ 16: ರಾಜ್ಯದಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಲ್ಲಿ ಅಸಮಾಧಾನದ ಕಿಚ್ಚು ಬೂದಿಮುಚ್ಚಿದ ಕೆಂಡದಂತಿದೆ. ಹೌದು, ಮೈಸೂರು ದಸರಾ ನೆಪದಲ್ಲಿ 20ಕ್ಕೂ ಅಧಿಕ ಶಾಸಕರೊಂದಿಗೆ ಮೈಸೂರಿಗೆ ತೆರಳಲು ಸಿದ್ದತೆ ನಡೆಸಿದ್ದ ಸಚಿವ ಸತೀಶ್ ಜಾರಕಿಹೊಳಿ ನಡೆ ಇದೀಗ ಕಾಂಗ್ರೆಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಚಿವರಾಗಿರು ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ಎಲ್ಲ ಶಾಸಕರನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ತೆರಳಲು ತಯಾರಿ ನಡೆಸಿದ್ದರು. ಅಲ್ಲದೇ ಬಸ್ ಸಹ ರೆಡಿಯಾಗಿತ್ತು. ಆದರೆ, ಒಟ್ಟಾಗಿ ಹೋಗುವುದು ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಕೊಟ್ಟ ಬೆನ್ನಲ್ಲೇ 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ ಎಂದು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಸತೀಶ್ ಜಾರಕಿಹೊಳಿ ಮಾತನಾಡಿ, ಮೈಸೂರಿಗೆ ಕೆಲವರು ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡೋಕೆ ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳುತ್ತಿದ್ದರು, ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಹೋಗಬೇಕು ಅಂತ ಇತ್ತು, ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತ ಕೆಲವರು ಹೇಳಿದ್ರು. ಹೀಗಾಗಿ ಹಾಗೆ ಸಮಾನ ಮನಸ್ಕರು ಹೋಗಬೇಕು ಅಂತ ಇತ್ತು. ಈಗ ದಸರಾ ಹಬ್ಬ ಬೇಡ ಅಂತ ಇದ್ದೇವೆ, ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗ್ತೇವೆ. ಯಾವುದೇ ಬಣ ಗಿಣ ಅಂತೇನಲ್ಲ ಎಂದು ಹೇಳಿದರು.
ಐಟಿ ರೈಡ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಇದಕ್ಕೆ ಯಾರು ಅಥಾರಿಟಿ ಯಾರು ಪ್ರೂವ್ ಮಾಡಬೇಕು? ಐಟಿ ಸೆಂಟ್ರಲ್ ದ್ದು, ಐಟಿ ಇಲಾಖೆ ರಾಜ್ಯದ್ದಲ್ಲ. ಯಾರ ದುಡ್ಡು ಏನು ಎಂದು ಅವರೇ ಪ್ರೂವ್ ಮಾಡಬೇಕು, ಆಮೇಲೆ ನೋಡಬೇಕಷ್ಟೆ, ರಾಜಕೀಯವಾದ ಆರೋಪ ಅಷ್ಟೆ ಇದು. ಹಿಂದೆ ಡಿಕೆ ರವಿ ಕೇಸ್ ಏನಾಯ್ತು? ಗಣಪತಿ ಕೇಸ್ ಏನಾಯ್ತು? ಪರೇಶ್ ಮೆಸ್ತಾ ಕೇಸ್ ಏನಾಯ್ತು? ಒಂದು ವರ್ಷ ಓಡಿಸಿದ್ರು ಅದನ್ನ, ಸಿಬಿಐ ತನಿಖೆ ಆದಮೇಲೆ ವ್ಯತಿರಿಕ್ತವಾದ ರಿಪೋರ್ಟ್ ಬಂತು. ಒಂದೇ ಒಂದು ಕೇಸ್ ನಿಂದ ನಮ್ಮ ಸರ್ಕಾರ ಬಿದ್ದೋಯ್ತು.
ಪರೇಶ್ ಮೆಹ್ತಾ ಒಂದು ಕೇಸ್ ಗೆ ನಮ್ಮ ಸರ್ಕಾರವೇ ಬಿದ್ದೋಯ್ತು. ನಂತರ ಅವನು ಬಾವಿಗೆ ಬಿದ್ದು ಸಾವನ್ನಪ್ಪಿದ್ದು ಅಂತ ಗೊತ್ತಾಯ್ತು, ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದುಡ್ಡು ಬಹಳಷ್ಟಿದೆ
ಏಕರೆಗೆ ೧೦-೩೦-೪೦ ಕೋಟಿ ಇದೆ, ನಮ್ಮ ಕಡೆಯಾದ್ರೆ ೧೦-೨೦ ಲಕ್ಷ ಎಕರೆಗೆ ಮಾರಾಟ ಮಾಡ್ತೀವಿ. ಆದರೆ ಬೆಂಗಳೂರಿನಲ್ಲಿ ಹಾಗಲ್ಲ, ಎಕರೆಗೆ ೪೦-೫೦ ಕೋಟಿ ಇದೆ. ಈಗಲೇ ಮೊದಲ ರೇಡ್ ಆದವರು ನಮ್ಮದೇ ದುಡ್ಡು ಅಂತ ಒಪ್ಕೊಂಡಿದಾರೆ, ತಕ್ಷಣ ಆರೋಪ ಬಂದ ತಕ್ಷಣ ಉತ್ತರ ಕೊಡಬೇಕಾಗಿಲ್ಲ ಎಂದು ಹೇಳಿದರು.

ಸಿಎಂ ವಿರುದ್ದ ಕಲೆಕ್ಷನ್ ಮಾಸ್ಟರ್ ಎಂಬ ಪೋಸ್ಟರ್ ವಿಚಾರವಾಗಿ ಮಾತನಾಡಿ, ಆಗ ಪೋಸ್ಟರ್ ನಾವು ಮಾಡಿದ್ದೆವು, ಇವಾಗ ಅವರೂ ಮಾಡಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ, ಈಗ ಅವರು ವಿಪಕ್ಷ ಇದ್ದಾರೆ ಮಾಡಿದ್ದಾರೆ, ಸಹಜ ಅಷ್ಟೆ. ಆ ದುಡ್ಡು ಯಾರದ್ದು ಅಂತ ಸಾಬೀತಾಗುವ ತನಕ ಹೇಳೋಕಾಗಲ್ಲ. ಇ.ಡಿ ಕೂಡ ಇದರಲ್ಲಿ ತನಿಖೆ ಮಾಡಬಹುದು.
ಮಂತ್ರಿಗಳಿಗೆ ಹಣ ಸಂಗ್ರಹ ಮಾಡಿ ಅಂತ ಡೈರಕ್ಷನ್ ಇದೆ ಅನ್ನೋ ವಿಚಾರವಾಗಿ ಮಾತನಾಡಿ, ಕಲೆಕ್ಷನ್ ಮಾಡಿ ಅಂತ ಯಾವುದೇ ಡೈರಕ್ಷನ್ ನಮಗೆ ಕೊಟ್ಟಿಲ್ಲ. ಸಾಬೀತು ಆಗಲಿ ಮೊದಲು ಆಮೇಲೆ ಗೊತ್ತಾಗುತ್ತಲಾ. ಕಾಂಗ್ರೆಸ್ ಗೆ ಐಟಿ ದಾಳಿಗೆ ಒಳಗಾದವರು ನೇರ ಸಂಪರ್ಕ ಇಲ್ಲ, ಅವರು ಮಂತ್ರಿಯೂ ಅಲ್ಲ ಶಾಸಕರೂ ಅಲ್ಲ. ಕಲೆಕ್ಷನ್ ಗೆ ಯಾವುದೆ ಡೈರೆಕ್ಷನ್ ಇಲ್ಲ, ಕೆಸಿ ವೇಣುಗೋಪಾಲ ಅವರು ಮಂಡಳಿ, ಬೋರ್ಡ್ ಕಾರ್ಪೊರೇಷನ್ ಆಯ್ಕೆ ಕುರಿತು ಅವರು ಬಂದಿದ್ದು. ಅದರ ಬಗ್ಗೆ ಸಭೆ ಇತ್ತು ಹಾಗಾಗಿ ಬಂದಿದ್ದಾರೆ ಶಾಸಕರ ಜೊತೆ ಕಾರ್ಯಕರ್ತರನ್ನೂ ಮಾಡಿ ಅಂತ ಹೇಳಿದ್ದೇವೆ, ನೋಡೋಣ ಎಂದು ಹೇಳಿದರು.












Click it and Unblock the Notifications