ಸ್ಕ್ಯಾಮ್ ಗಳು ಬಿಜೆಪಿಯಲ್ಲಿದೆ, ಸ್ಕೀಮ್ ಗಳು ಕಾಂಗ್ರೆಸ್ ನಲ್ಲಿದೆ; ಸಿ ಟಿ ರವಿಗೆ ತಿರುಗೇಟು ಕೊಟ್ಟ ತಿಮ್ಮಾಪುರ
ಚಿತ್ರದುರ್ಗ, ಜೂನ್ 22: ಕಾಂಗ್ರೆಸ್ ಸ್ಕ್ಯಾಮ್ ಗಳ ಸರ್ಕಾರ ಎಂದಿದ್ದ ಸಿ.ಟಿ.ರವಿ ಹೇಳಿಕೆಗೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ಟಾಂಗ್ ನೀಡಿದ್ದಾರೆ. ಸ್ಕ್ಯಾಮ್ ಗಳು ಬಿಜೆಪಿಯಲ್ಲಿದೆ, ಸ್ಕೀಮ್ ಗಳು ಕಾಂಗ್ರೆಸ್ ನಲ್ಲಿದೆ ಸಿ ಟಿ ರವಿಗೆ ಏನು ಗೊತ್ತಿಲ್ಲ ಬಿಡಿ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಘೋಷಣೆಗೂ ಮುನ್ನ ಮೆದುಳು ಇರಲಿಲ್ವಾ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಈ ಹೇಳಿಕೆ ತಿರುಗೇಟು ನೀಡಿದ್ದು, ಈ ರೀತಿ ಹೇಳಿಕೆ ನೀಡಿದವರಿಗೆ ಮೆದುಳಿಲ್ಲ, 600ಭರವಸೆ ನೀಡಿ 50 ಭರವಸೆ ಪೂರೈಸದ ಬಿಜೆಪಿ ಪಕ್ಷ ಅಯೋಗ್ಯ ಪಕ್ಷವಾಗಿದೆ. ನಾವು ಅಧಿಕಾರಕ್ಕೆ ಬಂದ ತಿಂಗಳಲ್ಲೇ ಯೋಜನೆ ತರುತ್ತಿದ್ದೇವೆ, ನಮ್ಮ ಸರ್ಕಾರದ ಬಗ್ಗೆ ಮಾತಾಡಲು ಬಿಜೆಪಿಗೆ ಯೋಗ್ಯತೆ ಇಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ಆರ್ ಬಿ ತಿಮ್ಮಾಪುರ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರ ಅಕ್ಕಿ ವಿಷಯಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಜನತೆ ನಮ್ಮನ್ನು ಓಡಿಸುತ್ತಾರೆನೋ ಎಂಬ ಭೀತಿ ಅವರಲ್ಲಿ ಮೂಡಿದೆ ಹಾಗಾಗಿ ಕುಮಾರಸ್ವಾಮಿಯವರು ಹೇಳಿಕೆ ನೀಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಎಸ್ ಬಿ ತಿಮ್ಮಾಪುರ ಟಾಂಗ್ ನೀಡಿದ್ದಾರೆ
ಪಾಪ ಕುಮಾರಸ್ವಾಮಿ ಅವರಿಗೆ ಬಡವರ ಬಗ್ಗೆ ಅವರಿಗೆ ಏನು ಗೊತ್ತಿಲ್ಲ, ಮಾತಾಡಬೇಕೆಂದು ಅವರೆಲ್ಲ ಮಾತನಾಡುತ್ತಿದ್ದಾರೆ. ಈ ಎಲ್ಲಾ ಗ್ಯಾರೆಂಟಿ ಯೋಜನೆಗಳಿಂದ ಏನಾಗುತ್ತೇನೋ ಎಂಬಂತಾಗಿದೆ. ಜನ ನಮ್ಮನ್ನು ಓಡಿಸುತ್ತಾರೆ ಎಂಬ ಭೀತಿ ಅವರಲ್ಲಿ ಮೂಡಿಸಿದೆ ಎಂದು ತಿಳಿಸಿದರು. ಇನ್ನೂ ಅಕ್ಕಿ ಕೊಡದ ಬಿಜೆಪಿಗೆ ಜನರು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು ಅಮಿತ್ ಶಾ ಭೇಟಿಯ ಫಲಿತಾಂಶ ಇನ್ನು ನಮಗೆ ಗೊತ್ತಾಗಿಲ್ಲ. ಕೇಂದ್ರ ಸರ್ಕಾರದ ನೀತಿಯಿಂದ ಅನ್ನಭಾಗ್ಯ ತಡವಾಗಿದೆ . ಹತ್ತು ಕೆಜಿ ಅಕ್ಕಿ ನೀಡಲು ಬದ್ಧ ಎಂದು ತಿಳಿಸಿದರು. ನಾವು ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ನಾವು ಸುಮ್ಮನೆ ಕೂರುವುದಿಲ್ಲ ಎಲ್ಲಿಂದ ಆದರೂ ಸಹ ಅಕ್ಕಿ ತಂದುಕೊಡುತ್ತೇವೆ ಎಂದು ತಿಮ್ಮಾಪುರ ಹೇಳಿದರು.
ಇನ್ನು ಮಧ್ಯದ ದರ ಹೆಚ್ಚಳ ಮಾಡಲಾಗುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸತ್ಯದ ಮಟ್ಟಿಗೆ ಮಧ್ಯದ ಬೆಲೆ ಏರಿಕೆ ಇಲ್ಲ, ಏರಿಕೆ ಮಾಡಿದರೆ ತಿಳಿಸುವೆ. ಸರ್ಕಾರಗಳು ಆರ್ಥಿಕತೆ ನಿಭಾಯಿಸುವ ಬಗ್ಗೆ ಚರ್ಚಿಸಿ ದರ ನಿಗದಿ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಅಬಕಾರಿ ಇಲಾಖೆಯಲ್ಲಿ ಈವರೆಗೆ ಯಾವುದೊಂದು ವರ್ಗಾವಣೆ ಆಗಿಲ್ಲ, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ ಎಂಬ ಆರೋಪಕ್ಕೆ ಉತ್ತರಿಸಿಲ್ಲ ಎಂದು ತಿಮ್ಮಾಪುರ ತಿಳಿಸಿದರು.












Click it and Unblock the Notifications