ಅಮ್ಮಾ ಭಗವಾನ್ ಪಾದುಕೆ ಮೈಗೆ ಸವರಿಕೊಂಡ ಸಚಿವ ಮಹೇಶ್ ವಿರುದ್ಧ ಆಕ್ರೋಶ
ಬೆಂಗಳೂರು, ಜೂನ್ 19: ಬಿಎಸ್‌ಪಿ ಯಿಂದ ಗೆದ್ದು ಮೊದಲ ಬಾರಿಗೆ ಸಚಿವರಾಗಿರುವ ಎನ್.ಮಹೇಶ್ ಅವರು ಜೋಡಿ ಪಾದುಕೆಯೊಂದನ್ನು ಮೈಗೆ ಸವರಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು ಸಚಿವರ ವರ್ತನೆ ಟೀಕೆಗೆ ಗುರಿಯಾಗಿದೆ.
ಅಮ್ಮಾ ಭಗವಾನ್ ಅವರ ಪಾದುಕೆಯನ್ನು ಕೈಯಲ್ಲಿ ಹಿಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಹೇಶ್ ಅವರು ಅದನ್ನು ಹೆಗಲಿಗೆ, ಹೊಟ್ಟೆ, ಎದೆಗೆಲ್ಲಾ ಸವರಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ. ಮೌಢ್ಯದ ವಿರುದ್ಧ ಇರಬೇಕಿದ್ದ ಮೌಢ್ಯದ ದಾಸರಾಗಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಪುರೋಹಿತಶಾಯಿಯನ್ನು ವಿರೋಧಿಸುತ್ತಾ ಬಂದಿರುವ ಬಿಎಸ್‌ಪಿಯ ಶಾಸಕರಾಗಿರು ಮಹೇಶ್ ಅವರ ವರ್ತನೆ ಪುರೋಹಿತಶಾಹಿಗೆ ಒಪ್ಪಿಸಿಕೊಳ್ಳುವಂತಿದೆ ಎಂದು ಹಲವರು ಟೀಕಸಿದ್ದಾರೆ.
ಬಿಎಸ್‌ಪಿಯ ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕೃತ್ಯದ ಮೂಲಕ ಸಚಿವ ಮಹೇಶ್ ಅವರು ಅಂಬೇಡ್ಕರ್ ಸಿದ್ಧಾಂತವನ್ನು ಗಾಳಿಗೆ ತೂರಿ ನಮಗೆಲ್ಲ ನಿರಾಶೆ ಉಂಟುಮಾಡಿದ್ದಾರೆ ಎಂದು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಮಹೇಶ್ ಈ ಹಿಂದೆ ಅಂಬೇಡ್ಕರ್ ವಿಚಾರಧಾರೆಗಳ ಮೂಲಕವೇ ಜನರ ಮನ ಗೆದ್ದಿದ್ದರು ಆದರೆ ಈಗ ಅವರು ಅಮ್ಮ ಭಗವಾನ್ ಪಾದುಕೆಯನ್ನು ತಮ್ಮ ಮೈಗೆ ಸವರಿಕೊಳ್ಳುವ ಮೂಲಕ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ಕೋಪ ಪ್ರಕಟಿಸಿದ್ದಾರೆ.

ಕೆಎಎಸ್ ಅಧಿಕಾರಿಯಾಗಿದ್ದ ಎನ್.ಮಹೇಶ್ ಅವರು ಚಾಮರಾಜನಗರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವರಾಗಿಯೂ ಆಯ್ಕೆ ಆಗಿದ್ದಾರೆ.












Click it and Unblock the Notifications