ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಸಚಿವ ಸುಧಾಕರ್ ತಾಕೀತು
ಬೆಂಗಳೂರು, ಆಗಸ್ಟ್ 11: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಾರಿಗೊಳಿಸುತ್ತಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನೀಲನಕ್ಷೆ ರೂಪಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಪ್ರಸಕ್ತ ವರ್ಷದ ಕಾರ್ಯಕ್ರಮಗಳು ಮತ್ತು ಅನುದಾನದ ಪ್ರಸ್ತಾವನೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಗ್ರಾಮೀಣರು ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಿದೆ. ಅದಕ್ಕಾಗಿ ಪ್ರತಿಯೊಂದು ಕಾರ್ಯಕ್ರಮಗಳನ್ನು ಜನಸ್ನೇಹಿಯಾಗಿ ಮರು ವಿನ್ಯಾಸಗೊಳಿಸುವ ಅಗತ್ಯವಿದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ರೋಗದ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಕೆಲಸ ಆಗಬೇಕು. ತೃತೀಯ ಹಂತದಲ್ಲೇ ಇತರೆ ಚಿಕಿತ್ಸೆಗೆ ಆಗಮಿಸುವವರಿಗೆ ರಕ್ತ ಹಾಗೂ ಇತರೆ ಪರೀಕ್ಷೆಗಳ ಮೂಲಕ ರೋಗ ಪತ್ತೆ ಹಚ್ಚಿ ಅದನ್ನು ದಾಖಲಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಕೆಲ ಕಾರ್ಯಕ್ರಮಗಳ ಮರು ವಿನ್ಯಾಸ ಮಾಡಿಕೊಳ್ಳುವ ಅಗತ್ಯವಿದೆ. ಕೇಂದ್ರವು ಪ್ರಸ್ತಾವನೆಗಳಿಗೆ ಅನುಮತಿ ನೀಡಿದ ಬಳಿಕ ಈ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು. ಮುಂದೆ ಓದಿ...

"ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಅರಿವು ಮೂಡಿಸಿ"
ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಇಲಾಖೆಯ ಮಾಹಿತಿ ವಿಭಾಗವು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಿದೆ. ಅಗತ್ಯ ಸಂಪನ್ಮೂಲ ಹಾಗೂ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದರು.
ಜೀವಸಾರ್ಥಕತೆ ವಿಭಾಗವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅಂಗಾಂಗ ದಾನ ಮತ್ತು ಚಿಕಿತ್ಸೆಯು ಎಲ್ಲ ಬಡವರಿಗೂ ಕೈಗೆಟುಕುವ ರೀತಿ ಜಾರಿಗೊಳ್ಳಬೇಕು. ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ಕಾರ್ಯಕ್ರಮ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬರುವಂತೆ ಜಾಗೃತಿ ಕಾರ್ಯಕ್ರಮ ರೂಪಿಸಬೇಕು ಎಂದರು.

"ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ"
ಕಾರ್ಯಕ್ರಮಗಳ ಹೊಣೆ ಹೊತ್ತಿರುವ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಇಲ್ಲವಾದರೆ ಸರ್ಕಾರ ವೆಚ್ಚ ಮಾಡುವ ಹಣ ಸಾರ್ಥಕ ಉದ್ದೇಶಗಳಿಗೆ ಬಳಕೆ ಆಗುವುದಿಲ್ಲ ಎಂದ ಸಚಿವರು, ಹದಿನೈದನೇ ಹಣಕಾಸು ಆಯೋಗದ ಅನುದಾನದ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಗೊಂದಲಗಳಿವೆ. ಕೆಲ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಿ, ಮತ್ತೆ ಕೆಲ ಕಾರ್ಯಕ್ರಮಗಳಿಗೆ ನೀಡುವಂತೆ ಮಾಡಲಾಗಿದೆ. ಈ ಲೋಪಗಳ ನಿವಾರಣೆಗೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯುವ ಜತೆಗೆ ಖುದ್ದು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.

ಅನುದಾನವನ್ನು ಸರಿಯಾಗಿ ಬಳಕೆ ಮಾಡಲು ಸೂಚನೆ
ಮೂರನೇ ಹಂತದ ಕೋವಿಡ್ ಅಲೆ ನಿರ್ವಹಣೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೀಡಲಾಗುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಬೇಕು. ಹೆಚ್ಚುವರಿ ಲ್ಯಾಬ್, ಅಗತ್ಯ ಪ್ರಮಾಣದ ಔಷಧಗಳ ಖರೀದಿ, ಮಕ್ಕಳ ವಾರ್ಡುಗಳ ನಿರ್ಮಾಣ, ಹೆಚ್ಚುವರಿ ಐಸಿಯುಗಳು, ಆಕ್ಸಿಜನ್ ಘಟಕಗಳ ಸ್ಥಾಪನೆ ಸಹಿತ ಇತರೆ ಮೂಲ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಿಕೊಳ್ಳಬೇಕು. ಕೇಂದ್ರದಿಂದ ಅನುಮೋದನೆ ದೊರೆತ ಬಳಿಕ ರಾಜ್ಯದ ಯೋಜನೆಗಳ ಜತೆಗೆ ಅದನ್ನು ಹೊಂದಾಣಿಕೆ ಮಾಡಿಕೊಂಡು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

"ವೆಚ್ಚ ಮಾಡುವ ಪ್ರತಿ ಪೈಸೆಯೂ ಅರ್ಹ ವ್ಯಕ್ತಿಗೆ ತಲುಪಬೇಕು"
ಬಿಆರ್ ಶೆಟ್ಟಿ ಒಡೆತನದ ಸಂಸ್ಥೆಗೆ ನೀಡಿರುವ ಉಡುಪಿ ಜಿಲ್ಲಾಸ್ಪತ್ರೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟು ನಿವಾರಣೆಗೆ ಸುಧಾಕರ್ ಉನ್ನತ ಮಟ್ಟದ ಸಭೆ ನಡೆಸಿದರು. ಇದಾದ ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
" ರಾಜ್ಯದ ಎಲ್ಲ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನೂ ಖುದ್ದು ಪರಿಶೀಲನೆ ನಡೆಸಿ ಪರಿಣಾಮಕಾರಿ ಜಾರಿಗೆ ಅನುಗುಣವಾಗಿ ಮರು ವಿನ್ಯಾಸಗೊಳಿಸಲಾಗುತ್ತಿದೆ. ವೆಚ್ಚ ಮಾಡುವ ಪ್ರತಿ ಪೈಸೆಯೂ ಅರ್ಹ ವ್ಯಕ್ತಿಗೆ ತಲುಪಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಆರೋಗ್ಯ ಸೇವೆ ಸಿಗುವಂತೆ ಮಾಡುವುದು ನಮ್ಮ ಆಶಯ. ಇದಕ್ಕಾಗಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆʼ ಎಂದರು.ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತ ಡಾ. ತ್ರಿಲೋಕ್ ಚಂದ್ರ, ಎನ್‌ಎಚ್‌ಎಂ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.












Click it and Unblock the Notifications