ಅಧಿಕಾರ ತ್ಯಾಗಕ್ಕೆ ಒಪ್ಪದ ಸಚಿವರು, ಇಕ್ಕಟ್ಟಿನಲ್ಲಿ ಮೈತ್ರಿ ಸರ್ಕಾರ
ಬೆಂಗಳೂರು, ಮೇ 30: ಕೆಲವು ಸಚಿವರಿಗೆ ಕೋಕ್ ನೀಡಿ ಅತೃಪ್ತರಿಗೆ ಅವಕಾಶ ಕೊಟ್ಟು ಸರ್ಕಾರವನ್ನು ಉಳಿಸಿಕೊಳ್ಳುವ ಯೋಜನೆ ಹಾಕಿದ್ದ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗಿದೆ.
ಇಂದು ನಡೆದ ಕಾಂಗ್ರೆಸ್ ಸಚಿವರ ಸಭೆಯಲ್ಲಿ ಕೆಲವು ಸಚಿವರಿಗೆ ತಮ್ಮ ಸ್ಥಾನವನ್ನು ತೆರವುಗೊಳಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್ ಮುಖಂಡರ ಬೇಡಿಕೆಗೆ ಮಂತ್ರಿಗಳು ಒಪ್ಪಿಲ್ಲ ಎನ್ನಲಾಗಿದೆ.
ಮಂತ್ರಿಗಳು ತಮ್ಮ ಸ್ಥಾನವನ್ನು ತ್ಯಜಿಸಿ ಅತೃಪ್ತರಿಗೆ ಅವಕಾಶ ಮಾಡಿಕೊಡಲು ಒಪ್ಪಿಲ್ಲ, ಹಾಗಾಗಿ ಕಾಂಗ್ರೆಸ್ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಮೈತ್ರಿ ಮತ್ತೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಕೆಲವು ಸಚಿವರಿಗೆ ಕೋಕ್ ಕೊಟ್ಟು, ಸರ್ಕಾರವನ್ನು ಉರುಳಿಸಲು ತುದಿಗಾಲಲ್ಲಿ ನಿಂತಿರುವ ಅತೃಪ್ತ ಶಾಸಕರಿಗೆ ಅವಕಾಶ ಮಾಡಿಕೊಟ್ಟು ಅವರನ್ನು ಅಸಮಾಧಾನ ಕಳೆಯುವ ಯೋಜನೆ ರೂಪಿಸಿಕೊಂಡು ಮೂರು ದಿನದಿಂದ ಸರಣಿ ಸಭೆಯಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದರು, ಆದರೆ ಕಾಂಗ್ರೆಸ್ ನಾಯಕರ ಶ್ರಮವೆಲ್ಲಾ ವ್ಯರ್ಥವಾಗಿದ್ದು, ಅಸಮಾಧಾನ ಮುಂದುವರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

'ಸರ್ಕಾರ ರಚನೆ ಆದಾಗಿನಿಂದ ಕೆಲಸ ಮಾಡಲಾಗಿಲ್ಲ'
ಸರ್ಕಾರ ರಚನೆ ಆದಾಗಿನಿಂದಲೂ ಉಪಚುನಾವಣೆ, ಬಜೆಟ್, ಲೋಕಸಭೆ ಚುನಾವಣೆ ಇದರಲ್ಲೇ ಸಯ ಕಳೆದು ಹೋಗಿದೆ. ಸರ್ಕಾರ ರಚನೆ ಆಗಿ ವರ್ಷ ಸಹ ಆಗಿಲ್ಲ, ಈಗಲೇ ಸಚಿವ ಸ್ಥಾನ ಬಿಡು ಎಂದರೆ ಹೇಗೆ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

'ಹಿರಿಯ ಸಚಿವರಿಂದ ರಾಜೀನಾಮೆ ಕೊಡಿಸಿ'
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಈಗಲೂ ಸಚಿವರಾಗಿರುವ ಕೃಷ್ಣಬೈರೇಗೌಡ, ಜಾರ್ಜ್ ಫರ್ನಾಂಡಿಸ್, ಯುಟಿ ಖಾದರ್, ದೇಶಪಾಂಡೆ ಇವರಲ್ಲಿ ಯಾರನ್ನಾದರೂ ಕೆಳಗೆ ಇಳಿಸಿ, ನಾವು ಈ ಬಾರಿ ಸಚಿವರಾಗಿದ್ದೇವೆ ನಮ್ಮ ತಂಟೆಗೆ ಬರಬೇಡಿ ಎಂದು ಸಚಿವರಾದ ವೆಂಕಟರಮಣಪ್ಪ, ತುಕಾರಾಂ, ಪುಟ್ಟರಂಗಶೆಟ್ಟಿ ಹೇಳಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ, ಪುನಾರಚನೆ ಮಾಡಲ್ಲ: ಸಿದ್ದರಾಮಯ್ಯ
ಸಚಿವರೊಂದಿಗಿನ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಚಿವ ಸಂಪುಟ, ವಿಸ್ತರಣೆಯಾಗಲಿ, ಪುನಾರಚನೆಯಾಗಲಿ ಪ್ರಸ್ತುತ ಮಾಡುವುದಿಲ್ಲ , ಮುಂದೆ ಮಾಡುವುದಾದರೆ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ
ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ, ಅವರ ಜೊತೆ ಮಾತುಕತೆ ನಡೆದಿದೆ. ಅವರೊಂದಿಗೆ ನಾನೂ ಮಾತನಾಡುತ್ತೇನೆ, ಇನ್ನು ರೋಶನ್ ಬೇಗ್ ಅವರಿಗೆ ಕೆಪಿಸಿಸಿ ಅಧ್ಯಕ್ಷರು ನೊಟೀಸ್ ಕಳುಹಿಸಿದ್ದಾರೆ, ಅವರೇನು ಉತ್ತರ ಕೊಡುತ್ತಾರೋ ನೋಡೋಣ ಎಂದರು.












Click it and Unblock the Notifications