ಮೇಕೆದಾಟು ಯೋಜನೆ: ದೇವೇಗೌಡರನ್ನು ಅಭಿನಂದಿಸಿದ ಡಿಕೆಶಿ
ಬೆಂಗಳೂರು, ಮಾರ್ಚ್ 25: ಕರ್ನಾಟಕದಲ್ಲಿ ಬರಗಾಲ ಆವರಿಸಿದೆ. ಬೆಂಗಳೂರು ನಗರ ಸೇರಿದಂತೆ ಹಲವು ಕಡೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಕಾವೇರಿ ಕೊಳ್ಳದಲ್ಲಿ ನೀರಿಲ್ಲದೇ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಉಪ ಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 'ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಾವು ಮಾಡಿದ "ನಮ್ಮ ನೀರು, ನಮ್ಮ ಹಕ್ಕು" ಹೋರಾಟಕ್ಕೆ ಮಾಜಿ ಪ್ರಧಾನಿ ಶ್ರೀ ದೇವೇಗೌಡ ಅವರು ಧ್ವನಿಗೂಡಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.
"ಈಗ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನಾದರೂ ಮನಗಂಡು ಕೇಂದ್ರ ಸರಕಾರ ಮೇಕೆದಾಟು ಆಣೆಕಟ್ಟು ಯೋಜನೆಗೆ ಅನುಮತಿ ನೀಡುತ್ತದೆ ಎಂಬ ವಿಶ್ವಾಸ ನನ್ನದು. ಈ ಎಲ್ಲ ಸಮಸ್ಯೆಗಳನ್ನು ನಿರೀಕ್ಷೆ ಮಾಡಿಯೇ ಕಾಂಗ್ರೆಸ್ ಪಕ್ಷವು "ನಮ್ಮ ನೀರು ನಮ್ಮ ಹಕ್ಕು" ಪಾದಯಾತ್ರೆ ಮಾಡಿತ್ತು. ಆ ಮೂಲಕ ನಮ್ಮ ಹಕ್ಕೊತ್ತಾಯವನ್ನು ಕನ್ನಡಿಗರ ಮನೆ-ಮನಗಳಿಗೆ ತಲುಪಿಸಿತ್ತು" ಎಂದು ತಿಳಿಸಿದ್ದಾರೆ.
"ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಬೇಕೆಂಬ ಸಂಕಲ್ಪದಿಂದಲೇ ನಾನು ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಮೇಕೆದಾಟು ಯೋಜನೆಗಾಗಿ ಕಾನೂನು ಹೋರಾಟ ಮುಂದುವರೆದಿದೆ. ನಮಗೆ ಗೆಲುವು ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಈ ಸಂದರ್ಭದಲ್ಲಿ ದೇವೇಗೌಡರು ನಮ್ಮ ಹೋರಾಟಕ್ಕೆ ಧ್ವನಿಗೂಡಿಸಿರುವುದನ್ನು ಸ್ವಾಗತಿಸುತ್ತೇನೆ" ಎಂದು ಡಿ. ಕೆ. ಶಿವಕುಮಾರ್ ಪೋಸ್ಟ್ ಹಾಕಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ನಮ್ಮ ಮೇಲೆ ಮೊಕದ್ದಮೆ ದಾಖಲಿಸಿದವರು ನೀವೇ, ಕಾವೇರಿ ನೀರು ಹಂಚಿಕೆಯಲ್ಲಿ ನಾಡಿಗೆ ಅನ್ಯಾಯ ಆಗುತ್ತಿದ್ದಾಗ ಹಲವು ಬಾರಿ ಮನವಿ ಮಾಡಿದರೂ ಮಧ್ಯಪ್ರವೇಶಿಸದೆ ಕನ್ನಡಿಗರನ್ನು ಸಂಕಷ್ಟಕ್ಕೆ ತಳ್ಳಿದವರು ನಿಮ್ಮದೇ ಪ್ರಧಾನಿಗಳು, ನಿಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ತಮಿಳುನಾಡಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಸುತ್ತಾರೆ, ಮೇಕೆದಾಟು ಯೋಜನೆ ವಿರುದ್ಧ ಉಪವಾಸ ಸತ್ಯಾಗ್ರಹ ಕೂರುತ್ತಾರೆ" ಎಂದು ಪ್ರತಿಪಕ್ಷ ಬಿಜೆಪಿ ವಿರುದ್ಧ ಟೀಕಿಸಿದ್ದರು.
"ಮೇಕೆದಾಟು ಯೋಜನೆಯ ಜಾರಿಗೆ ನಾವು ಎಂ. ಕೆ. ಸ್ಟಾಲಿನ್ ಅವರ ಅನುಮತಿಗಾಗಿ ಕಾದು ಕುಳಿತಿಲ್ಲ, ನಮಗೆ ಅನುಮತಿ ಬೇಕಿರುವುದು ಕೇಂದ್ರ ಸರ್ಕಾರದ್ದು. ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ ನಾಳೆಯಿಂದಲೇ ಅಣೆಕಟ್ಟು ಕೆಲಸ ಆರಂಭ ಮಾಡಲು ನಾವು ತಯಾರಿದ್ದೇವೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವುದನ್ನು ನಿಲ್ಲಿಸಿ" ಎಂದು ಬಿಜೆಪಿಗೆ ಕಿವಿಮಾತು ಹೇಳಿದ್ದರು.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದೆ. ಜೆಡಿಎಸ್ ಪಕ್ಷ ಸಹ ಈಗ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ಯೋಜನೆಯನ್ನು ತಮಿಳುನಾಡು ಸರ್ಕಾರ ವಿರೋಧಿಸುತ್ತಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅಲ್ಲಿರುವ ಡಿಎಂಕೆ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದೆ.
ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಎಚ್. ಡಿ. ದೇವೇಗೌಡ, "ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಯನ್ನು ಬೆಂಬಲಿಸುವ ನಿರ್ಧಾರವನ್ನು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೂರು ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು" ಎಂದು ಆಗ್ರಹಿಸಿದ್ದರು.












Click it and Unblock the Notifications