ನೀರಿಗಾಗಿ ಹೋರಾಟ: ಬಿಜೆಪಿಗೂ ಆಹ್ವಾನಿಸಿದ ಡಿಕೆ ಸುರೇಶ್
ಬೆಂಗಳೂರು, ಜನವರಿ 6: ಮೇಕೆದಾಟು ಆಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಲು ಸಿದ್ಧವಾಗುತ್ತಿದೆ. ಇತ್ತ ಬಿಜೆಪಿ ಕೊರೊನಾ ಹೆಚ್ಚಳದಿಂದಾಗಿ ಕರ್ಫ್ಯೂ ಸೇರಿದಂತೆ ಗುಂಪು ಸೇರದಿರಲು ಸೂಚನೆ ನೀಡಿದೆ. ಕೊರೊನಾ ನಿಯಮ ಮೀರಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು," ಪಾದಯಾತ್ರೆಗೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ. ಎಲ್ಲಾ ಪಕ್ಷದವರಿಗೂ ಸಾರ್ವಜನಿಕರಿಗೂ ಒಂದೇ ಕ್ರಮ ಅನ್ವಯವಾಗುತ್ತದೆ. ರಾಜಕೀಯ ಪಕ್ಷಗಳಿಗೆ ಒಂದು ಜನಸಾಮಾನ್ಯರಿಗೊಂದು ನಿಯಮ ತರಲು ಆಗುವುದಿಲ್ಲ. ಕೊರೊನಾ ನಿಯಮ ಎಲ್ಲರಿಗೂ ಒಂದೇ. ನಿಯಮ ಮೀರಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಜನರ ಬದುಕು ಮುಖ್ಯ. ರಾಜಕಾರಣ ಆಮೇಲೆ ಮಾಡಿಕೊಳ್ಳಲಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಹಿರಿಯ ರಾಜಕಾರಣಿಗಳು. ಅವರು ಈ ಬಗ್ಗೆ ಯೋಚನೆ ಮಾಡಬೇಕು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ರೆ ಕಾನೂನು ಕ್ರಮ ಖಂಡಿತ" ಎಂದು ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
Recommended Video
ಆದರೆ ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಗೃಹ ಸಚಿವರು ಪಾದಯಾತ್ರೆಗೆ ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಕ್ಕೆ ಸಿದ್ದರಾಮಯ್ಯ, ಅವರಿಗೆ ಕ್ರಮ ತೆಗೆದುಕೊಳ್ಳಲು ಬಿಡಿ. (ಲೆಟ್ ದೆಮ್ ಟೇಕ್ ಆಕ್ಷನ್) ನಾವು ಯಾವುದೇ ಅನುಮತಿ ಪಡೆದು ಪಾದಯಾತ್ರೆ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಇನ್ನೂ ಈ ಬಗ್ಗೆ ಮಾತನಾಡಿದ ಡಿಕೆ ಸುರೇಶ್, 'ಮೇಕೆದಾಟು ಯೋಜನೆ ಅನುಷ್ಠಾನವಾಗಬೇಕು ಎಂದು 160 ಕಿ.ಮೀ ಪಾದಯಾತ್ರೆ ಮಾಡಲಾಗುತ್ತದೆ. ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕರ್ಫ್ಯೂ ಜಾರಿ ಮಾಡಿದೆ. ನೀರಿಗಾಗಿ ನಡಿಗೆಗೆ ಬಿಜೆಪಿ ನಾಯಕರಿಗೂ ಆಹ್ವಾನಿಸುತ್ತೇವೆ. ನಾವು ಯಾರ ವಿರುದ್ಧವೂ ಪಾದಯಾತ್ರೆ ಮಾಡುತ್ತಿಲ್ಲ' ಎಂದಿದ್ದಾರೆ.


11 ದಿನಗಳ ಪಾದಯಾತ್ರೆ ಇದಾಗಿದೆ. ಕನಕಪುರ ಸೇರಿದಂತೆ 4 ರಿಂದ 5 ಜಿಲ್ಲೆಗಳ ಕಾರ್ಯಕರ್ತರನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳಲು ನಾಯಕರು ಸಿದ್ಧಗೊಳಿಸಿದ್ದಾರೆ. ನಿತ್ಯ 13 ರಿಂದ 16 ಕಿ.ಮೀ. ದೂರ ಪಾದಯಾತ್ರೆ ನಡೆಯಲಿದೆ. ಪ್ರತಿ 6 ರಿಂದ 8 ಕಿ.ಮೀ. ಅಂತರದಲ್ಲಿ ಊಟ ಮತ್ತು ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕನಿಷ್ಠ 4 ರಿಂದ 5 ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸುವ ಯೋಜನೆ ಮೂಲಕ ಬೃಹತ್ ಹೋರಾಟವಾಗಿ ಬಿಂಬಸಲು ಡಿಕೆ ಶಿವಕುಮಾರ್ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಮೇಕೆದಾಟಿನಿಂದ ಕುಂಬಳಗೋಡುವರೆಗೆ ಸಂಸದ ಡಿಕೆ ಸುರೇಶ್ ಪಾದಯಾತ್ರೆ ನೇತೃತ್ವ ವಹಿಸಿದರೆ ಅಲ್ಲಿಂದ ಡಿ.ಕೆ. ಶಿವಕುಮಾರ್ ಬೆಂಗಳೂರುವರೆಗಿನ ನೇತೃತ್ವ ವಹಿಸಿಕೊಳ್ಳಲಿದ್ದಾರೆ.












Click it and Unblock the Notifications