Medical Seat: ವೈದ್ಯಕೀಯ ಸೀಟುಗಳಲ್ಲೂ ಲೂಟಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಹರಾಜು! ವಿಪಕ್ಷದಿಂದ ತೀವ್ರ ಟೀಕೆ
Medical Seats: ವೈದ್ಯಕೀಯ ಸೀಟುಗಳಲ್ಲೂ ಲೂಟಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಹರಾಜು ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟ್ವೀಟ್ ಮಾಡಿದ್ದಾರೆ. GenZ ಹೆಸರಿನಲ್ಲಿ ಬೊಗಳೆ ಭಾಷಣ ಮಾಡುತ್ತಾ ದೆಹಲಿಯಲ್ಲಿ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರು, ಕರ್ನಾಟಕದಲ್ಲಿ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವನ್ನು ಖಾಸಗಿ ಸಂಸ್ಥೆಗಳ ಪಾಲು ಮಾಡುತ್ತಿದ್ದಾರೆ!
ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಸಂಸ್ಥೆಗಳ ಹೆಸರಿನಲ್ಲಿ ನಡೆಯುತ್ತಿರುವ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ, ಸರ್ಕಾರದ ಕೋಟಾದಡಿ ಸಿಗಬೇಕಾದ ಶೇ.15ರಷ್ಟು ಸೀಟುಗಳಿಗೂ ₹11.88 ಲಕ್ಷದವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ವಿದ್ಯಾರ್ಥಿಗಳಿಂದ ಹೀಗೆ ದುಬಾರಿ ಶುಲ್ಕ ವಸೂಲಿ ನಡೆಯುತ್ತಿದ್ದರೂ ನಿಮ್ಮ ಇಲಾಖೆ ಏಕೆ ಮೌನವಾಗಿದೆ ವೈದ್ಯಕೀಯ ಶಿಕ್ಷಣ ಸಚಿವರೇ, 13 ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿರುವ 3,100 ವೈದ್ಯಕೀಯ ಸೀಟುಗಳಲ್ಲಿ ರಾಜ್ಯ ಕೋಟಾಕ್ಕೆ ಸಿಗುತ್ತಿರುವುದು ಕೇವಲ 189 ಸೀಟುಗಳು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

ಸರ್ಕಾರದಿಂದಲೇ ಮೂಲಸೌಕರ್ಯ, ಅನುಮತಿ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ಪಡೆದು, ವಿದ್ಯಾರ್ಥಿಗಳಿಂದ ₹1 ಕೋಟಿಗೂ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದ್ದರೂ ಸರ್ಕಾರದ ಕಣ್ಣು ಏಕೆ ತೆರೆಯುತ್ತಿಲ್ಲ. ಇದು ಶಿಕ್ಷಣವೇ? ಅಥವಾ ವೈದ್ಯಕೀಯ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿಗಳ ವ್ಯಾಪಾರವೇ, 24 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಿಯಮಾನುಸಾರ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೀಟುಗಳು ಮತ್ತು ಸೌಲಭ್ಯಗಳ ವಿಚಾರದಲ್ಲೂ ನಿಮ್ಮ ಇಲಾಖೆ ಕಣ್ಣುಮುಚ್ಚಿ ಕುಳಿತಿದೆಯೇ, ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರೇ, ನಿಮ್ಮ ಈ ಕಣ್ಣುಮುಚ್ಚಾಲೆ ಆಟ ಯಾರ ಹಿತಕ್ಕಾಗಿ ಎಂದು ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾದ ಸರ್ಕಾರವೇ ಖಾಸಗಿ ವೈದ್ಯಕೀಯ ಕಾಲೇಜುಗಳ ಹಿತ ಕಾಯುತ್ತಿದ್ದರೆ, ಇದಕ್ಕಿಂತ ದೊಡ್ಡ ದ್ರೋಹ ವಿದ್ಯಾರ್ಥಿಗಳಿಗೆ ಮತ್ತೊಂದಿದೆಯೇ. ₹1 ಕೋಟಿ ಕೊಟ್ಟು ವೈದ್ಯರಾಗುವ ಅವಕಾಶ ಎಲ್ಲರಿಗೂ ಇರುವುದಿಲ್ಲ. ಆದರೆ ಪ್ರತಿಭೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯಯುತ ಅವಕಾಶ ಸಿಗಬೇಕು.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ತಕ್ಷಣ ಮಧ್ಯಪ್ರವೇಶಿಸಿ
ರಾಜ್ಯ ಕೋಟಾದ ಸೀಟುಗಳ ಸಂಪೂರ್ಣ ವಿವರ ಬಹಿರಂಗಪಡಿಸಿ!
ವಸೂಲಿ ಮಾಡುತ್ತಿರುವ ಶುಲ್ಕದ ಬಗ್ಗೆ ಶ್ವೇತಪತ್ರ ಹೊರಡಿಸಿ!
ನಿಯಮ ಉಲ್ಲಂಘಿಸುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ!
ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ!
ಇಲ್ಲವಾದರೆ, ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ಶಿಕ್ಷಣ ಲೂಟಿಯ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದಿದ್ದಾರೆ.
ಬೆಲೆ ಏರಿಕೆಯ ಗ್ಯಾರಂಟಿ ಕಾಯಂ!
ದಿನಕ್ಕೊಂದು ತೆರಿಗೆ, ದಿನಕ್ಕೊಂದು ಬೆಲೆ ಏರಿಕೆ! ಜನಸಾಮಾನ್ಯರ ಜೇಬಿಗೆ ನಿರಂತರ ಕನ್ನ ಹಾಕುವುದೊಂದೇ ಈ ಕಾಂಗ್ರೆಸ್ ಸರ್ಕಾರದ ಖಾಯಂ 'ಗ್ಯಾರಂಟಿ' ಎನ್ನುವಂತೆ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ. ಉಚಿತಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ನಿತ್ಯವೂ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಚಾಟಿ ಬೀಸುತ್ತಿದೆ. ಈಗ ವಾಹನಗಳ ಹೊಗೆ ತಪಾಸಣೆ (PUC) ಶುಲ್ಕವನ್ನೂ ಹೆಚ್ಚಿಸಿ ಬಡ ಹಾಗೂ ಮಧ್ಯಮ ವರ್ಗದವರ ಬದುಕಿನ ಮೇಲೆ ಮತ್ತೆ ದಾಳಿ ಮಾಡಿದೆ ಎಂದಿದ್ದಾರೆ.
* ದ್ವಿಚಕ್ರ ವಾಹನ: ₹65 ರಿಂದ ₹80
* ತ್ರಿಚಕ್ರ ವಾಹನ: ₹75 ರಿಂದ ₹80
* ನಾಲ್ಕು ಚಕ್ರದ ವಾಹನ: ₹115 ರಿಂದ ₹150
* ಡೀಸೆಲ್ ವಾಹನ: ₹160 ರಿಂದ ₹200
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಮತ್ತು ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ, ಜನರನ್ನು ಕೊಳ್ಳೆ ಹೊಡೆಯುವುದನ್ನೇ 'ಆಡಳಿತ' ಎಂದುಕೊಂಡಿದ್ದೀರಾ?
ಒಂದು ಕೈಯಲ್ಲಿ ಉಚಿತ ಎಂದೂ, ಇನ್ನೊಂದು ಕೈಯಲ್ಲಿ ಲೂಟಿ ಎಂದೂ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಲು ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ ?
ಕರೆಂಟ್ ಬಿಲ್ ಏರಿಕೆ, ಹಾಲಿನ ದರ ಏರಿಕೆ, ಬಸ್ ದರ ಏರಿಕೆ, ಮೆಟ್ರೋ ದರ ಏರಿಕೆ ನೋಂದಣಿ ಶುಲ್ಕ ಏರಿಕೆ, ಆಸ್ತಿ ತೆರಿಗೆ ಏರಿಕೆ ಈಗ ಕೊನೆಗೆ ವಾಹನದ ಹೊಗೆ ಪರೀಕ್ಷೆಗೂ ದರ ಏರಿಕೆ! ಕಾಂಗ್ರೆಸ್ ಎಂದರೆ 'ಬೆಲೆ ಏರಿಕೆ', ಕಾಂಗ್ರೆಸ್ ಎಂದರೆ 'ಜನವಿರೋಧಿ'! ಜನ ನಿಮ್ಮ ಈ ಲೂಟಿ ಆಡಳಿತವನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ. ಶೀಘ್ರದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications
