ಟಾಟಾ ಕಂಪನಿಯ ಕೆಲಸ ಬಿಟ್ಟು ಹಳ್ಳಿಗೆ ಬಂದ MBA ಪದವೀಧರ: ಈಗ ತುಳಸಿ ಬೆಳೆದು ತಿಂಗಳಿಗೆ 6 ಲಕ್ಷ ರೂ. ಸಂಪಾದನೆ
ಕೃಷಿ ಕೇವಲ ಸಾಂಪ್ರದಾಯಿಕ ವೃತ್ತಿಯಲ್ಲ, ಒಳ್ಳೆಯ ಮಾರುಕಟ್ಟೆ ಜ್ಞಾನವಿದ್ದರೆ ಅದೊಂದು ಅತ್ಯಂತ ಲಾಭದಾಯಕ ಉದ್ಯಮ ಎಂಬುದನ್ನು ಒಡಿಶಾದ ಕಿಯೋಂಜಾರ್ ಜಿಲ್ಲೆಯ ರಬನಾ ಪಲಾಶ್‌ಪಾಲ್ ಗ್ರಾಮದ ಅಲೋಕ್ ಪಟ್ನಾಯಕ್ ಸಾಬೀತುಪಡಿಸಿದ್ದಾರೆ.
16 ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಉನ್ನತ ಹುದ್ದೆಯಲ್ಲಿದ್ದ ಅವರು, ತಮ್ಮ ಆಕರ್ಷಕ ಉದ್ಯೋಗವನ್ನ ಬಿಟ್ಟು ಇದೀಗ ಕೃಷಿಯತ್ತ ಮುಖ ಮಾಡಿದ್ದಾರೆ. ನಮ್ಮೆಲ್ಲರ ಮನೆ ಅಂಗಳದಲ್ಲೇಲ್ಲ ಬೆಳೆಯುವ ತುಳಸಿ ಗಿಡಗಳನ್ನೇ ತಮ್ಮ ಬದುಕಿನ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡಿರುವ ಅಲೋಕ್, ಇದೀಗ ತುಳಸಿ ಕೃಷಿ ಮಾಡುವ ಮೂಲಕ ತಿಂಗಳಿಗೆ ಬರೋಬ್ಬರಿ 6 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅವರ ಈ ಸ್ಫೂರ್ತಿದಾಯಕ ಯಶೋಗಾಥೆ ಕೃಷಿಗೆ ಬರಲು ಹಿಂದೇಟು ಹಾಕುವ ಯುವಜನತೆಗೆ ಒಂದೊಳ್ಳೇ ಉದಾಹರಣೆ.

ಎಂಬಿಎ ಪದವೀಧರನ ಕೃಷಿ ಒಲವು
ಅಲೋಕ್ ಪಟ್ನಾಯಕ್ ಅವರು 2002ರಲ್ಲಿ ಸಂಬಲ್‌ಪುರ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಎಂಬಿಎ ಪದವಿ ಪೂರೈಸಿದ್ದರು. 2003ರಲ್ಲಿ ಬಜಾಜ್ ಆಟೋ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, 2009ರಲ್ಲಿ ಪ್ರತಿಷ್ಠಿತ ಟಾಟಾ ಆಟೋಮೋಟಿವ್ ಸೇರಿದ್ದರು. ಕಾರ್ಪೊರೇಟ್ ಕ್ಷೇತ್ರದಲ್ಲಿ ಸುಮಾರು 16 ವರ್ಷಗಳ ಕಾಲ ಯಶಸ್ವಿ ಸೇವೆ ಸಲ್ಲಿಸಿ, ಕೈತುಂಬಾ ಸಂಬಳ ಪಡೆಯುತ್ತಿದ್ದರೂ, ತಮ್ಮ ಹುಟ್ಟೂರಿನ ಮಣ್ಣಿನಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕು, ಬುಡಕಟ್ಟು ಜನರಿಗೆ ಉದ್ಯೋಗ ನೀಡಬೇಕು ಎಂಬ ತುಡಿತ ಅವರಲ್ಲಿತ್ತು.
ಇದೇ ಕಾರಣಕ್ಕೆ 2018ರಲ್ಲಿ ತಮ್ಮ ಮಾರ್ಕೆಟಿಂಗ್ ಕೆಲಸಕ್ಕೆ ರಿಸೈನ್ ಮಾಡಿ, ಕೃಷಿ ಮಾಡುವ ದೃಷ್ಟಿಯಿಂದ ಸ್ವಗ್ರಾಮಕ್ಕೆ ಮರಳಿದರು.
ಎಲೆಗಳಿಗಿಂತ ತುಳಸಿ ಎಣ್ಣೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ
ಅಲೋಕ್ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ತುಳಸಿ ಬೆಳೆಯುವುದನ್ನೇ ತಮ್ಮ ಗುರಿಯಾಗಿಸಿಕೊಳ್ಳಲಿಲ್ಲ. ಮಾರುಕಟ್ಟೆಯಲ್ಲಿ ಕೇವಲ ತುಳಸಿ ಎಲೆಗಳಿಗೆ ಹೆಚ್ಚಿನ ಬೆಲೆಯಿಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಅವರು, ಅದರ ಮೌಲ್ಯವರ್ಧನೆಗೆ ಮುಂದಾದರು. ತುಳಸಿ ಎಲೆಗಳಿಗಿಂತ ಅದರಿಂದ ತೆಗೆಯುವ ಎಣ್ಣೆಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿದೆ.
ದೊಡ್ಡ ದೊಡ್ಡ ಔಷಧೀಯ ವಸ್ತುಗಳ ಉತ್ಪಾದಕರು ಮತ್ತು ಸೌಂದರ್ಯವರ್ಧಕ ಕಂಪನಿಗಳು ಈ ತುಳಸಿ ಎಣ್ಣೆಯನ್ನ ಅತ್ಯಂತ ದುಬಾರಿ ಬೆಲೆ ಕೊಟ್ಟು ಖರೀದಿಸುತ್ತವೆ. ಈ ಮಾರುಕಟ್ಟೆ ತಂತ್ರವನ್ನು ಅರ್ಥಮಾಡಿಕೊಂಡ ಅಲೋಕ್, ತಮ್ಮ ಜಮೀನಿನಲ್ಲಿ ಸಾವಯವ ತುಳಸಿ ಬೆಳೆದು, ಪ್ರತ್ಯೇಕ ಘಟಕದ ಮೂಲಕ ಅದರಿಂದ ಪ್ರತಿದಿನ 7 ರಿಂದ 8 ಲೀಟರ್ ಎಣ್ಣೆಯನ್ನು ಹೊರತೆಗೆಯುತ್ತಿದ್ದಾರೆ.
ಇದನ್ನು ಸ್ಥಳೀಯ ಕೃಷಿ ಮಂಡಿಗಳಿಗೆ ತೆಗೆದುಕೊಂಡು ಹೋಗುವ ಬದಲು, ನೇರವಾಗಿ ಬೃಹತ್ ಕೈಗಾರಿಕಾ ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರ ಉದ್ಯಮದ ವಹಿವಾಟು ದಿನಕ್ಕೆ ಸರಿಸುಮಾರು 21,000 ರೂಪಾಯಿಗಳಷ್ಟಿದ್ದು, ತಿಂಗಳಿಗೆ 6 ಲಕ್ಷ ರೂಪಾಯಿ ಗಡಿ ದಾಟುತ್ತದೆ.
ತ್ಯಾಜ್ಯದಿಂದ ಪವಿತ್ರ ತುಳಸಿ ಮಣಿ: ಒಂದೇ ಬೆಳೆ, ದುಪ್ಪಟ್ಟು ಆದಾಯ
ಸಾಮಾನ್ಯವಾಗಿ ಎಣ್ಣೆ ತೆಗೆದ ನಂತರ ಉಳಿಯುವ ತುಳಸಿ ಚರಟ ಅಥವಾ ತ್ಯಾಜ್ಯವನ್ನ ಬಹುತೇಕರು ಸುಡುತ್ತಾರೆ ಅಥವಾ ಬಿಸಾಡುತ್ತಾರೆ. ಆದರೆ, ಕಾರ್ಪೊರೇಟ್ ಜಗತ್ತಿನಲ್ಲಿ ಪಳಗಿರುವ ಎಂಬಿಎ ಪದವೀಧರ ಅಲೋಕ್ ತಮ್ಮ ಬ್ಯುಸಿನೆಸ್ ಬುದ್ಧಿಯನ್ನ ಇಲ್ಲಿಯೂ ಸರಿಯಾಗಿ ಬಳಸಿಕೊಂಡಿದ್ದಾರೆ.
ಐಐಟಿ ದೆಹಲಿ ವಿನ್ಯಾಸಗೊಳಿಸಿದ ಸಣ್ಣ ಯಂತ್ರವೊಂದನ್ನ ಖರೀದಿಸಿರುವ ಅವರು, ಆ ತ್ಯಾಜ್ಯದಿಂದ ಪವಿತ್ರವಾದ ತುಳಸಿ ಮಣಿಗಳನ್ನ ತಯಾರಿಸುತ್ತಿದ್ದಾರೆ. ಈ ಮಣಿಗಳಿಗೆ ದೇವಸ್ಥಾನಗಳು, ಇಸ್ಕಾನ್ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಂದ ಭಾರಿ ಬೇಡಿಕೆಯಿದೆ. ಒಂದೇ ಬೆಳೆಯಿಂದ, ಎಣ್ಣೆಯ ಮೂಲಕ ಬೃಹತ್ ಕಂಪನಿಗಳಿಗೆ, ಮತ್ತು ಮಣಿಗಳ ಮೂಲಕ ಆಧ್ಯಾತ್ಮಿಕ ಗ್ರಾಹಕರಿಗೆ ಉತ್ಪನ್ನಗಳನ್ನ ತಲುಪಿಸುವ ಮೂಲಕ ಎರಡು ವಿಭಿನ್ನ ಆದಾಯದ ಮೂಲಗಳನ್ನ ಸೃಷ್ಟಿಸಿದ್ದಾರೆ.
ಸ್ಥಳೀಯ ಬುಡಕಟ್ಟು ಜನರಿಗೆ ಉದ್ಯೋಗದ ಆಸರೆ
ತಮ್ಮ ಜಮೀನಿನಲ್ಲಿ ಈ ವಿಭಿನ್ನ ಕೃಷಿ ಉದ್ಯಮವನ್ನು ಆರಂಭಿಸಿದ ಅಲೋಕ್, ಹಂತಹಂತವಾಗಿ ಕೃಷಿಯನ್ನ ವಿಸ್ತರಿಸುವ ಬೃಹತ್ ಗುರಿ ಹೊಂದಿದ್ದಾರೆ. ಇದರಲ್ಲಿ ವಿಶೇಷವೆಂದರೆ, ತಮ್ಮ ಗ್ರಾಮದ ಸುತ್ತಮುತ್ತಲಿನ ಬುಡಕಟ್ಟು ಸಮುದಾಯದ ಜನರಿಗೆ ಅವರು ತಮ್ಮ ತೋಟದಲ್ಲಿ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಆಸರೆಯಾಗಿದ್ದಾರೆ.
ಯಾವುದೇ ಬೆಳೆ ಬೆಳೆಯುವ ಮುನ್ನ 'ಇಲ್ಲಿ ಏನು ಬೆಳೆಯುತ್ತದೆ?' ಎಂದು ಕೇಳುವುದಕ್ಕಿಂತ, 'ಯಾರು, ಯಾವ ರೂಪದಲ್ಲಿ ಇದನ್ನು ಖರೀದಿಸುತ್ತಾರೆ?' ಎಂದು ಪ್ರಶ್ನಿಸಿಕೊಳ್ಳಬೇಕು ಎಂಬ ಅಲೋಕ್ ಅವರ ವ್ಯವಹಾರಿಕ ಕೃಷಿ ತತ್ವ, ಇಂದು ಸಾವಿರಾರು ಯುವ ರೈತರಿಗೆ ದಾರಿದೀಪವಾಗಿದೆ.


Click it and Unblock the Notifications
