New Trains: ಬೈಪಾಸ್ ಮಾರ್ಗವಾಗಿ ವಿಜಯಪುರ ರೈಲು ಸಂಚಾರಕ್ಕೆ ಅಸ್ತು, ಹೊಸ & ವಂದೇ ಭಾರತ್ ರೈಲಿಗೆ ಬೇಡಿಕೆ
ಬೆಂಗಳೂರು, ಡಿಸೆಂಬರ್ 03: ಬೆಂಗಳೂರು ಮತ್ತು ದೂರದ ವಿಜಯಪುರ ನಡುವೆ ಹುಬ್ಬಳ್ಳಿ ಹಾಗೂ ಗದಗ ಬೈಪಾಸ್ ಮಾರ್ಗಗಳಲ್ಲಿ ರೈಲು ಓಡಿಸಲು ಯಾವುದೇ ತೊಂದರೆ ಇಲ್ಲ. ಆದರೆ ಈಗ ಚಾಲ್ತಿಯಲ್ಲಿರುವ ರೈಲುಗಳ ಮಾರ್ಗವನ್ನು ಬದಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ರೈಲ್ವೇ ಮಂಡಳಿಯಿಂದ ಹೊಸ ರೈಲುಗಳನ್ನು ಮಂಜೂರು ಮಾಡಿಸಿಕೊಳ್ಳಬೇಕು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಹೇಳಿದ್ದಾರೆ.
ರೈಲ್ವೆ ಅಧಿಕಾರಿಗಳ ಮಾಹಿತಿ ನೀಡಿದ ಬೆನ್ನಲ್ಲೆ, ಕರ್ನಾಟಕ ಸರ್ಕಾರ ವತಿಯಿಂದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ತಕ್ಷಣವೇ ಪತ್ರ ಬರೆಯಲಾಗುವುದು ಎಂದು ಸಚಿವರು ತಿಳಿಸಿದರು. ಇದಕ್ಕು ಮುನ್ನ ಬುಧವಾರ ಬೆಂಗಳೂರಿನ ಖನಿಜ ಭವನದಲ್ಲಿ ರಾಜ್ಯದ ವಿವಿಧ ವೆಚ್ಚ ಹಂಚಿಕೆ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈಲ್ವೆ ಉನ್ನತಾಧಿಕಾರಿಗಳ ಜೊತೆಗೆ ರೈಲ್ವೆ ದ್ವಿಪಥ ಯೋಜನೆ, ಜೋಡಿ ಹಳಿ, ಹೊಸ ರೈಲುಗಳ ಸೇವೆ ಬಗ್ಗೆ ಚರ್ಚಿಸಿದರು.

ವಿಜಯಪುರ-ಬೆಂಗಳೂರು ನಡುವೆ ಈಗ ರೈಲು ಪ್ರಯಾಣಕ್ಕೆ 15 ಗಂಟೆ ಹಿಡಿಯುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸಲು ಪ್ರಯತ್ನಗಳು ನಡೆಯುತ್ತಿದೆ. ಈ ಸಂಬಂಧ ಪರಿಹಾರ ಕ್ರಮಕ್ಕಾಗಿ ಹಲವು ಸಭೆಗಳಲ್ಲಿ ಚರ್ಚಿಸಿದ್ದೇವೆ. ಸದ್ಯ ರೈಲ್ವೇ ಅಧಿಕಾರಿಗಳು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸಲು ಅಭ್ಯಂತರವಿಲ್ಲ ಎಂದಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ನಿಯಮಿತ ನಿಲುಗಡೆಗಳನ್ನು ಮಾತ್ರ ಕೊಟ್ಟು, ಅಲ್ಲಿಂದ ಮುಂದಕ್ಕೆ ವಿಜಯಪುರದವರೆಗೆ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ಸೇವೆ ಆರಂಭಿಸಬೇಕು. ಹೀಗಾದರೆ ಹೆಚ್ಚು ಪರಿಣಾಮಕಾರಿ ಸೇವೆ ಈ ಭಾಗಕ್ಕೆ ಸಿಕ್ಕಂತಾಗುತ್ತದೆ ಎಂಬುದನ್ನು ರೈಲ್ವೆ ಅಧಿಕಾರಿಗಳಿಗೆ ಗಮನಕ್ಕೆ ಸಚಿವರು ತಂದರು. ಅಧಿಕಾರಿಗಳು ಸಹಮತಿಸಿದರು.
ಬೈಪಾಸ್ ಮೂಲಕ ಬೆಂಗಳೂರು- ವಿಜಯಪುರ ರೈಲು ಸಂಚಾರ
ಪ್ರಸ್ತುತ ಬೆಂಗಳೂರು- ವಿಜಯಪುರ ರೈಲು ಹುಬ್ಬಳ್ಳಿ ಮತ್ತು ಗದಗ ರೈಲು ನಿಲ್ದಾಣಗಳಲ್ಲಿ ಎಂಜಿನ್ ಬದಲಿಸಿಕೊಂಡು ಚಲಿಸಬೇಕಾಗಿದೆ. ಇದರಿಂದ ಪ್ರಯಾಣ ಅವಧಿ ಜಾಸ್ತಿ ಆಗುತ್ತಿದೆ. ಹೀಗಾಗಿ ಈ ಎರಡೂ ಬೈಪಾಸ್ ಗಳ ಮೂಲಕ ರೈಲು ಓಡಿಸುವಂತಾದರೆ ಪ್ರಯಾಣ ಅವಧಿ ಕಡಿಮೆ ಆಗಲಿದೆ ಎಂದು ಸಚಿವರು ವಿವರಿಸಿದರು.
2026ಕ್ಕೆ ಹಳಿ ಕಾಮಗಾರಿ ಬಾಕಿ ಪೂರ್ಣ
ಸದ್ಯಕ್ಕೆ ಈ ಮಾರ್ಗದ ವಂಡಾಲ ಮತ್ತು ಆಲಮಟ್ಟಿ ನಡುವೆ ಜೋಡಿ ಹಳಿ ಕಾಮಗಾರಿ ಮಾತ್ರ ಬಾಕಿ ಇದೆ. ಇದು 2026ರ ಫೆಬ್ರವರಿಯಲ್ಲಿ ಮುಗಿಯಲಿದೆ. ಈ ಭಾಗದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಅರ್ಧ ಕಿ.ಮೀ. ಉದ್ದದ ಬೃಹತ್ ಉಕ್ಕು ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಾರ್ಚ್ ವೇಳೆಗೆ ವಿದ್ಯುದ್ದೀಕರಣದ ಜೋಡಿ ಮಾರ್ಗದ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಆ ಬಳಿಕ ಹಾಲಿ ರೈಲುಗಳ ವೇಗ ಕೂಡ ಹೆಚ್ಚಾಗಲಿದೆ. ಜೊತೆಗೆ ಹೊಸ ರೈಲುಗಳಿಗೂ ಬೇಡಿಕೆ ಸಲ್ಲಿಸಲಾಗುವುದು.
ವಿಜಯಪುರಕ್ಕೆ ವಂದೇ ಭಾರತ್ ರೈಲಿಗೆ ಆಗ್ರಹ
ಬೆಂಗಳೂರು-ವಿಜಯಪುರ ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕೆಂದೂ ನಾವು ಆಗ್ರಹಿಸುತ್ತಿದ್ದೇವೆ. ಆದರೆ ಅದು ಕಾರ್ಯಸಾಧುವಲ್ಲ, ಬದಲಿಗೆ ವಂದೇ ಭಾರತ್ ಸ್ಪೀಪರ್ ಕೋಚ್ ಸೇವೆ ಆರಂಭಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆ ಪ್ರಕಾರ ಇಬ್ಬರೂ ರೈಲ್ವೆ ಸಚಿವರಿಗೆ ಪತ್ರ ಬರೆಯಲಾಗುವುದು. ಸೋಮಣ್ಣ ಅವರ ಜತೆಗೂ ಸಭೆ ಮಾಡಿ ಮನವಿ ಕೂಡ ಮಾಡಲಾಗುವುದು ಎಂದು ಅವರು ವಿವರಿಸಿದರು.












Click it and Unblock the Notifications