US: 'ಅಕ್ಕ' ಕನ್ನಡ ಸದಸ್ಯರಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಸಚಿವರ ಕರೆ
ವಾಷಿಂಗ್ಟನ್, ಅಕ್ಟೋಬರ್ 01: ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ಉದ್ಯಮಿಗಳು ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡಿ, ಕೈಗಾರಿಕೆಗಳ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಬೇಕೆಂದು ಕರ್ನಾಟಕ ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕರೆ ನೀಡಿದರು.
ಅಮೆರಿಕದಲ್ಲಿರುವ ಕನ್ನಡಿಗರ ಪ್ರಮುಖ ಸಂಘಟನೆಗಳಲ್ಲಿ ಒಂದಾಗಿರುವ 'ನಾವಿಕ' (ನಾವು ವಿಶ್ವ ಕನ್ನಡಿಗರು) ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕದ ಸಾವಿರಾರು ಪ್ರತಿಭಾವಂತ ಎಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳು ಅಮೆರಿಕಕ್ಕೆ ಬಂದು ನೆಲೆಸಿ, ಇಲ್ಲಿನ ಆರ್ಥಿಕ ಬೆಳವಣಿಗೆಗೆ ಮೌಲಿಕ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೆ, ಕನ್ನಡಿಗರು ತಮ್ಮ ಪರಂಪರೆಗೆ ಅನುಗುಣವಾಗಿ ಅಮೆರಿಕದ ಸಂಸ್ಕೃತಿ-ಸಮಾಜಗಳಲ್ಲಿ ಒಂದಾಗಿದ್ದು, ಅಮೆರಿಕ ಮತ್ತು ಭಾರತದ ನಡುವಿನ ಸೇತುವೆಗಳಂತೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಅವರು ಬಣ್ಣಿಸಿದರು.
'ನಾವಿಕ' ಸಂಘಟನೆಯ ಮೂಲಕ ಇಲ್ಲಿನ ಕನ್ನಡಿಗರು ನಮಗೆ ನೀಡಿರುವ ಸ್ವಾಗತವನ್ನು ಕಂಡು ಹೃದಯ ತುಂಬಿ ಬಂದಿದೆ. ಇಲ್ಲಿರುವ ಕನ್ನಡಿಗರು ಕರ್ನಾಟಕದ ಉದ್ಯಮಲೋಕದಲ್ಲಿ ಬಂಡವಾಳ ಹೂಡಿಕೆ, ಸಹಭಾಗಿತ್ವ, ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಇರುವ ಉಜ್ವಲ ಅವಕಾಶಗಳನ್ನು ಬಳಸಿಕೊಳ್ಳಬೇಕು. ಈ ಮೂಲಕ ರಾಜ್ಯದ ಯಶೋಗಾಥೆಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಮೆರಿಕಾ ಕನ್ನಡಿಗರಿಗೆ ಸಚಿವರ ಸಲಹೆಗಳು
ಕೈಗಾರಿಕೆಗಳ ಬೆಳವಣಿಗೆ, ಉದ್ಯೋಗಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿ ನಮ್ಮ ಮುಂದಿರುವ ಹೆಗ್ಗುರಿಗಳಾಗಿವೆ. ಆದ್ದರಿಂದ ಇದಕ್ಕೆ ಪೂರಕವಾದ ವಿಷನ್ ಗ್ರೂಪುಗಳ ರಚನೆ ಮತ್ತು ನೀತಿಗಳನ್ನು ರೂಪಿಸಲಾಗುತ್ತಿದೆ. ಜೊತೆಗೆ ಇಡೀ ಭಾರತದ ಬೇರಾವ ರಾಜ್ಯದಲ್ಲೂ ಇಲ್ಲದಂತಹ ಕಾರ್ಯ ಪರಿಸರವನ್ನು ಕರ್ನಾಟಕ ಹೊಂದಿದೆ. ಕೌಶಲಪೂರ್ಣ ಮಾನವ ಸಂಪನ್ಮೂಲ ಕೂಡ ನಮ್ಮಲ್ಲಿ ಸಮೃದ್ಧವಾಗಿದೆ. ಅಮೆರಿಕದಲ್ಲಿರುವ ಸಾಹಸಶೀಲ ಕನ್ನಡಿಗರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಆಶ್ವಾಸನೆ ನೀಡಿದರು.

ಕಾರ್ಯಕ್ರಮದಲ್ಲಿ ಫ್ರಿಸ್ಕೋ ನಗರದ ಉಪಮೇಯರ್ ಏಂಜೆಲಾ ಪಲ್ಹ್ಯಾಂ, ಸಿಟಿ ಕೌನ್ಸಿಲ್ ಸದಸ್ಯ ಟೋನಿ ಸಿಂಗ್, 'ನಾವಿಕ'ದ ಅಧ್ಯಕ್ಷ ಮಂಜುರಾವ್, ಪದಾಧಿಕಾರಿಗಳಾದ ಗೌರೀಶಂಕರ್, ಫ್ರಿಸ್ಕೋ ಸ್ಕೂಲ್ ಡಿಸ್ಟ್ರಿಕ್ಟ್ ಟ್ರಸ್ಟಿ ಆ್ಯನ್ ಆ್ಯಂಡರ್ಸನ್, ಗೋಪಾಲ್ ಮುಂತಾದವರು ಉಪಸ್ಥಿತರಿದ್ದರು. ಜತೆಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಇದ್ದರು.
ರಾಜ್ಯದಲ್ಲಿ ವಹಿವಾಟು ಹೆಚ್ಚಳಕ್ಕೆ US ಒಲವು
60 ಉದ್ಯಮಿಗಳ ಜೊತೆಗ ಸಭೆ ನಡೆಸಿದ ಸಚಿವ ಎಂಬಿ ಪಾಟೀಲ ಅವರು, 'ಅಕ್ಕ' (ಅಮೆರಿಕ ಕನ್ನಡ ಕೂಟಗಳ ಆಗರ) ಸಂಘಟನೆ ಮತ್ತು ಯುಎಸ್- ಇಂಡಿಯಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಉದ್ಯಮಿಗಳ ದುಂಡು ಮೇಜಿನ ಸಭೆ ನಡೆಯಿತು.
60ಕ್ಕೂ ಹೆಚ್ಚು ಉದ್ಯಮಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿನವರು ಕರ್ನಾಟಕದಲ್ಲಿ ತಮ್ಮ ವಹಿವಾಟು ಮತ್ತು ನೆಲೆಯನ್ನು ವಿಸ್ತರಿಸಿಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಲ್ಲಿನ ಸಂಸ್ಥೆಗಳ ಮತ್ತು ಉದ್ಯಮಿಗಳು ಅವರ ಕರ್ನಾಟಕದಲ್ಲಿ ಸಂಸ್ಥೆಗಳ ವಹೀವಾಟು ಹೆಚ್ಚಳಕ್ಕೆ ನಿರ್ಧರಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.












Click it and Unblock the Notifications