Industry Subsidy: ಕುಮಾರಸ್ವಾಮಿಯ ಕೈಗಾರಿಕೆ ಸಬ್ಸಡಿ ಸವಾಲು ಸ್ವೀಕರಿಸಿದ ಎಂಬಿ ಪಾಟೀಲ್
ಬೆಂಗಳೂರು, ಜೂನ್ 19: ಕೈಗಾರಿಕೆ ಸಹಾಯಧನ ವಿಚಾರದಲ್ಲಿ ರಾಜ್ಯ ಕೈಗಾರಿಕೆ ಎಂಬಿ ಪಾಟೀಲ್ ಹಾಗೂ ಕೇಂದ್ರ ಭಾರೀ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಮುಖಾ ಮುಖಿ ಆಗಿದ್ದಾರೆ. ಶೀಘ್ರವೇ ಉಭಯ ನಾಯಕರು ಭೇಟಿಯಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲೇ ಕೈಗಾರಿಕೆ ಸಮಾನ ನೀತಿ ವಿಚಾರ ಮುನ್ನೆಲೆಗೆ ಬಂದಿದೆ.
ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಗುಜರಾತ್ ರಾಜ್ಯಕ್ಕೆ ಕೊಟ್ಟಿರುವ ಹಾಗೆ ಶೇಕಡಾ 50ರಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುವುದಾದರೆ, ಕರ್ನಾಟಕ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಶೇ 20ರಷ್ಟು ಸಬ್ಸಿಡಿ ಕೊಡಲು ಸಿದ್ಧ ಇದೆ ಎಂದು ಬುಧವಾರ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಗುಜರಾತ್‌ನಲ್ಲಿ ಕೇಂದ್ರ ಶೇ.50, ರಾಜ್ಯ ಶೇ.20 ಸಬ್ಸಿಡಿ
ಗುಜರಾತಿನಲ್ಲಿ ನೆಲೆಯೂರಲಿರುವ ಅಮೆರಿಕಾದ ಮೈಕ್ರಾನ್ ಕಂಪನಿಗೆ ಕೇಂದ್ರ ಸರ್ಕಾರ ಶೇಕಡಾ 50ರಷ್ಟು ಸಬ್ಸಿಡಿ ಕೊಟ್ಟಿದೆ. ಇದರ ಜತೆಗೆ ಗುಜರಾತ್ ರಾಜ್ಯ ಸರ್ಕಾರ ಶೇಕಡಾ 20ರಷ್ಟು ಸಬ್ಸಿಡಿ ಕೊಟ್ಟಿದೆ. ಈ ರೀತಿ ಕರ್ನಾಟಕ ಸರ್ಕಾರ ಸಬ್ಸಿಡಿ ಕೊಡಲು ಸಿದ್ಧ ಇದಿಯಾ ಎಂದು ಕೇಂದ್ರ ಭಾರೀ ಕೈಗಾರಿಕೆ ಕುಮಾರಸ್ವಾಮಿ ಮಂಗಳವಾರ ಇಲ್ಲಿ ಕೇಳಿದ್ದರು.
ಕರ್ನಾಟಕಕ್ಕೂ ಕೇಂದ್ರ ಶೇ.50 ಸಬ್ಸಿಡಿ ಕೊಡಲಿ
ಕೇಂದ್ರ ಸಚಿವ ಕುಮಾರಸ್ವಾಮಿಯವರ ಪ್ರಶ್ನೆಗೆ ಸಾಮಾಜಿಕ ಜಾಲತಾಣದಲ್ಲಿ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. 'ಗುಜರಾತಿಗೆ ಕೊಟ್ಟ ಹಾಗೆ ಮೊದಲು ಸಬ್ಸಿಡಿ ಕೊಡಿ. ನಂತರ ರಾಜ್ಯದ ಪಾಲಿನ ಶೇ 20ರಷ್ಟು ಸಬ್ಸಿಡಿ ನೀಡುತ್ತೇವೆ. ಈ ಭರವಸೆಯಿಂದ ಕುಮಾರಸ್ವಾಮಿ ಹಿಂದೆ ಸರಿಯುವುದಿಲ್ಲ ಎನ್ನುವ ವಿಶ್ವಾಸ ಕೂಡ ಇದೆ' ಎಂದು ತಿಳಿಸುವ ಮೂಲಕ ಎಚ್‌ಡಿಕೆ ಅವರ ಸವಾಲು ಸ್ವೀಕರಿಸಿದ್ದಾರೆ.

ಯಾವುದೇ ಉದ್ದಿಮೆ ಇರಲಿ, ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಮಾನ ನೀತಿ ಅನುಸರಿಸಬೇಕು ಎನ್ನುವುದು ಕರ್ನಾಟಕದ ಪ್ರತಿಪಾದನೆಯಾಗಿದೆ. ಇದು ಸಹಜನ್ಯಾಯದ ತತ್ವವಾಗಿದ್ದು, ಇದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ಪರವಾದ ಧೋರಣೆ ಸರಿಯಲ್ಲ
ರಾಜ್ಯ ಸರ್ಕಾರವು ಉದ್ಯಮ ಸ್ನೇಹಿ ನೀತಿಗಳನ್ನು ಅನುಸರಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ಗುಜರಾತ್ ಪರ ಧೋರಣೆ ತೋರಿಸುತ್ತಿದೆ. ನಾವು ಇದನ್ನಷ್ಟೇ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.
ಕೇಂದ್ರ ಸರ್ಕಾರ ಗುಜರಾತ್ ರಾಜ್ಯದಲ್ಲಿ ಹೊಸ ಕೈಗಾರಿಕೆ ಘಟಕ ಸ್ಥಾಪನಗೆ ಅತ್ಯಧಿಕ ಸಬ್ಸಿಡಿ ನೀಡಿದೆ. ಗುಜರಾತ್ ಗೆ ಮಾತ್ರ ಹೀಗೆ ಹೆಚ್ಚು ಆರ್ಥಿಕ ಉತ್ತೇಜನ ನೀಡುವುದು ಸರಿ ಎಂದಾದರೆ, ಅದೇ ನೀತಿಯನ್ನು ಎಲ್ಲ ರಾಜ್ಯಗಳಿಗೂ ಮುಂದುವರೆಸಲಿ ಎಂದು ಇತ್ತೀಚೆಗೆ ಎಂಬಿ ಪಾಟೀಲ್ ಆಗ್ರಹಿಸಿದ್ದರು.












Click it and Unblock the Notifications