ಕುಮಾರಣ್ಣ ಕಿಂಗ್ ಮೇಕರ್: ನ್ಯೂಸ್‌ಫಸ್ಟ್ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬೆಂಗಳೂರು, ಏಪ್ರಿಲ್. 26: ರಾಜ್ಯದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಬೆನ್ನಲ್ಲೇ ಹಲವು ಸುದ್ದಿ ಸಂಸ್ಥೆಗಳು, ರಾಜಕೀಯ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಈಗಾಗಲೇ ಹಲವು ಸಮೀಕ್ಷೆಗಳು ಅತಂತ್ರ ಸರ್ಕಾರ ಎಂಬ ಅಂಶವನ್ನು ಬೊಟ್ಟು ಮಾಡಿವೆ. ಮುಂಬರುತ್ತಿರುವ ಸಮೀಕ್ಷೆಗಳು ಇದೇ ಅಂಶವನ್ನು ತಿಳಿಸುತ್ತಿವೆಯೇ ಎಂಬುದನ್ನು ನೋಡೋಣ.
ಇದರ ನಡುವೆ ಕನ್ನಡ ಸುದ್ದಿವಾಹಿನಿ ನ್ಯೂಸ್‌ಫಸ್ಟ್ ದೇಶದ ಪ್ರತಿಷ್ಠಿತ ಚುನಾವಣಾ ಸಮೀಕ್ಷಾ ಸಂಸ್ಥೆ ಮ್ಯಾಟ್ರಿಜ್ ನ್ಯೂಸ್ ಕಮ್ಯೂನಿಕೇಷನ್ ಜೊತೆಯಾಗಿ ರಾಜ್ಯಾದ್ಯಂತ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ಯಾರಿಗೆ ಮತದಾರ ಜೈ ಎನ್ನುತ್ತಾನೆ, ಮತ್ತೆ ರಾಜ್ಯದಲ್ಲಿ ಬಿಜೆಪಿ ಅರಳಲಿದೆಯೇ, ಮುದುಡಲಿದೆಯೇ ಎಂಬ ಬಗ್ಗೆ ಈ ಸಮೀಕ್ಷೆ ಉತ್ತರ ನೀಡಲಿದೆ.

ನ್ಯೂಸ್‌ಫಸ್ಟ್ - ಮ್ಯಾಟ್ರಿಜ್ ಸಮೀಕ್ಷೆಯನ್ನು ರಾಜ್ಯದ 224 ಕ್ಷೇತ್ರಗಳಲ್ಲಿ ಕಳೆದ ತಿಂಗಳು ಮಾರ್ಚ್ 29 ರಿಂದ ಏಪ್ರಿಲ್ 20 ರ ನಡುವೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ 56 ಸಾವಿರ ಮತದಾರರು ಭಾಗಿಯಾಗಿದ್ದಾರೆ ಎಂದು ಸುದ್ದುವಾಹಿನಿ ತಿಳಿಸಿದೆ. ಸಮೀಕ್ಷೆಯ ಪ್ರಕಾರ ಜಾತ್ಯಾತೀತ ಜನತಾದಳ ಈ ಬಾರಿಯೂ ಕಿಂಗೆಗ್ ಮೇಕರ್ ಆಗಲಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.
ಸಮೀಕ್ಷೆ ಪ್ರಕಾರ ಆಡಳಿತರೂಢ ಬಿಜೆಪಿ ಪಕ್ಷವೂ 96 ರಿಂದ 106 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದರೆ, ಪ್ರತಿಪಕ್ಷ ಕಾಂಗ್ರೆಸ್ 84 ರಿಂದ 94 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಹಾಗೆಯೇ ಕಿಂಗ್ ಮೇಕರ್ ಆಗಲಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ 29 ರಿಂದ 34 ಸ್ಥಾನಗಳನ್ನ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

*ನ್ಯೂಸ್‌ಫಸ್ಟ್ - ಮ್ಯಾಟ್ರಿಜ್ ಸಮೀಕ್ಷೆ*
ಬಿಜೆಪಿ: 96 - 106
ಕಾಂಗ್ರೆಸ್: 84 - 94
ಜೆಡಿಎಸ್: 29 - 34
ಇತರರು: 2 - 7
ಇನ್ನು, ಟಿವಿ9 ಮತ್ತು ಸಿ-ವೋಟರ್ ನಡೆಸಿದ್ದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 106 ರಿಂದ 116 ಸ್ಥಾನಗಳನ್ನು ಗೆಲ್ಲಬಹುದು. ಆಡಳಿತಾರೂಢ ಬಿಜೆಪಿ 79 ರಿಂದ 89 ಸ್ಥಾನಗಳನ್ನ ಗೆಲ್ಲಿಲಿದೆ ಎಂದು ಅಂದಾಜಿಸಲಾಗಿತ್ತು. ಜೆಡಿಎಸ್ 24 ರಿಂದ 34 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿತ್ತು.












Click it and Unblock the Notifications