ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯ ಸುಧಾರಣೆಗಾಗಿ ವಿಶೇಷ ಮಾಸ್ಟರ್ ಪ್ಲಾನ್: ಬಸವರಾಜ ಬೊಮ್ಮಾಯಿ
ಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ 236 ನಮ್ಮ ಕ್ಲಿನಿಕ್ ಆರಂಭಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು, ಫೆಬ್ರವರಿ 7: ಬೆಂಗಳೂರು ನಗರದಲ್ಲಿ ಸಮಗ್ರವಾಗಿ ರಾಜಕಾಲುವೆಯನ್ನು ಪುನರ್ನಿಮಾಣ ಮಾಡಲು ಐಐಎಸ್ ಸಿ ಸೇರಿದಂತೆ ಇತರೆ ವರದಿಗಳನ್ನು ಆಧರಿಸಿ ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯನ್ನು ಸುಧಾರಣೆಗಾಗಿ ವಿಶೇಷವಾದ ಮಾಸ್ಟರ್ ಪ್ಲಾನ್ ನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡದ ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣಾಗೊಳಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಹೊಸ ರಸ್ತೆಗಳು , 3 ರೀತಿಯ ಚರಂಡಿ ವ್ಯವಸ್ಥೆಗಳನ್ನು ಅನುದಾನ ನೀಡಿ, ನಿರ್ಮಿಸಿ ವಾರ್ಡ್ ನ ನೀರು ಬೆಂಗಳೂರಿನಿಂದ ಆಚೆ ಹರಿಯುವಂತೆ ನಿರ್ವಹಿಸಲಾಗಿದೆ. ಕೆಲವು ದೊಡ್ಡ ಅಡೆತಡೆಗಳನ್ನು ನಿವಾರಿಸಲು ಹಲವು ತಾಂತ್ರಿಕ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿ ಮಳೆಯಿಂದ ನಗರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ 2000 ಕೋಟಿ ರೂ. ವೆಚ್ಚದಲ್ಲಿ ಹೊಸ ರಾಜಕಾಲುವೆಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರು ನಗರ ಬೆಳೆಯುತ್ತಿದೆ. ಪ್ರತಿ ದಿನ 5000 ಕ್ಕಿಂತ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತಿವೆ. ಜನಸಂಖ್ಯೆ 1.25 ಕೋಟಿ ಇದ್ದರೆ, ವಾಹನಗಳ ಸಂಖ್ಯೆ 1.6 ಕೋಟಿ ಇದೆ. ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು ಹೊಸ ವ್ಯವಸ್ಥೆ ರೂಪಿಸಲಾಗಿದ್ದು, ಕೇವಲ ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರು ನಗರದ ವಾಹನ ದಟ್ಟಣೆಯಲ್ಲಿ ಸುಗಮಗೊಳಿಸಲಾಗಿದೆ. ನಗರದ ವಾಹನ ದಟ್ಟಣೆಯ ನಿವಾರಣೆಗೆ ವಿಶೇಷ ಆಯುಕ್ತರನ್ನು ನೇಮಿಸಲಾಗಿದ್ದು, ವಾಹನ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ. ರಸ್ತೆಗಳು, ಪಾರ್ಕ್ ಗಳು,ಶಾಲೆಗಳು, ಆಸ್ಪತ್ರೆಗಳು ಅಭಿವೃಧ್ಧಿಯಾಗುತ್ತಿದೆ ಎಂದರು.

ಇಂದು 108 ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಜನರಿಗೆ ಆರೋಗ್ಯ ಹದಗೆಟ್ಟಾಗ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಸಾಮರ್ಥ್ಯವಿಲ್ಲದವರು, ಬಡಜನರಿಗೆ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ ಪ್ರಾರಂಭಿಸಲಾಗಿದೆ. ಇದು ಸ್ಪಂದನಾಶೀಲ ಸರ್ಕಾರ. ಎಲ್ಲ ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ 236 ನಮ್ಮ ಕ್ಲಿನಿಕ್ ಆರಂಭಿಸಲಾಗುವುದು. ಆರೋಗ್ಯ ತಪಾಸಣೆ, ಔಷಧಿ, ಅವಶ್ಯಕ ಟೆಸ್ಟಗಳು, ಟೆಲಿಮೆಡಿಸನ್ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗಿದೆ. ತಪಾಸಣೆಯ ಜೊತೆಗೆ ಆಧುನಿಕ ಚಿಕಿತ್ಸಾ ವ್ಯವಸ್ಥೆಯನ್ನು ಉಚಿತವಾಗಿ ಜನರಿಗೆ ಪೂರೈಸುವ ನಮ್ಮ ಕ್ಲಿನಿಕ್ , ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಣಬಹುದಾಗಿದೆ ಎಂದರು.

ಸಬ್ ಅರ್ಬನ್ ರೈಲು ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಬೆಂಗಳೂರು ಹೊರ ವಲಯದಲ್ಲಿ ಸ್ಯಾಟಿಲೈಟ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭವಾಗಿದೆ. ಫೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣದಲ್ಲಿರುವ ತಾಂತ್ರಿಕ ಹಾಗೂ ಕಾನೂನಾತ್ಮಕ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದ್ದು, ನಂತರ ಈ ಕಾಮಗಾರಿಯನ್ನೂ ಪ್ರಾರಂಭಿಸಲಾಗುವುದು. ಬೆಂಗಳೂರಿನ ಮೆಟ್ರೋ 3 ನೇ ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಮೈಕ್ರೋ ಹಾಗೂ ಮ್ಯಾಕ್ರೋ ಹಂತದಲ್ಲಿ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ ಎಂದರು.












Click it and Unblock the Notifications