ಕರ್ನಾಟಕ ಸರ್ಕಾರದಿಂದ ಸಂವಿಧಾನದ ಪ್ರಸ್ತಾವನೆ ಓದುವ ಬೃಹತ್ ಕಾರ್ಯಕ್ರಮ: ದೇಶ, ವಿದೇಶಗಳಿಂದ ಕೋಟ್ಯಂತರ ಜನರು ಭಾಗಿ
ಬೆಂಗಳೂರು, ಸೆಪ್ಟೆಂಬರ್ 15: ಕರ್ನಾಟಕ ಸರ್ಕಾರದಿಂದ ಶುಕ್ರವಾರ 'ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ' ಆಚರಣೆಯ ಅಂಗವಾಗಿ ಸಂವಿಧಾನದ ಪೀಠಿಕೆ ಓದುವ ಮೆಗಾ ಕಾರ್ಯಕ್ರಮವನ್ನು ಆಯೋಜಿಸಿಸಲಾಗಿತ್ತು. ಭಾರತ ಮತ್ತು ವಿದೇಶಗಳಿಂದ ಏಕಕಾಲದಲ್ಲಿ ಕೋಟ್ಯಂತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಇತರ ಹಲವಾರು ಅತಿಥಿಗಳೊಂದಿಗೆ ಇಲ್ಲಿನ ವಿಧಾನಸೌಧದ ಭವ್ಯ ಮೆಟ್ಟಿಲುಗಳಿಂದ ಪೀಠಿಕೆಯನ್ನು ಓದುವ ಮೂಲಕ ಆಚರಣೆಗೆ ಚಾಲನೆ ನೀಡಿದರು. ಅವರ ಮುಂದೆ ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಜನರು ನೆರೆದಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರವು ಐದು ಭರವಸೆಗಳಲ್ಲಿ (ಚುನಾವಣಾ ಪೂರ್ವ ಭರವಸೆ) ನಾಲ್ಕನ್ನು ಈಡೇರಿಸಿದೆ ಮತ್ತು 'ನುಡಿದಂತೆ ನಡೆದಿದೆ. ಸಂವಿಧಾನದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಮುಖ್ಯಮಂತ್ರಿ ಹೇಳಿದರು.
ಸಂವಿಧಾನದ ಪೀಠಿಕೆಯನ್ನು ಓದಲು ದೇಶ ಮತ್ತು ವಿದೇಶದ ಎಲ್ಲಾ ವರ್ಗಗಳ ಸುಮಾರು 2.28 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಕರ್ನಾಟಕ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಬುಧವಾರ ಹೇಳಿದ್ದರು. ಕಾರ್ಯಕ್ರಮಕ್ಕೆ ದೇಶ ಮತ್ತು ವಿದೇಶದಿಂದ 2,27,81,894 ಜನರು ಆನ್‌ಲೈನ್ ನೋಂದಣಿ ಮಾಡಿದ್ದಾರೆ. 5 ಅಥವಾ 10 ಲಕ್ಷ ಜನರು ನೋಂದಾಯಿಸಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವು. ಆದರೆ ಇದು ನಮ್ಮ ಎಲ್ಲೆ ಮೀರಿದೆ ಎಂದು ಅವರು ಹೇಳಿದರು.
ಕಾರ್ಪೊರೇಟ್, ಖಾಸಗಿ, ಸರ್ಕಾರಿ ಮತ್ತು ಬ್ಯಾಂಕಿಂಗ್ ವಲಯದವರು, ಕೈಗಾರಿಕೆಗಳ ಜನರು ಮತ್ತು ಹಲವಾರು ದೇಶಗಳ ಎನ್‌ಆರ್‌ಐಗಳು ಭಾಗವಹಿಸಲು ಮುಂದೆ ಬಂದಿದ್ದಾರೆ ಮತ್ತು ನೋಂದಾಯಿಸಿಕೊಂಡಿದ್ದರು. ಜನರು, ವಿಶೇಷವಾಗಿ ಯುವಕರು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಲ್ಪನೆಯನ್ನು ಅರ್ಥಮಾಡಿಕೊಂಡು, ಆ ಮೂಲಕ ಘನತೆ, ಸ್ವಾತಂತ್ರ್ಯ ಮತ್ತು ಸಮಾನತೆಯಿಂದ ಜೀವನ ನಡೆಸಲು ಪೀಠಿಕೆಯ ಮುಖ್ಯ ಉದ್ದೇಶವನ್ನು ತಿಳಿದುಕೊಳ್ಳುವುದು ಉದ್ದೇಶವಾಗಿದೆ ಎಂದು ಮಹದೇವಪ್ಪ ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಜಾಗತಿಕವಾಗಿ 1.5 ಕೋಟಿ ಜನರು ಇಂದು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದಾರೆ. ಈ ಬಾರಿಯ ಅಂತರಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ನಮ್ಮ ಗುರಿ ಯುವ ಜನತೆಯ ಸಬಲೀಕರಣ ಆಗಬೇಕು ಎಂಬ ಉದ್ದೇಶದೊಂದಿಗೆ ನಮ್ಮ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷನ್ನಾಗಿ ನಾನು ಜವಾಬ್ದಾರಿ ತೆಗೆದುಕೊಂಡ ದಿನದಂದು ಕಾಂಗ್ರೆಸ್ ಕಾರ್ಯಕರ್ತರು ಭಾರತ ಸಂವಿಧಾನ ಪೀಠಿಕೆಯನ್ನು ಓದುವ ಮೊದಲ ಕಾರ್ಯಕ್ರಮವನ್ನು ಮಾಡಲಾಗಿತ್ತು. ಇಂದು ಸಂವಿಧಾನ ಪೀಠಿಕೆ ಓದುವ ಎರಡನೇ ಹೆಜ್ಜೆ ಮತ್ತು ಯಶಸ್ಸಿನಲ್ಲಿ ನಾವಿದ್ದೇವೆ. ನಮ್ಮ ಭವಿಷ್ಯದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯುವ ಸಮುದಾಯ ಮತ್ತು ಮಕ್ಕಳ ಪಾತ್ರದ ಬಗ್ಗೆ ನಾವೆಲ್ಲರೂ ಯೋಚಿಸಬೇಕಾಗಿದೆ.
ಸುರಕ್ಷಿತ ಯುವ ಸಮುದಾಯ ಪ್ರಜಾಪ್ರಭುತ್ವ ದೇಶದ ಒಂದು ದೊಡ್ಡ ಆಸ್ತಿ ಇದ್ದಂತೆ. ಉತ್ತಮ ಶಿಕ್ಷಣದ ಮೂಲಕ ಯುವಪೀಳಿಗೆಗೆ ಶಕ್ತಿ ತುಂಬಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುವ ಮೂಲಕ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸೋಣ. ಇಡೀ ವಿಶ್ವದಲ್ಲೇ ಭಾರತದ ಪ್ರಜಾಪ್ರಭುತ್ವಕ್ಕೆ ವಿಶಿಷ್ಟ ಸ್ಥಾನವಿದೆ. ನಮ್ಮ ಸಂವಿಧಾನದ ಆಶಯಗಳೂ ವಿಶಿಷ್ಟವಾಗಿವೆ. ನೀವೂ ನಾವೆಲ್ಲರೂ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡೋಣ ಎಂದು ತಿಳಿಸಿದರು.












Click it and Unblock the Notifications